ಬೈಲಹೊಂಗಲ

ಶುದ್ಧ ಕನ್ನಡ ನಾಮ ಫಲಕ ಕಡ್ಡಾಯವಾಗಿಸಿ

ಶುದ್ಧ ಕನ್ನಡ ನಾಮ ಫಲಕ ಕಡ್ಡಾಯವಾಗಿಸಿ

ಬೈಲಹೊಂಗಲ 02:  ಶುದ್ಧ ಕನ್ನಡ ಪದ ಬಳಕೆಯ ನಾಮ ಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಿದರೆ ಮಾತ್ರ ಮಾತೃ ಭಾಷೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಚಂದ್ರಯ್ಯ ಯರಗಟ್ಟಿಮಠ ಹೇಳಿದರು.

ಪಟ್ಟಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸೋಮವಾರ ನಡೆದ ಶುದ್ಧ ಕನ್ನಡ ನಾಮಫಲಕ ಅಭಿಯಾನದ ಜಾಗೃತಿ ನಡೆಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನವೆಂಬರ 1 2020ರಿಂದ ಅಕ್ಟೋಬರ್ 31ರವರೆಗಿನ ಅವಧಿಯನ್ನು ಕನ್ನಡ ಕಾಯಕ ವರ್ಷ ಎಂದು ಕರೆದಿದೆ. ಅದರ ಅನುಷ್ಠಾನದ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವಹಿಸಿಕೊಂಡಿದೆ ಎಂದರು.

ಕನ್ನಡೀಕರಣಕ್ಕಾಗಿ, ಕನ್ನಡ ಎಲ್ಲೆಲ್ಲೂ ಕಣ್ಣಿಗೆ ಕಾಣಿಸುವಂತೆ ಕ್ರಮವಹಿಸಲು ಹೆಸರಿಲ್ಲದ ರಸ್ತೆಗಳು, ಹೊಸ ಬಡಾವಣೆಗಳು, ವೃತ್ತಗಳು, ಉದ್ಯಾನವನಗಳಿಗೆ ಕನ್ನಡದ ಕವಿಗಳು, ಚಿಂತಕರು, ಸ್ಥಳೀಯ ಮಹತ್ವದ ವ್ಯಕ್ತಿಗಳ ಹೆಸರುಗಳನ್ನು ನಾಮಕರಣ ಮಾಡುವ ಅವಶ್ಯಕತೆ ಇದೆ ಎಂದರು. 

ಇದೇ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮನ ವೃತ್ತ, ತೋಟಗಾರಿಕೆ ಇಲಾಖೆ ಆವರಣದ ರಾಯಣ್ಣನ ಪ್ರತಿಮೆ ಎದುರು ಶುದ್ಧ ಕನ್ನಡ ನಾಮಫಲಕ ಅಭಿಯಾನದ ಬಿತ್ತಿ ಚಿತ್ರಗಳನ್ನು ಹಿಡಿದು ಪ್ರದರ್ಶಿಸಿದರು. ಉಪವಿಭಾಗಾಧಿಕಾರಿ, ತಹಶೀಲ್ದಾರ, ಪುರಸಭೆ, ಖಾಸಗಿ ಸಂಘ, ಸಂಸ್ಥೆ, ಅಂಗಡಿಗಳಿಗೆ ತೆರಳಿ ಶುದ್ಧ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಿದರು. ದೈಹಿಕ ಶಿಕ್ಷಕ ಬಸವರಾಜ ಕಾದ್ರೊಳ್ಳಿ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಅಶೋಕ ಬೊಂಗಾಳೆ, ಜಯ ಕರ್ನಾಟಕ ತಾಲ್ಲೂಕು ಘಟಕ ಅಧ್ಯಕ್ಷ ವಿಠ್ಠಲ ಹಂಪಿಹೊಳಿ, ಶ್ರೀಶೈಲ ಹಂಪಿಹೊಳಿ, ಮಂಜುನಾಥ ಜ್ಯೋತಿ, ಯುನುಸ್ ಬಡೇಘರ, ಗುರುಪ್ರಸಾದ ಕಡತಾಳ ಇದ್ದರು.  


ಸುದ್ದಿ ಓದಿ