ಶಿಗ್ಗಾವ್

ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆ : ಅಕ್ಷರದ ಮೂಲಕ ಅರಿವಿನ ಬಾಗಿಲು ತೆರೆದ ಹೆಗ್ಗಳಿಕೆ

ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆ : ಅಕ್ಷರದ ಮೂಲಕ ಅರಿವಿನ ಬಾಗಿಲು ತೆರೆದ ಹೆಗ್ಗಳಿಕೆ

ಶಿಗ್ಗಾವಿ : ಪಟ್ಟಣದ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆ ಅಕ್ಷರದ ಮೂಲಕ ಅರಿವಿನ ಬಾಗಿಲು ತೆರೆದ ಹೆಗ್ಗಳಿಕೆ ಹೊಂದಿದೆ. ಶೈಕ್ಷಣಿಕವಾಗಿ ವಿಶಿಷ್ಟ ಛಾಪು ಮೂಡಿಸಿದ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಅಕ್ಷರದ ಹಸಿವು ಇದ್ದವರಿಗೆ ಜ್ಞಾನಾಮೃತ ನೀಡಿ ಅಮೃತ ಮಹೋತ್ಸವ ಆಚರಣೆಗೆ ಸಜ್ಜುಗೊಂಡಿದೆ.  

  ಬ್ರಿಟಿಷರ ಕಾಲದಲ್ಲಿ ಶೈಕ್ಷಣಿಕ ಅರಿವು ಅಷ್ಟಕ್ಕಷ್ಟೇ ಇತ್ತು. ಇಂಥ ಸಂದರ್ಭದಲ್ಲಿ ನಮ್ಮ ಜನರನ್ನು ಸಾಕ್ಷರರನ್ನಾಗಿಸಬೇಕೆಂಬ ಸಂಕಲ್ಪ ತೊಟ್ಟವರು ಸ್ವಾತಂತ್ರ್ಯ ಹೋರಾಟಗಾರ ಅನಂತಭಟ್ಟ ಹುರಳಿಕುಪ್ಪಿ. ಅವರು 1946ರಲ್ಲಿ ಪಟ್ಟಣದ ಹಳೆಪೇಟೆಯಲ್ಲಿ ಶ್ರೀ ಗಜಾನನ ಆಂಗ್ಲೋ ವರ್ನಾಕ್ಯುಲರ್ ಶಿಕ್ಷಣ ಸಂಸ್ಥೆ ಆರಂಭಿಸಿದರು. ಐವರು ಬಾಲಕರು ಮತ್ತು ಮೂವರು ಬಾಲಕಿಯರ ಹಾಜರಿಯೊಂದಿಗೆ ಆರಂಭವಾದ ಈ ಸಂಸ್ಥೆಯಲ್ಲಿ ಸದ್ಯ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಗಮನಾರ್ಹ.  

 ಗಜಾನನ ಪ್ರೌಢಶಾಲೆ 1963ರಿಂದ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಪ್ರೌಢಶಾಲೆ ಹೆಸರಿನೊಂದಿಗೆ ಬದಲಾಯಿತು. 1984ರಿಂದ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆರಂಭಗೊಂಡಿತು. ಸದ್ಯ ಪೂರ್ವ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ತರಗತಿಗಳಿವೆ. ಈ ಹಿನ್ನೆಲೆಯಲ್ಲಿ ಈ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ಉನ್ನತ ವ್ಯಾಸಂಗಕ್ಕೆ ಮುಂದಡಿ ಇಡುತ್ತಿದ್ದಾರೆ.  

      ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿರುವ ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ- ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಕೇವಲ ಅಂಕ ಗಳಿಕೆ ಅಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳ ಪೈಕಿ ವಿಜ್ಞಾನ ವಸ್ತು ಪ್ರದರ್ಶನ, ರಸಪ್ರಶ್ನೆ, ಪ್ರಬಂಧ, ಸಾಂಸ್ಕೃತಿಕ ಸ್ಪರ್ಧೆ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. 

     ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆಯನ್ನು ಶಿಗ್ಗಾಂವ ತಾಲೂಕು ಶಿಕ್ಷಣ ಸಮಿತಿ ಮುನ್ನಡೆಸುತ್ತಿದೆ. 45ಕ್ಕೂ ಹೆಚ್ಚಿನ ಕೊಠಡಿಗಳಲ್ಲಿ 50ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ತಮ್ಮ ಪ್ರಾಮಾಣಿಕ ಸೇವೆ ಮುಂದುವರೆಸಿದ್ದಾರೆ. ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಶೈಕ್ಷಣಿಕ ಕಾಳಜಿಯನ್ನು ಮುಂದುವರೆಸಿಕೊಂಡು ಬಂದಿದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬಂತೆ ಜ್ಞಾನಾಮೃತ ಉಣಬಡಿಸಿರುವ ಈ ಶಿಕ್ಷಣ ಸಂಸ್ಥೆ ಈಗ ಅಮೃತ ಗಳಿಗೆಗೆ ಸಾಕ್ಷಿಯಾಗಿದೆ. 



ಭಾಕ್ಸ ಸುದ್ದಿ :  ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಕಾಳಜಿ ಹಿನ್ನೆಲೆಯಲ್ಲಿ ಆರಂಭವಾದ ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ನಿಮಿತ್ತ 12 ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.5ರಂದು ಸಂಜೆ 4 ಗಂಟೆಗೆ ಜರುಗಲಿದೆ. ಒಂದು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸುವರು. ಇದೇ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಗುವುದು. 

ಎನ್‌.ಆರ್‌. ಮಾಮ್ಲೆದೇಸಾಯಿ ಅಧ್ಯಕ್ಷರು, ಶಿಗ್ಗಾಂವ ತಾಲೂಕು ಶಿಕ್ಷಣ ಸಮಿತಿ, ಶಿಗ್ಗಾಂವ. 


 ಭಾಕ್ಸ ಸುದ್ದಿ : ಶ್ರೀಮಂತ ಬಸವಂತರಾವ್ ಬುಳ್ಳಪ್ಪ ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಆಚರಣೆ ನಮಗೆ ಹೆಮ್ಮೆ ಮೂಡಿಸಿದೆ. ಕಡಿಮೆ ಅವಧಿಯಲ್ಲಿ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವುದು ಹಳೆಯ ವಿದ್ಯಾರ್ಥಿಗಳಾದ ನಮಗೆ ಕೃತಜ್ಞತಾ ಭಾವ ಮೂಡಿಸಿದೆ.  

ರಾಘವೇಂದ್ರ ದೇಶಪಾಂಡೆ, ಅಧ್ಯಕ್ಷರು, ಮಾಮ್ಲೆದೇಸಾಯಿ ಹಳೆಯ ವಿದ್ಯಾರ್ಥಿಗಳ ಸಂಘ. 


ಭಾಕ್ಸ ಸುದ್ದಿ : ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗುವ ಹಂತದಲ್ಲಿದ್ದ ನನ್ನಂಥವರಿಗೆ ಮಾಮ್ಲೆದೇಸಾಯಿ ಶಿಕ್ಷಣ ಸಂಸ್ಥೆ ದಾರೀದೀಪವಾಗಿದೆ. ಸಾಕ್ಷ್ಯಚಿತ್ರದ ಮೂಲಕ ಬದುಕು ರೂಪಿಸಿಕೊಂಡಿರುವ ನನಗೆ ಸಂಸ್ಥೆಯ ಬಗ್ಗೆ ಅತಿ ಅಭಿಮಾನವಿದೆ. ಅದಕ್ಕಾಗಿ ಇಲ್ಲಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರಿಗೆ ಆಭಾರಿ ಆಗಿರುವೆ. 

 ಗೂಳಪ್ಪ ಅರಳಿಕಟ್ಟಿ, ಹಳೆಯ ವಿದ್ಯಾರ್ಥಿ ಮುಗಳಿ. 


ಸುದ್ದಿ ಓದಿ