ಸಂಭ್ರಮದ ಗುರು ಮದ್ದಾನೇಶ್ವರ ಜಾತ್ರಾ ಮಹೋತ್ಸವ
ಕುಷ್ಟಗಿ 6: ಪಟ್ಟಣದ ಶ್ರೀ ಗುರು ಮದ್ದಾನೇಶ್ವರ ಅಡ್ಡ ಪಲ್ಲಕ್ಕಿ ಹಾಗೂ ಜಾತ್ರಾ ಮಹೋತ್ಸವ ನೂರಾರು ಭಕ್ತರ ನಡುವೆ ಸಂಭ್ರಮ ದಿಂದ ಜರುಗಿತು.
ಬೆಳಗ್ಗೆ ಶ್ರೀ ಮಠದ ಮಹೇಶಸ್ವಾಮಿ, ಕಾಶಯ್ಯ ಹಿರೇಮಠ ಇವರಿಂದ ಶ್ರೀ ಗುರು ಮದ್ದಾನೇಶ್ವರ ಕತ್ರೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಲಾಯಿತು.
ನಂತರ ಅಯ್ಯಾಚಾರ, ಲಿಂಗದೀಕ್ಷೆ ಹಾಗೂ ಅಕ್ಕನ ಬಳಗದಿಂದ ಕುಂಭಮೇಳ, ಭಜನೆ, ಕೋಲಾಟ, ಡೊಳ್ಳುಗಳೊಂದಿಗೆ ದೇವಸ್ಥಾನ ಆವರಣದಲ್ಲಿ ಅಡ್ಡ ಪಲ್ಲಕ್ಕಿ ನಡೆಯಿತು.
ಮಧ್ಯಾಹ್ನ ಭಕ್ತರಿಗಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ 5ಗಂಟೆಗೆ ಶ್ರೀ ಗುರು ಮದ್ದಾನೇಶ್ವರ ಮಹಾ ರಥೋತ್ಸವ ಜರುಗಿತು.
ನಿಡಶೇಸಿ ಪಂಚಕಂತಿ ಮಠದ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಚಳಗೇರಾ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್, ಮಾಜಿ ಅಧ್ಯಕ್ಷ ಕೆ.ಶರಣಪ್ಪ, ಪುರಸಭೆ ಅಧ್ಯಕ್ಷ ಜಿ.ಕೆ ಹಿರೇಮಠ ಸೇರಿದಂತೆ ಅನೇಕ ಮುಂಖಡರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.