ರಾಣೆಬೆನ್ನೂರ

ದೇವರಗುಡ್ಡ ಮಾಲತೇಶಸ್ವಾಮಿಯ ದರ್ಶನಕ್ಕೆ ಅವಕಾಶ ಮುಕ್ತ

ದೇವರಗುಡ್ಡ ಮಾಲತೇಶಸ್ವಾಮಿಯ ದರ್ಶನಕ್ಕೆ ಅವಕಾಶ ಮುಕ್ತ

ರಾಣೀಬೆನ್ನೂರ 06:  ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಅಪ್ಪಳಿಸಿದ ಕರೋನಾ ಮಹಾಮಾರಿಯ ಹಾವಳಿಯಿಂದಾಗಿ ಧಾರ್ಮಿಕ ಕ್ಷೇತ್ರಗಳು ಸಾರ್ವಜನಿಕವಾಗಿ ಭಕ್ತರಿಗೆ ನಿರ್ಭಂಧಿಸಲ್ಪಟ್ಟಿದ್ದವು ಮತ್ತು ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಧಾರ್ಮಿಕ ಸಂಸ್ಥೆಗಳಿಗೆ ಅನಿವಾರ್ಯವಾಗಿದ್ದರ ಹಿನ್ನಲೆಯಲ್ಲಿ ದೇವರ ದರ್ಶನಾಶೀರ್ವಾದಕ್ಕೆ ಅವಕಾಶವಿರಲಿಲ್ಲ ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು ಸರ್ಕಾರವೂ ಕೂಡಾ ನಿಯಮಾವಳಿಗಳನ್ನು ಸಡಿಲಿಸಿರುವುದರಿಂದ ಸುಕ್ಷೇತ್ರ ದೇವರಗುಡ್ಡದ  ಮಾಲತೇಶ ಸ್ವಾಮಿಯ ದರ್ಶನಾಶೀರ್ವಾದಕ್ಕೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಅವರು ಹೇಳಿದ್ದಾರೆ. 

ಅವರು ಸೋಮವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ಕರೋನಾ ಮಹಾಮಾರಿಯ ಹಾವಳಿಯಿಂದ ದೇಶ ಮತ್ತು ನಾಡಿನ ಜನ-ಜೀವನ ತತ್ತರಿಸಿತ್ತು ಇದರಿಂದ ಯಾವುದೇ ಮಾನಸಿಕ ಶಾಂತಿ ಇಲ್ಲದೇ ಅತೀವ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು  ಭಕ್ತರು ಧಾರ್ಮಿಕ ಕ್ಷೇತ್ರಗಳಿಗಾದರೂ ತೆರಳಿ ದರ್ಶನ ಪಡೆಯಬೇಕೆಂದರೂ ಯಾವುದೇ ಕ್ಷೇತ್ರಗಳ ನೇರ ದರ್ಶನಕ್ಕೆ ಅವಕಾಶವಿಲ್ಲದೇ ಪರಿತಪಿಸುವಂತಾಗಿತ್ತು ಎಂದು ಪೂಜಾರ ಅವರು ಹೇಳಿದರು.  

2 ವರ್ಷಗಳಿಂದ ಸ್ವಾಮಿಯ ನೇರ ದರ್ಶನ ಭಾಗ್ಯವಿಲ್ಲದೇ ಕರುನಾಡಿನ ಮತ್ತು ಇತರೆ ರಾಜ್ಯಗಳ ಅಸಂಖ್ಯಾತ ಲಕ್ಷಾಂತರ ಭಕ್ತರು ನಿರಾಶೆ ಅನುಭವಿಸುತ್ತಿದ್ದರು. ಭಗವಂತನ ಕೃಪೆಯಿಂದ ನಾಡು ಕರೋನಾ ಮುಕ್ತವಾಗುವ ಹಂತದಲ್ಲಿ ಸಾಗಿದೆ. ಅಲ್ಲದೇ ಜನ-ಜೀವನ ಹಂತ-ಹಂತವಾಗಿ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಭವಿಷ್ಯದ ದಿನಗಳಲ್ಲಿ ಸಂಪೂರ್ಣ ಕರೋನಾ ಮುಕ್ತವಾಗಿ ಸಹಜ ಜೀವನ  ಸಾಗಿಸುವಂತಾಗಿ ಪುನ: ಸುಭಿಕ್ಷೆಯ ನಾಡು-ದೇಶ ನಮ್ಮದಾಗಲಿ ಎಂದು ಸ್ವಾಮಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ ಪೂಜಾರ ಅವರು ಕರೋನಾ ಮುಕ್ತವಾಗಿದೆ ಎಂದು ಸರ್ಕಾರದ ನಿಯಮಗಳು ಗಾಳಿಗೆ ತೂರಿ ಮಾಸ್ಕ್‌ ಧರಿಸದೇ, ಸ್ಯಾನಿಟೇಸರ್ ಬಳಸದೇ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮೈಚಳಿ ಬಿಟ್ಟು  ಬೇಕಾಬಿಟ್ಟಿಯಾಗಿ ಸಂಚರಿಸಬಾರದು ಎಂದು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದ್ದಾರೆ.  


ಸುದ್ದಿ ಓದಿ