ಮನರಂಜನೆ

ಮದಗಜ ಸಿನಿಮಾ ಇಂದು ಬಿಡುಗಡೆ: ಕಿಚ್ಚು ರೋಷಾವೇಶದ ನಡುವೆ ಸಾಹಸವೂ ಕ್ಲಾಸಿಕ್

ಮದಗಜ ಸಿನಿಮಾ ಇಂದು ಬಿಡುಗಡೆ: ಕಿಚ್ಚು ರೋಷಾವೇಶದ ನಡುವೆ ಸಾಹಸವೂ ಕ್ಲಾಸಿಕ್

ಬೆಂಗಳೂರು: ಡಿಸೆಂಬರ್ 03: ಸ್ಯಾಂಡಲ್​ವುಡ್​ನ ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಬಹುನಿರೀಕ್ಷಿತ ಸಿನಿಮಾ ಮದಗಜ (Madhagaja) ರಾಜ್ಯಾದ್ಯಂತ ಗ್ರ್ಯಾಂಡ್​ ರಿಲೀಸ್​ ಕಂಡಿದೆ. ಈ ಸಿನಿಮಾದಲ್ಲಿ ಕ್ರೌರ್ಯದ ಬದುಕಿನ ನಡುವೆ ಉದಯಿಸುವ ಸೂರ್ಯನ ಪ್ರಭೆಗೆ ಉಳಿದ ಎಲ್ಲವೂ ಸುಟ್ಟು ಕರಕಲಾಗುತ್ತವೆ. ಆ ಮೂಲಕ ರಕ್ತ ಸಿಕ್ತ ಅಧ್ಯಾಯದ ಕೊನೆಯಾಗುತ್ತದೆ.

ಇಲ್ಲಿ ಪರಸ್ಪರ ದ್ವೇಷ ಯಾರಿಗೆ ಮತ್ತು ಏತಕ್ಕಾಗಿ ಎಂಬುದು ಪ್ರಶ್ನೆಯಾಗಿ ಕಾಡಿದರೂ ಒಂದು ಸಾಮ್ರಾಜ್ಯವನ್ನು ಕಟ್ಟಲು ಮತ್ತೊಂದು ಸಾಮ್ರಾಜ್ಯದಾಹಿ ಗುಂಪು ಸೆಣೆಸುತ್ತದೆ. ಮತ್ತೊಂದೆಡೆ ತನ್ನವರನ್ನು ಉಳಿಸಿ ಕಾಪಾಡುವ ಶಕ್ತಿಯೂ ಒಂದಿರುತ್ತದೆ. ಆ ಶಕ್ತಿಯ ಪ್ರೇರಕ ರೂಪವಾಗಿ ಬರುವವನೇ ಸೂರ್ಯ.

ವಾರಣಾಸಿಯ ಗಂಗೆಯ ತಟದಲ್ಲಿ ಉರಿಯುವ ಬೆಂಕಿ ಅಗ್ಗಿಷ್ಟಿಕೆಯಲ್ಲ. ಅದು ಶವ ಸುಡುವುದು ಎಂದು ಗೊತ್ತಿದ್ದರೂ ಕಲಾತ್ಮಕವಾಗಿಯೇ ಅದು ತನ್ನ ಅಸ್ತಿತ್ವವನ್ನು ಪ್ರತಿ ಪಾದಿಸುತ್ತದೆ. ಅಂತಹ ದಳ್ಳುರಿಯಿಂದ ಎದ್ದು ಬಂದರೂ ಪ್ರಕಾಶಮಾನವಾಗಿ ಕಾಣುವುದು ಸೂರ್ಯನ ಗುಣ.

ಅಮ್ಮ ಮಗನ ಬಾಂಧವ್ಯದ ಸೆಳೆತ ಕಣ್ಣೀರುಕ್ಕಿಸುತ್ತದೆ. ರಕ್ತದ ಜೊತೆ ಚೆಲ್ಲಾಟವಾಡಿದರೂ ಅಪ್ಪನ ಸನಿಹ ಸೂರ್ಯನ ಬೆಳಕನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಕಿದ ಸಹೃದಯಿಯ ಅಂತಃಕರಣ ಪ್ರೇಕ್ಷಕನ ಗೆಲ್ಲುತ್ತದೆ.

ರೋರಿಂಗ್ ಸ್ಟಾರ್ ಮುರಳಿ ಸೂರ್ಯ ನಾಗಿ ಎಂದಿನಂತೆ ಅಬ್ಬರಿಸಿದ್ದಾರೆ. ಜೊತೆಗೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅವರ ಸುತ್ತಲೂ ಉಳಿದವರು ಗ್ರಹಗಳಂತೆ..! ತಾಯಿಯಾಗಿ ದೇವಯಾನಿ ಮತ್ತು ತಂದೆಯಾಗಿ ಜಗಪತಿಬಾಬು ಅವರದು ಪ್ರೌಢ ಅಭಿನಯ. ಜೊತೆಗೆ ಆಶಿಕಾ ರಂಗನಾಥ್, ರಂಗಾಯಣ ರಘು, ಶಿವರಾಜ್ ಕೆ.ಆರ್ ಪೇಟೆ, ಚಿಕ್ಕಣ್ಣ ಮೊದಲಾದವರ ಪಾತ್ರಗಳು ಸೌಮ್ಯ ಗ್ರಹಗಳಂತೆಯೇ..

ಖಳರಾಗಿ ಗರುಡರಾಮ್ ಹಾಗೂ ಇತರರು ಭಯ ಹುಟ್ಟಿಸಿದಷ್ಟು ಅದನ್ನು ಮೆಟ್ಟಿ ನಿಲ್ಲುವ ನಾಯಕನ ಪಾತ್ರ ಸೃಷ್ಟಿಸುವಲ್ಲಿ ನಿರ್ದೇಶಕ ಎಸ್. ಮಹೇಶ್ ಕುಮಾರ್ ಗೆದ್ದಿದ್ದಾರೆ. ನವೀನ್ ಕುಮಾರ್ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ರವಿ ಬಸ್ರೂರ್ ಸಂಗೀತ ಅಬ್ಬರಿಸುತ್ತದೆ. ಅದು ಚಿತ್ರದ ಹೈಲೈಟ್ ಕೂಡ.

ರಕ್ತ ಚೆಲ್ಲುವಲ್ಲಿಯೂ ಕ್ಲಾಸಿಕ್ ಗುಣ 'ಮದಗಜ'ದ ವಿಶೇಷತೆ. ಇದು ಹೇಳಿ ಮಾಡಿಸಿದ ಮಾಸ್ ಗುಣ.

ಸುದ್ದಿ ಓದಿ