ಹೊಸಪೇಟೆ

ಸಾರ್ವಜನಿಕರಲ್ಲಿ ಪೌಷ್ಠಿಕತೆಯ ಮಹತ್ವ ತಿಳಿಸಿ: ತಾಪಂ ಇಒ ವಿಶ್ವನಾಥ

ಸಾರ್ವಜನಿಕರಲ್ಲಿ ಪೌಷ್ಠಿಕತೆಯ ಮಹತ್ವ ತಿಳಿಸಿ: ತಾಪಂ ಇಒ ವಿಶ್ವನಾಥ

ಹೊಸಪೇಟೆ (ವಿಜಯನಗರ) 01:  ಜಿಲ್ಲೆಯಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಮತ್ತು ರಾಷ್ಟ್ರೀಯ ಪೋಷಣ್ ಅಭಿಯಾನದ ಮಾರ್ಗಸೂಚಿಯನ್ವಯ ವಿವಿಧ ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಪೌಷ್ಠಿಕತೆಯ ಮಹತ್ವವನ್ನು ತಿಳಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಹೊಸಪೇಟೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಹೊಸಪೇಟೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಮತ್ತು ಮಾತೃ ವಂದನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೋಷಣ್ ಅಭಿಯಾನ ಯೋಜನೆಯಡಿ ಸೆಪ್ಟೆಂಬರ್ ಮಾಹೆಯನ್ನು ಪೌಷ್ಠಿಕ ಮಾಹೆಯಾಗಿ ಆಚರಣೆ ಮಾಡಲು ತಿಳಿಸಿರುವ ಪ್ರಯುಕ್ತ ಮಾರ್ಗಸೂಚಿ ಅನ್ವಯ ಸಾರ್ವಜನಿಕರಲ್ಲಿ ಪೌಷ್ಠಿಕತೆಯ ಮಹತ್ವವನ್ನು ತಿಳಿಸುವಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದ ಅವರು ಅಂಗನವಾಡಿ ಫಲಾನುಭವಿಗಳಿಗೆ ನೀಡಬೇಕಾಗಿರುವ ಆಹಾರ ಸಾಮಾಗ್ರಿ ವಿತರಣೆ ಮಾಡಿ ಎಂದರು.

ಗರ್ಭೀಣಿ ಬಾಣಂತಿಯರಿಗೆ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಲು ಸೂಚಿಸಿದ ಅವರು ಇಲಾಖೆಯ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಆಗಬೇಕಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾದುದು ಎಂದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ಅವರು ಮಾತನಾಡಿ ಪೋಷಣ್ ಮಾಸಾಚರಣೆ ಜನಾಂದೋಲನ ಕಾರ್ಯಕ್ರಮವನ್ನು 2018 ರಿಂದ ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಜನಾಂದೋಲನ ಕಾರ್ಯಕ್ರಮವಾಗಿ ಹಮ್ಮಿಕೊಳ್ಳಲಾಗುತ್ತಿದೆ. 30 ದಿನಗಳ ಕಾಲ ಭಾರತ ಸರ್ಕಾರದಿಂದ ನೀಡಲಾದ ಮಾರ್ಗಸೂಚಿ ಅನ್ವಯ ವಿವಿಧ ಕಾರ್ಯಕ್ರಮಗಳನ್ನು ಅಂಗನವಾಡಿ ಮಟ್ಟ ಮತ್ತು ವಾರ್ಡ್/ಗ್ರಾಮ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮೊದಲನೇ ವಾರದಲ್ಲಿ ಪೌಷ್ಠಿಕ ಕೈತೋಟಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಹಾಕುವುದು, ಎರಡನೇ ವಾರದಲ್ಲಿ ಯೋಗ ಮತ್ತು ಆಯುಷ್ ಉಪಕ್ರಮಗಳ ಮುಖಾಂತರ ಕಿಶೋರಿ, ಗರ್ಭೀಣಿಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮೂರನೇ ವಾರದಲ್ಲಿ ಅಂಗನವಾಡಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡುವುದು, ನಾಲ್ಕನೇ ವಾರದಲ್ಲಿ ಸ್ಯಾಮ್ ಮತ್ತು ಮ್ಯಾಮ್ ಮಕ್ಕಳನ್ನು ಗುರ್ತಿಸಿ ಪೌಷ್ಠಿಕ ಆಹಾರ ನೀಡುವುದು ಮಾಸಾಚರಣೆಯ ಉದ್ದೇಶವಾಗಿದೆ. ಮಾತೃ ವಂದನಾ ಸಪ್ತಾಹವನ್ನು ಸೆ.1 ರಿಂದ ರಿಂದ 7 ರವರೆಗೆ ಗರ್ಭೀಣಿ ಮಹಿಳೆಯರಿಗೆ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಮಹತ್ವವನ್ನು ತಿಳಿಸಲಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ,   ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ, ಪೋಷಣ್ ಅಭಿಯಾನದ ತಾಲೂಕು ಸಂಯೋಜಕ ರಾಘವೇಂದ್ರ, ಯೋಜನೆಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಕಚೇರಿ ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ