ಕಾಗವಾಡ

ಮರಾಠಾ ಸಮಾಜ ಪಕ್ಷಾತೀತವಾಗಿ ಒಂದಾಗಬೇಕಿದೆ: ಸಂತೋಶ ಲಾಡ

ಮರಾಠಾ ಸಮಾಜ ಪಕ್ಷಾತೀತವಾಗಿ ಒಂದಾಗಬೇಕಿದೆ: ಸಂತೋಶ ಲಾಡ

ಲೋಕದರ್ಶನ ವರದಿ 

ಕೆಂಪವಾಡದಲ್ಲಿ ಮರಾಠಾ ಸಮಾಜದ ಚಿಂತನ-ಮಂಥನ ಸಭೆ; 

ಕಾಗವಾಡ 29: ಮರಾಠಾ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿದೆ. ದೇಶದಲ್ಲಿನ ಅತ್ಯಂತ ಕಟ್ಟ ಕಡೆಯ ಸ್ಥಾನದಲ್ಲಿ ಮರಾಠಾ ಸಮುದಾಯವಿದ್ದು, ಇದನ್ನು ಮೇಲೆತ್ತಲು ಸಂಘಟನೆಯ ಅವಶ್ಯಕತೆ ಇದೆ. ಆದ್ದರಿಂದ ಮರಾಠಾ ಬಾಂಧವರು ಪಕ್ಷಾತೀತವಾಗಿ ಒಂದಾಗಬೇಕೆಂದು ಕಾರ್ಮಿಕ ಸಚಿವ ಹಾಗೂ ಮರಾಠಾ ಸಮಾಜದ ಮುಖಂಡ ಸಂತೋಷ ಲಾಡ ಹೇಳಿದರು.  

ಅವರು ರವಿವಾರ ದಿ. 28 ರಂದು ಸಂಜೆ ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಕಾರ್ಖಾನೆಯ ಆವರಣದಲ್ಲಿ ನಡೆದ ಕಾಗವಾಡ ಹಾಗೂ ಅಥಣಿ ತಾಲೂಕಾ ಮರಾಠಾ ಸಮಾಜದ ಚಿಂತನ ಮಂಥನ ಸಭೆಯಲ್ಲಿ ಮಾತನಾಡುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಇತಿಹಾಸವನ್ನು ತಿರುಚಿ ಮರಾಠಾ ಸಮಾಜದ ಯುವಕರ ದಾರಿ ತಪ್ಪಿಸುತ್ತಿರುವವರ ಮಾತನ್ನು ನಂಬಬೇಡಿ. ಇಂದು ನಮ್ಮ ಸಮಾಜದಲ್ಲಿ ಒಕ್ಕಟ್ಟಿನ ಕೊರತೆಯಿಂದಾಗಿ ಸಾಕಷ್ಟು ಹಿಂದಿದೆ. ಇಲ್ಲಿಯ ವರೆಗೆ ಬಂದಿರುವ ಯಾವುದೇ ಸರ್ಕಾರ ಮರಾಠಾ ಸಮಾಜಕ್ಕೆ ವಿಶೇಷವಾದುದನ್ನು ಏನನ್ನೂ ಮಾಡಿಲ್ಲ. ಇತರ ಸಮಾಜಕ್ಕಿಂತ ಮರಾಠಾ ಸಮಾಜ ಹಿಂದುಳಿದಿದೆ. ಆದ್ದರಿಂದ ಸಮಾಜದ ಸಂಘಟನೆಗಾಗಿ ಹಣ ನೀಡಲು ಸಾಧ್ಯವಿಲ್ಲದವರು ತಮ್ಮ ಸಮಯವನ್ನು ನೀಡಿ. ಸಮಾಜಕ್ಕೆ ಸಮಯ ನೀಡುವವರು ಹಣ ನೀಡಿದವರಿಗಿಂತ ದೊಡ್ಡವರು. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ಸಮಾಜ ಸೇವೆಯೇ ನನ್ನ ಮೊದಲ ಆದ್ಯತೆಯಾಗಿದೆ. ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಮತ್ತು ಸಮಾಜವನ್ನು ಮೇಲೆತ್ತುವ ಪ್ರಯತ್ನವಾಗಿ ಶ್ರೀಮಂತ ಪಾಟೀಲ ಅವರೊಂದಿಗೆ ಸೇರಿ ಶ್ರಮಿಸುತ್ತಿದ್ದೇನೆ. ರಾಜ್ಯಾದ್ಯಂತ ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕು ಎಂಬ ಹಂಬಲವಿದೆ ಎಂದರು.  

ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಮರಾಠಾ ಸಮುದಾಯ ಒಗ್ಗೂಡಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾವು ಸ್ವಾಭಿಮಾನದಿಂದಲೆ ಬದುಕಬೇಕಿದೆ. ಸ್ವಾಭಿಮಾನದ ಬದಕು ಕಟ್ಟಿಕೊಳ್ಳಲು ನಾವೆಲ್ಲರೂ ಒಕ್ಕಟ್ಟಾಗಬೇಕಿದೆ. ಸಮಾಜದ ಇಂದಿನ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಇದಕ್ಕೆ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳೇ ಕಾರವಾಗಿವೆ. ಆದ್ದರಿಂದ ನಾವೆಲ್ಲರೂ ಪಕ್ಷಾತೀತವಾಗಿ ಒಂದಾಗಿ, ರಾಜಕೀಯವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ ಎಂದರು. ಸಮುದಾಯದ ಏಳಿಗೆಗಾಗಿ ನೂತನ ಶಾಲೆಯೊಂದನ್ನು ಪ್ರಾರಂಭಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಸಮಾಜದ ಏಳಿಗೆಗಾಗಿ ಎಲ್ಲರೂ ಸೇರಿ ಶ್ರಮಿಸೋಣ ಎಂದರು. 

ಪ್ರಕಾಶ ಮೋರೆ ಪ್ರಾಸ್ತಾವಿಕ ಮಾತನಾಡಿದ್ದರು. ಸಮಾಜದ ಮುಖಂಡರಾದ ಅಪ್ಪಾಸಾಬ ಅವತಾಡೆ, ದಿಗ್ವಿಜಯಸಿಂಗ ಪವಾರ-ದೇಸಾಯಿ ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ಡಾ. ರಾಹುಲ ಭೋಸಲೆ, ಅಣ್ಣಾಸಾಹೇಬ ಪವಾರ, ವಿಕ್ರಾಂತ ಭೋಸಲೆ, ಆರ್‌.ಎಂ. ಪಾಟೀಲ, ನಾನಾಸಾಬ ಅವತಾಡೆ, ಭಾಹುಸಾಬ ಜಾಧವ, ಸಿದ್ದು ಪಾಟೀಲ, ಸಂದೀಪ ಪಾಟೀಲ, ಸುಧಾಕರ ಭಗತ, ಸಂಭಾಜಿ ಪಾಟೀಲ, ಅಭಯ ಪಾಟೀಲ ಸೇರಿದಂತೆ ಅಥಣಿ-ಕಾಗವಾಡ ತಾಲೂಕಿನ ಮರಾಠ ಸಮಾಜದ ಬಾಂಧವರು ಉಪಸ್ಥಿತರಿದ್ದರು. ಸಚೀನ ದೇಸಾಯಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ