ಅಥಣಿ

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ವಿಜಯೋತ್ಸವ

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ವಿಜಯೋತ್ಸವ

ಅಥಣಿ 20: ಭಾರತದ ಐಕ್ಯತೆಗಾಗಿ ಸಮಾನತೆಗಾಗಿ, ಸಮನ್ವಯತೆಗಾಗಿ, ಅಖಂಡತೆಗಾಗಿ, ಸ್ವಾಭಿಮಾನಕ್ಕಾಗಿ, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ ಕುರಿತು ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೊ ಯಾತ್ರೆ ಇಡೀ ದೇಶದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.  

ಅವರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಯಾತ್ರೆಗೆ ಅಥಣಿಯಿಂದಲೂ 150ಕ್ಕೂ ಹೆಚ್ಚು ವಾಹನಗಳಲ್ಲಿ 250ಕ್ಕೂ ಹೆಚ್ಚು ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. 

ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ಅಭಿಮಾನಿಗಳಾದ ನಮಗೆ ಅತೀವ ಸಂತೋಷವಾಗಿದೆ ಎಂದ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾದ ನಾವು ಅವರ ಕಾರ್ಯಕ್ಕೆ ಕೈ ಜೋಡಿಸುತ್ತೇವೆ ಎಂದರು. 

ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಮಾತನಾಡಿ, ಅಥಣಿಯಿಂದ ಭಾರತ ಜೋಡೊ ಯಾತ್ರೆಗೆ 250 ಕಾರ್ಯಕರ್ತರು ಮಾತ್ರ ತೆರಳುತ್ತಿದ್ದೇವೆ ಆದರೆ ಕೆಲವರು ಯಾರನ್ನೂ ಸಂಪರ್ಕಿಸದೆ ಸಾವಿರಾರು ಸಂಖೆ್ಯೆಯಲ್ಲಿ ತೆರಳುತ್ತಿದ್ದೇವೆ ಎಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ ಎಂದ ಅವರು ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು ಎಂದು ಮನವಿ ಮಾಡಿದರು. 

ಬಸವರಾಜ ಬುಟಾಳಿ, ಸತ್ಯಪ್ಪ ಬಾಗೆನ್ನವರ, ಅಸ್ಲಂ ನಾಲಬಂದ, ಸುನಿತಾ ಐಹೊಳೆ, ಸುರೇಶ ಪಾಟೀಲ, ರಾವಸಾಬ ಐಹೊಳೆ, ಸೈಯ್ಯದ ಅಮೀನ್ ಗದ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ