ಕೊಣ್ಣೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ನಡಹಳ್ಳಿ ಚಾಲನೆ
ತಾಳಿಕೋಟಿ: ಕ್ಷೇತ್ರದ ಜನರ ಕುರಿತು ಅಪಾರ ಕಾಳಜಿಯನ್ನು ಹೊಂದಿದ ಬಡಜನರ ಕಷ್ಟ ದು:ಖಗಳಿಗೆ ಸ್ಪಂದಿಸಿ ಅವರಿಗೆ ನೆರವಾಗುವ ಹಾಗೂ ಸದಾ ಅಭಿವೃದ್ಧಿ ಕುರಿತು ಚಿಂತಿಸುವ ವ್ಯಕ್ತಿಯನ್ನೇ ನಿಮ್ಮಪ್ರತಿನಿಧಿಯಾಗಿ ಆಯ್ಕೆ ಮಾಡಿ, ವಿಧಾನ ಸಭೆಗೆ ಹೋಗಿ ನಿದ್ದೆ ಮಾಡುವವರನ್ನಲ್ಲ ಎಂದು ಶಾಸಕ, ಅಧ್ಯಕ್ಷ ಕರ್ನಾಟಕ ಆಹಾರ ನಿಗಮ, ಎ. ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ ಸುಮಾರು ರೂ 31 ಕೋಟಿ ರಸ್ತೆ ಕಾಮಗಾರಿ ಹಾಗೂ ಸಮುದಾಯ ಭವನಗಳಿಗೆ ಭೂಮಿಪೂಜೆ ನೆರೆವೇರಿಸಿ ಅವರು ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ನಾನು ಶಾಸಕನಾಗಿ ಇಲ್ಲಿ ಬರುವ ಮುನ್ನ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿರಲಿಲ್ಲ ನಾನು ಬಂದ ನಂತರ ಸುಮಾರು ರೂ 3500 ಕೋಟಿ ಅನುದಾನ ತಂದು ಕ್ಷೇತ್ರದ 128 ಗ್ರಾಮಗಳಿಗೂ ಮೂಲಸೌಕರ್ಯಗಳಾದ ಕುಡಿಯುವ ನೀರು, ಸುಸಜ್ಜಿತವಾದ ರಸ್ತೆಗಳು, ಸಮರ್ಪಕ ವಿದ್ಯುತ್ ಹಾಗೂ ಶಿಕ್ಷಣಕ್ಕೆ ಆದ್ಯತೆ ಕೊಟು ್ಟ ಕೆಲಸ ಮಾಡಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ ಶೇ.90 ರಷ್ಟು ಕಾಮಾಗಾರಿಗಳು ಮುಗಿದಿವೆ. ಇಡೀ ಕ್ಷೇತ್ರದ ಅಭಿವೃದ್ಧಿ ಕುರಿತು ಜನ ಅಭಿಮಾನ ಪಡುವ ಹಾಗೆ ಕೆಲಸ ಮಾಡಿದ್ದೇನೆ. ನಮ್ಮ ಯುವಕರಿಗೆ ಉದ್ಯೋಗ ಕೊಡುವ ಯೋಜನೆ ಹಾಕಿಕೊಂಡಿದ್ದು ಇದಕ್ಕಾಗಿ ಈ ಭಾಗದಲ್ಲಿ ಕೈಗಾರಿಕೆ ಆರಂಭಿಸಲಾಗುವುದು. ಮಹಿಳೆಯರನ್ನು ಸ್ವಾಲಂಬಿಗಳಾಗಿ ಮಾಡಲು ಪ್ರತಿ ಕುಟುಂಬಕ್ಕೆ ಒಂದು ಹಸು ಕೊಡಲಿದ್ದೇನೆ.
ನಾನು ಸದಾ ಬಡವರ ಕುರಿತು ಚಿಂತಿಸುವ ವ್ಯಕ್ತಿ ನಾನೆಂದೂ ಜಾತಿ ರಾಜಕಾರಣ ಮಾಡಿಲ್ಲ ಇವತ್ತು ಅಲ್ಪಸಂಖ್ಯಾತ ಸಮಾಜದ ಬಂಧುಗಳ ನನಗೆ ಅತಿ ಹೆಚ್ಚು ಬೆಂಬಲಿಸುತ್ತಿದ್ದಾರೆ. ನಾನು ಅಭಿವೃದ್ಧಿಯ ಕುರಿತು ಮಾತನಾಡುತ್ತೇನೆ. ಹಿಂದಿನ ಶಾಸಕರು ಅನುಕಂಪದ ಕುರಿತು ಹೇಳುತ್ತಿದ್ದಾರೆ. ತೀರ್ಮಾನ ನೀವು ತೆಗೆದುಕೊಳ್ಳಿ ಎಂದರು. ಜಿ.ಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿ ಶಾಸಕ ನಡಹಳ್ಳಿ ಅವರು ಸದಾ ಅಭಿವೃದ್ಧಿ ಕುರಿತು ಚಿಂತಿಸುವವರಾಗಿದ್ದಾರೆ. ಅತಿ ಹೆಚ್ಚಿನ ಅನುದಾನ ತಂದು ಇಡೀ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಈ ಸಣ್ಣ ಗ್ರಾಮಕ್ಕೆ 31 ಕೋಟಿ ಅನುದಾನ ಹಾಕಿದ್ದಾರೆಂದರೆ, ಅವರು ಗ್ರಾಮೀಣ ಭಾಗದ ಅಭಿವೃದ್ಧಿ ಕುರಿತು ಎಂಥ ಕಾಳಜಿ ಹೊಂದಿದ್ದಾರೆಂದು ಗೊತ್ತಾಗುತ್ತದೆ ಅವರನ್ನು ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದರು. ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಶಂಕರಗೌಡ ಹಿಪ್ಪರಗಿ, ಬಸನಗೌಡ ನೀರಲಗಿ, ಗೌಡಪ್ಪಗೌಡ ಹಡಲಗೇರಿ, ಸೋಮನಗೌಡ ಹಡಲಗೇರಿ, ಚಿದಾನಂದ ಕೆಸರಭಾವಿ, ಸಿದ್ದನಗೌಡ ಯಾಳವಾರ, ಮುತ್ತುಗೌಡ ಹಿಪ್ಪರಗಿ, ಬಂದೇನವಾಜ ಕಡಕೋಳ, ಹುಸೇನಸಾಬ ವಾಲಿಕಾರ, ಗ್ರಾ. ಪಂ. ಸದಸ್ಯ ಸೋಮನಗೌಡ ಹಡಲಗೇರಿ, ಬಸವರಾಜ ನಾಯ್ಕೋಡಿ, ಎಇಇ ಟಿ.ವಿ.ದೊಡಮನಿ, ಎಇ ಎಸ್.ಎಸ್.ಬೈರಾಜ್, ಗುತ್ತಿಗೆದಾರ ಆರ್.ಎಚ್.ಮಂಟೂರ ಇದ್ದರು.