ರಾಷ್ಟ್ರಧ್ವಜ ಅಭಿಯಾನದ ಮೆರವಣಿಗೆಗೆ ಮಾಮನಿ ಚಾಲನೆ
ಸವದತ್ತಿ 12: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರದಂದು ಮನೆ ಮನೆಗೆ ರಾಷ್ಟ್ರಧ್ವಜ ಅಭಿಯಾನದ ಪ್ರಚಾರಾರ್ಥವಾಗಿ ಪಟ್ಟಣದಲ್ಲಿ 3ಸಾವಿರಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಮಾಮನಿ ಕಲ್ಯಾಣ ಮಂಟಪದ ಆವರಣದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು ರಾಷ್ಟ್ರಧ್ವಜ ಅಭಿಯಾನದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ನಾವೆಲ್ಲರೂ ವಿಜೃಂಭಣೆಯಿಂದ ಆಚರಿಸಬೇಕಿದೆ. ಎಲ್ಲ ಸರಕಾರಿ ಕಚೇರಿಗಳಲ್ಲಿ ಮೂರು ದಿನಗಳ ಕಾಲ ಅಲಂಕಾರದೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದರು. ಅದರಂತೆ ಪ್ರತಿ ಮನೆ ಮನೆಗಳ ಮೇಲೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮೂರು ದಿನಗಳ ಕಾಲ ರಾಷ್ಟ್ರಧ್ವಜವನ್ನು ಕಟ್ಟುವ ಮೂಲಕ ಭಾರತ ಮಾತೆಗೆ ಗೌರವ ಸಲ್ಲಿಸಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್ ಕರೀಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಮನಿ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡ ರಾಷ್ಟ್ರಧ್ವಜ ಅಭಿಯಾನದ ಮೆರವಣಿಗೆಯು ಪ್ರಧಾನ ಅಂಚೆ ಕಚೇರಿ, ಗಾಂಧಿಚೌಕ, ಆನಿ ಅಗಸಿ, ಹಳೇ ಬಸ್ನಿಲ್ದಾಣ, ಲಿಂಗರಾಜ ಸರ್ಕಲದಿಂದ ಹೊಸ ಬಸ್ ನಿಲ್ದಾಣದವರೆಗೆ ಸಾಲು ಸಾಲಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗಿಕೊಂಡು ಅಭಿಯಾನಕ್ಕೆ ಮೆರಗು ತಂದರು.
ತಹಸೀಲ್ದಾರ ಜಿ.ಬಿ.ಜಕ್ಕನಗೌಡರ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ತಾ.ಪಂ ಇಓ ಯಶವಂತಕುಮಾರ, ಸಮಾಜ ಕಲ್ಯಾಣಾಧಿಕಾರಿ ಆರ್.ಆರ್.ಕುಲಕರ್ಣಿ, ಎಚ್.ಕೆ.ಕದ್ರಾಪುರ, ಸಹಾಯಕ ಕೃಷಿ ನಿರ್ದೇಶಕ ಅರವಿಂದ ಪಾಟೀಲ, ಹನಮಂತ ಪೆಟ್ಲೂರ, ಸುರೇಶ ಬೆಳವಡಿ, ಸಿಪಿಐ ಕರುಣೇಶಗೌಡ, ಪಿಎಸ್ಐ ಶಿವಾನಂದ ಗುಡಗನಟ್ಟಿ, ಬಿ.ಎನ್.ಹೊಸೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.