ಅಥಣಿ

ಮಳಖೇಡವೇ ಜಯತೀರ್ಥರ ಮೂಲ ವೃಂದಾವನ

ಮಳಖೇಡವೇ ಜಯತೀರ್ಥರ ಮೂಲ ವೃಂದಾವನ

ಪಂ.ಬಿಂದುಮಾಧವಾಚಾರ್ಯ ಜೋಶಿ ಸ್ಪಷ್ಟ: ಅನಗತ್ಯ ಗೊಂದಲ ಸೃಷ್ಟಿ ಖಂಡಿಸಿ ಮನವಿ 

ಅಥಣಿ 30: ಮಳಖೇಡದ ಜಯತೀರ್ಥರ ಮೂಲ ವೃಂದಾವನದ ಕುರಿತಾಗಿ ತಪ್ಪು ಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದ್ದು, ಮೂಲ ವೃಂದಾವನ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ನದಿ ತೀರದಲ್ಲಿಯೇ ಇದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಪಂ.ಬಿಂದುಮಾಧವಾಚಾರ್ಯ ಜೋಶಿ ಸ್ಪಷ್ಟಪಡಿಸಿದರು.  

ಅವರು ಅಥಣಿ ಬ್ರಾಹ್ಮಣ ಸಮಾಜ ಬಾಂಧವರಿಂದ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿಲ್ಲ ಎಂದು ರಾಯರಮಠದವರು ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುತ್ತಿರುವುದನ್ನು ಖಂಡಿಸಿ ತಹಶೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು.  

ವಿಶ್ವಕಂಡ ಅಪರೂಪದ ತತ್ವಜ್ಞಾನಿ, ಮಧ್ವಾಚಾರ್ಯರ ಪರಂಪರೆಯ 5ನೇ ಪೀಠಾಧಿಪತಿಗಳಾಗಿದ್ದ ಜಯತೀರ್ಥರು ತತ್ವಜ್ಞಾನಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಮಾನ್ಯರಾದ ಇವರು ಇಡೀ ದೇಶ ಸಂಚಾರ ಮಾಡುತ್ತ ಮಧ್ವ ಸಂದೇಶ ಪ್ರಚಾರ ಮಾಡಿದ ಇವರು ಸುಮಾರು 600 ವರ್ಷಗಳ ಹಿಂದೆ ತಮ್ಮ ಇಹಲೋಕ ಯಾತ್ರೆ ಮುಗಿಸಿ ಮಳಖೇಡದಲ್ಲಿಯೇ ವೃಂದಾವನ ಪ್ರವೇಶ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಆಸ್ತಿಕ ಸಮುದಾಯಕ್ಕೆ ಜಯತೀರ್ಥರ ಮೂಲ ವೃಂದಾವನ ಇರುವ ಮಳಖೇಡ ಶ್ರದ್ಧಾ ಕೇಂದ್ರವಾಗಿದೆ ಎಂದರು.  

ಈ ಕುರಿತಾಗಿ ಅನೇಕ ದಾಸ ಶ್ರೇಷ್ಠರು, ಇತಿಹಾಸಕಾರರು, ಸಂಶೋಧಕರು, ಮಠಾಧೀಶರು ದಾಖಲೆಗಳೊಂದಿಗೆ ಸಮರ್ಥಿಸಿಕೊಂಡಿದ್ದಾರೆ ಆದರೆ ಈಗ ಏಕಾಏಕಿಯಾಗಿ ರಾಯರಮಠದವರು ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿ ಇಲ್ಲ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ನಡುಗಡ್ಡೆಯಾದ ನವ ವೃಂದಾವನದಲ್ಲಿದೆ ಎಂದು ಅಪ ಪ್ರಚಾರ ಮಾಡಿ ಭಕ್ತರಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.  

ಬ್ರಾಹ್ಮಣ ಸಮಾಜದ ಯುವ ಮುಖಂಡ ಶ್ರೀನಿವಾಸಾಚಾರ್ಯ ಬಿಳ್ಳೂರ ಮಾತನಾಡಿ, ಅನಗತ್ಯದ ಈ ವಿವಾದಕ್ಕೆ ಪುಷ್ಠಿ ಎನ್ನುವಂತೆ ರಾಯರಮಠದ ಶ್ರೀಗಳಾದ ಸುಬುದೇಂದ್ರ ತೀರ್ಥರು ಹಾಗೂ ಅವರ ಶಿಷ್ಯರು ಇದೇ ಆಷಾಢ ಮಾಸದ ಜುಲೈ 17, 18 ಹಾಗೂ 19 ರ ಈ ಮೂರು ದಿನಗಳವರೆಗೆ ಜಯತೀರ್ಥರ ಆರಾಧನೆಯನ್ನು ನವ ವೃಂದಾವನದಲ್ಲಿ ವೈಭವೋಪೇತವಾಗಿ ಆಚರಿಸಲು ಭಕ್ತರಿಗೆಲ್ಲ ಕರೆ ನೀಡಿದ್ದು, ಇದು ಜಯತೀರ್ಥರ ಭಕ್ತರಲ್ಲಿ ನೋವು ಉಂಟು ಮಾಡಿದೆ. 600 ವರ್ಷಗಳಿಂದ ಶ್ರೀರಾಯರ ಮಠದವರು ಸೇರಿದಂತೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇತಿಹಾಸಕಾರರು, ಸಂಶೋಧಕರು ಕೂಡ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿಯೇ ಇದೆ ಎಂದು ಒಪ್ಪಿಕೊಂಡಿದ್ದಾರೆ ಆದರೂ ಕೂಡ ರಾಯರಮಠದ ಸ್ವಾಮೀಜಿಗಳು ಹಾಗೂ ಅಧಿಕೃತ ಏಜಂಟರು ನವ ವೃಂದಾವನದಲ್ಲಿರುವ ಉತ್ತರಾಧಿ ಮಠದ ಶ್ರೀರುಘುವರ್ಯ ತೀರ್ಥರ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಬಿಂಬಿಸಿ ಪೂಜಾ, ಆರಾಧನೆಗಳನ್ನು ಮಾಡುತ್ತಿರುವುದನ್ನು ಸರಕಾರ ತಡೆದು ಅನಗತ್ಯ ವಿವಾದ ಮತ್ತು ಘರ್ಷಣೆಗೆ ತೆರೆ ಎಳೆಯಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.  

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಸುರೇಶ ಮುಂಜೆ, ಬ್ರಾಹ್ಮಣ ಸಮಾಜ ನೀಡಿದ ಈ ಮನವಿಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತೇನೆ ಎಂದರು.  

ಪಂ.ಎಮ್‌.ಜಿ.ಜೋಶಿ, ಸೋನುಪಂತ ಕುಲಕರ್ಣಿ, ಸುಹಾಸ ದಾತಾರ, ಡಾ.ರಾಮ ಕುಲಕರ್ಣಿ, ಎಸ್‌.ವಿ.ಜೋಶಿ, ಎನ್‌.ಕೆ.ಪಾಟೀಲ, ನಾಗೇಶಾಚಾರ ಆಯಾಚಿತ, ಡಾ.ವಿಶ್ವನಾಥ ಕುಲಕರ್ಣಿ, ರಾಜು ಪಾಟೀಲ, ಸುರೇಶ ಜೋಶಿ, ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ, ಸುಧೀಂದ್ರ ಬಾದರಾಯಣಿ, ನಾರಾಯಣ ದೇಶಪಾಂಡೆ, ವಾದಿರಾಜ ಜಂಬಗಿ, ಆದಿತ್ಯ ಮಾಶಾಳ, ಡಾ.ಶ್ರೀವತ್ಸ ಕುಲಕರ್ಣಿ, ರಂಗ ಕಟ್ಟಿ, ಗುರುರಾಜ ಮಣ್ಣೂರ, ಪದ್ಮಪ್ರಿಯೆ ಅಯಾಚಿತ, ಶ್ರೀಹರಿ ಕುಲಕರ್ಣಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿಪ್ರ ಬಾಂಧವರು ಉಪಸ್ಥಿತರಿದ್ದರು. 


ಸುದ್ದಿ ಓದಿ