2ಎ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ಧರಣಿ ಸತ್ಯಾಗ್ರಹ
ಸಿಂದಗಿ 12: ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷ ಲಿಂಗಾಯತರಿಗೆ 2ಎ ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಒಬಿಸಿ ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ, ರಾಜ್ಯ ಸರ್ಕಾರದ ನಿರ್ಲಕ್ಷಕ್ಕೆ ಅಸಮಾಧಾನಗೊಂಡು ಬೆಳಗಾವಿಯ ಸುವರ್ಣ ವಿಧಾನಸೌಧದ ಅಧಿವೇಶನ ಸಂದರ್ಭದಲ್ಲಿ ಡಿ.13 ರಂದು ಬೆಳಿಗ್ಗೆ 10 ಕ್ಕೆ ಗಾಂಧಿಭವನದಿಂದ ರಾ್ಯಲಿ ಮೂಲಕ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮಳ ಐತಿಹಾಸಿಕ ವೃತ್ತದಲ್ಲಿ ಬೃಹತ್ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.
ಪಂಚಮಸಾಲಿ ಸಮಾಜದ, ಕೂಡಲಸಂಗಮ ಗುರುಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೋರಾಟದ ನೇತೃತ್ವದ ಜೊತೆಗೆ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ನಾಡಿನ ಮೂಲೆಮೂಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಂಚಮಸಾಲಿ ಬಂಧುಗಳು ಆಗಮಿಸಲಿದ್ದಾರೆ. ಆದ್ದರಿಂದ ಸಮಾಜದ ಋಣ ತೀರಿಸಲು ಸಿಂದಗಿ ತಾಲೂಕಿನ ಎಲ್ಲ ಬಂಧುಗಳು ಸ್ವಯಂ ಪ್ರೇರಿತರಾಗಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ಸಮಾಜದ ಅಧ್ಯಕ್ಷ ಎಂ.ಎಂ. ಹಂಗರಗಿ ಹಾಗೂ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಅವರು ಜಂಟಿಯಾಗಿ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.