ಸಂಗೊಳ್ಳಿ ರಾಯಣ್ಣನ ಬದುಕು ಆದರ್ಶವಾಗಲಿ
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕರೆ: ರಾಯಣ್ಣನ ಮೂರ್ತಿ ಅನಾವರಣ
ವೆಂಕಟೇಶ ದೇಶಪಾಂಡೆ
ಅಥಣಿ 20: ತಾಯ್ನಾಡಿಗಾಗಿ ಹೋರಾಡಿದ ತಾಯ್ನಾಡನ್ನು ಪ್ರೀತಿಸಿದ ವೀರ ಸಂಗೋಳ್ಳಿ ರಾಯಣ್ಣನ ಬದುಕು ನಮಗೆ, ನಮ್ಮ ಮಕ್ಕಳಿಗೆ ಆದರ್ಶವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ವೀರ ಸಂಗೋಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ಕರ್ನಾಟಕದ ನೆಲ, ಜಲ, ಭಾಷೆ ಇವುಗಳನ್ನು ರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದಾಗಿದೆ ಆದರೆ ರಾಜಕಾರಣಕ್ಕಾಗಿ ಮರಾಠಿಗರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ವಿವಾದ ಹುಟ್ಟುಹಾಕಿ ಗೊಂದಲ ಮೂಡಿಸುತ್ತಿದ್ದಾರೆ. ಬೆಳಗಾವಿ ಕರ್ನಾಟಕದ್ದು ಎಂದು ಮಹಾಜನ ಆಯೋಗ ದಶಕಗಳ ಹಿಂದೆಯೇ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ವರದಿ ನೀಡಿದೆ ಆದರೆ ಮಹಾರಾಷ್ಟ್ರದ ಕೆಲವರು ಕಾಲು ಕರೆದು ವಿವಾದ ಹುಟ್ಟು ಹಾಕುತ್ತಿದ್ದಾರೆ. ಬೆಳಗಾವಿ ಅಲ್ಲ ಒಂದಿಂಚು ಜಾಗವನ್ನೂ ಕೂಡ ನಾವು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲ್ಲ ಎಂದ ಅವರು ವೀರ ಸಂಗೋಳ್ಳಿ ರಾಯಣ್ಣನಂತೆ ನಮ್ಮ ನೆಲ, ಜಲ, ಭಾಷೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಇದಕ್ಕಾಗಿ ಕನ್ನಡಿಗರೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ವೀರ ಸಂಗೋಳ್ಳಿ ರಾಯಣ್ಣ ಆಕಸ್ಮಿಕವಾಗಿ ಹಾಲುಮತ ಸಮಾಜದಲ್ಲಿ ಜನ್ಮ ತಾಳಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಎಸ್.ಕೆ. ಬುಟಾಳಿ ಸಂಗೋಳ್ಳಿ ರಾಯಣ್ಣನ ಮೇಲಿನ ಅಭಿಮಾನದಿಂದ ತನ್ನ ಸ್ವಂತ ಖರ್ಚಿನಲ್ಲಿ ಕಂಚಿನ ಪುತ್ಥಳಿ ಅನಾವರಣಗೊಳಿಸಿದ್ದಾರೆ ಅವರಿಗೆ, ಅವರ ಪರಿವಾರದ ಎಲ್ಲ ಸದಸ್ಯರನ್ನು ನಾನು ಹೃದಯ ತುಂಬಿ ಅಭಿನಂದಿಸುತ್ತೇನೆ ಎಂದರು. ಸಂಗೋಳ್ಳಿ ರಾಯಣ್ಣನಂತವರು ಮತ್ತೆ ಮತ್ತೆ ಹುಟ್ಟಿ ಬರುವುದಿಲ್ಲ ಆದರೆ ಅವರು ಮಾಡಿದ ಸತ್ಕಾರ್ಯಗಳು ಮಾತ್ರ ಈ ಭೂಮಿ ಇರುವವರೆಗೂ ಜೀವಂತವಾಗಿರುತ್ತವೆ ಅಂತಹ ಸತ್ಕಾರ್ಯಗಳು ನಮ್ಮ ಜೀವನದ ದಾರಿ ದೀಪವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವೀರ ಸಂಗೋಳ್ಳಿ ರಾಯಣ್ಣನ ಮೂತರ್ಿ ಸ್ಥಾಪನೆಗೆ ಕಾರಣರಾದ ಎಸ್.ಕೆ.ಬುಟಾಳಿ ಹಾಗೂ ಅವರ ಪರಿವಾರ ಮತ್ತು ಅವರ ಅಭಿಮಾನಿಗಳನ್ನು ಅಭಿನಂದಿಸಿದರು. ಸಂಗೋಳ್ಳಿ ರಾಯಣ್ಣನ ಮೂರ್ತಿ ಅನಾವರಣಗೊಂಡರೆ ಸಾಕಾಗದು ಅವರು ನೆಲ, ಜಲ, ಭಾಷೆಗಾಗಿ ಮಾಡಿದ ಹೋರಾಟ, ಸತ್ಕಾರ್ಯಗಳ ಬಗೆಗೂ ಬೆಳಕು ಚೆಲ್ಲುವಂತಾಗಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಸ್.ಕೆ.ಬುಟಾಳಿ ಮಾತನಾಡಿ, ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿರುವುದು ಸಂಗೋಳ್ಳಿ ರಾಯಣ್ಣನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಎಂದ ಅವರು ಖುರ್ಚಿ ತುಂಬಿಸಲು ನಾವು ಒತ್ತಾಯದಿಂದ ಕರೆ ತಂದಿಲ್ಲ ಅವರಾಗಿಯೇ ಬಂದಿರುವುದು ಈ ಕಾರ್ಯಕ್ರಮದ ವಿಶೇಷ ಎಂದರು.
ಹಣಮಾಪೂರದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹಾಲುಮತ ಸಮಾಜದ ವೀರ, ಧೀರ ಐತಿಹಾಸಿಕ ಪುರುಷ ಸಂಗೋಳ್ಳಿ ರಾಯಣ್ಣನ ಬದುಕು ಶಕ್ತಿ, ಪ್ರೇರಣೆಯಾಗಿದೆ. ತಾಯ್ನಾಡನ್ನು ಪ್ರೀತಿಸಿ ರಕ್ಷಿಸಲು ನಾವೆಲ್ಲ ಸಂಗೋಳ್ಳಿ ರಾಯಣ್ಣನಂತಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ರಾಜು ಕಾಗೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಹಾಲುಮತ ಸಮಾಜದ ಅಧ್ಯಕ್ಷ ರಾವಸಾಹೇಬ ಬೆವನೂರ, ಕಾಂಗ್ರೆಸ್ ಮುಖಂಡರಾದ ಸಚೀನ ಬುಟಾಳಿ, ಶಿವು ಗುಡ್ಡಾಪೂರ, ಶ್ರೀಕಾಂತ ಪೂಜಾರಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರಾಯಣ್ಣನ ಅಭಿಮಾನಿಗಳು ಭಾಗವಹಿಸಿದ್ದರು