ಬೆಳಗಾವಿ

ಕೇಸರ್ಕರ್ ದಂಪತಿ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

ಕೇಸರ್ಕರ್ ದಂಪತಿ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ


ಬೆಳಗಾವಿ  21: ಮಹಾರಾಷ್ಟ್ರದ ಸಾಂಗ್ಲಿ-ಕುಪ್ವಾಡ್‌ನಲ್ಲಿ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲದ ಮೋಹನ್ ಕೇಸರ್ಕರ್ ಹಾಗೂ ಅವರ ಪತ್ನಿ ಮನೀಷಾ ಕೇಸರ್ಕರ್ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಮರಾಠಾ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.  

ಸಾಂಗ್ಲಿಯಲ್ಲಿ ಜೀವನೋಪಾಯಕ್ಕಾಗಿ ನೆಲೆಸಿದ್ದ ದಂಪತಿ, ಕುಪ್ವಾಡ್‌ನ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯವರೊಂದಿಗೆ ನಡೆದ ಗಲಾಟೆಯ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮನೀಷಾ ಕೇಸರ್ಕರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೋಹನ್ ಕೇಸರ್ಕರ್ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದಂಪತಿಯ ಸಾವಿನಿಂದ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.  

ಘಟನೆಯನ್ನು ಖಂಡಿಸಿ ಮರಾಠಾ ಸಮಾಜದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬೆಳಗಾವಿಯಲ್ಲಿ ಮೆರವಣಿಗೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.  

ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ, ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಆರೋಪಪಟ್ಟಿಯನ್ನು ಶೀಘ್ರ ಸಲ್ಲಿಸುವುದರ ಜೊತೆಗೆ ಹರ್ಷದ ನಿಂಬಾಳ್ಕರ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಅನಾಥರಾದ ಮನಾಲಿ ಹಾಗೂ ಮನೋಜ್ ಅವರ ಪಾಲನೆ, ಶಿಕ್ಷಣ ಮತ್ತು ಭವಿಷ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು. ಇಬ್ಬರು ಮಕ್ಕಳಿಗೆ ಮಾಸಿಕ ?10,000 ಆರ್ಥಿಕ ನೆರವು ನೀಡಬೇಕು ಹಾಗೂ ಶಿಕ್ಷಣ ಪೂರ್ಣಗೊಂಡ ಬಳಿಕ ನಿಯಮಾನುಸಾರ ಸರ್ಕಾರಿ ಉದ್ಯೋಗ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.  

ದೂರುದಾರರು, ಅನಾಥ ಮಕ್ಕಳು ಹಾಗೂ ಪ್ರಮುಖ ಸಾಕ್ಷಿಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು. ಕೇಸರ್ಕರ್ ಕುಟುಂಬದ ಮೂಲ ಬೆಳಗಾವಿ ಜಿಲ್ಲೆಯಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗೆ ವಿಶೇಷ ಗಮನಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಮಾಲೋಜಿ ಅಶ್ತೇಕರ್, ಗುಣವಂತ್ ಪಾಟೀಲ್, ರಮಾಕಾಂತ್ ಕೊಂಡುಸ್ಕರ್, ಆರ್‌.ಎಂ. ಚೌಗುಲೆ, ಭರತ್ ಪಾಟೀಲ್, ಸಾಗರ್ ಪಾಟೀಲ್, ಸುನಿಲ್ ಬೊಕ್ಡೆ, ಮಾಜಿ ಮೇಯರ್ ಸರಿತಾ ಪಾಟೀಲ್, ರೇಣು ಕಿಲ್ಲೇಕರ್, ಸುಧಾ ಭಾತಕಾಂಡೆ, ಕಪಿಲ್ ಭೋಸಲೆ, ಶರದ್ ಪಾಟೀಲ್ ಸೇರಿದಂತೆ ಮರಾಠಾ ಸಮಾಜದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ