ವಾಣಿಜ್ಯ ನಗರಕ್ಕೆ ಕಾಮಧೇನು ಗೋಶಾಲೆ ಕಳಶಪ್ರಾಯವಾಗಿದೆ: ಅರುಣಕುಮಾರ
ರಾಣೇಬೆನ್ನೂ 25: ನಗರ ಹೊರ ವಲಯ ದೇವರಗುಡ್ಡ ರಸ್ತೆ ಕಾಮಧೇನು ಗೋರಕ್ಷಾ ಚ್ಯಾರಿಟೇಬಲ್ ಟ್ರಸ್ಟ್ ಕಾಮಧೇನು ಗೋ ಶಾಲೆಗೆ ಬುಧವಾರ ಶಾಸಕ ಅರುಣಕುಮಾರ ಪೂಜಾರ ಮತ್ತು ಧರ್ಮಪತ್ನಿ ಮಂಗಳಗೌರಿ ಪೂಜಾರ ಸೇರಿದಂತೆ ಅವರ ಅಪಾರ ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ತಮ್ಮ 43ನೇ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ಗೋವುಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಿಕೊಂಡರು.
ತಮ್ಮ ಜನ್ಮ ದಿನೋತ್ಸವದ ಅಂಗವಾಗಿ ಗೋ ಶಾಲೆಗೆ ಮತ್ತು ಗೋವುಗಳಿಗೆ ಅಗತ್ಯವಾಗಿರುವ ಸೊಪ್ಪಿ ಕೊರೆಯುವ ವಿದ್ಯುತ್ ಚಾಲಿತ ಯಂತ್ರ ಮತ್ತು ಜೋಳದ ದಂಟಿನ ಸೊಪ್ಪಿಯನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಧೇನು ಗೋಶಾಲೆ ನಗರಕ್ಕೆ ಕಳಶಪ್ರಾಯವಾಗಿದೆ. ಸಮಾಜಮುಖಿ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವ ಟ್ರಸ್ಟಿಗಳು ಅತ್ಯಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುವುದರ ಮೂಲಕ ಗೋಮಾತೆಯ ಆಶೀರ್ವಾದಕ್ಕೆ ಕಾರಣರಾಗಿದ್ದಾರೆ. ಆಡಳಿತ ಮಂಡಳಿಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಆರಂಭದಲ್ಲಿ ಶಾಸಕ ಅರುಣಕುಮಾರ ಪೂಜಾರ ಅವರ ಜನ್ಮ ದಿನೋತ್ಸವಕ್ಕೆ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿ ಶುಭ ಕೋರಿದ ಅಧ್ಯಕ್ಷ ಡಾ.ಸಂಜಯ ಎಂ.ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 3 ವರ್ಷಗಳ ಹಿಂದೆ ಕಾಮಧೇನು ಗೋಶಾಲೆ ಸಮಾನ ಮನಸ್ಕರೊಂದಿಗೆ ಸಮಾಲೋಚಿಸಿ ಆರಂಭಿಸಲಾಗಿದ್ದು, ನಗರ ಮತ್ತು ತಾಲೂಕಿನ ಕೃಷಿಕರು, ರೈತರು, ವರ್ತಕರು, ಉದ್ಯಮಿಗಳು ಇದರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವುದರಿಂದಲೇ ಅಭಿವೃದ್ಧಿಯತ್ತ ಸಾಗಿದೆ. ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಪರಿಪೂರ್ಣ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರ ಮತ್ತು ಗೋ ಸೇವಕರ ಅನುಕೂಲತೆಗಾಗಿ ಸ್ವತಂತ್ರವಾದ ಜಮೀನಿನ ಅವಶ್ಯಕತೆ ಇದ್ದು ಅದರ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸುತ್ತಲಿದೆ ಎಂದರು.
ಸರಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು, ಅಂದಿನಿಂದ ಇಂದಿನವರೆಗೂ ಗೋ ಶಾಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಗೋವುಗಳು ಶೇಖರಣೆಯಾಗುತ್ತಲಿವೆ. ಪ್ರಸ್ತುತ ಅಧಿಕ ಪ್ರಮಾಣದಲ್ಲಿ ಗೋವುಗಳು ಆಶ್ರಯ ಪಡೆದಿದ್ದು, ಮುಂದಿನ ದಿನಮಾನಗಳಲ್ಲಿ 500ಕ್ಕೂ ಹೆಚ್ಚು ಗೋವುಗಳಿಗೆ ಇಲ್ಲಿ ಸಾಕಿ ಸಲಹುವ ಉದ್ದೇಶ ಆಡಳಿತ ಮಂಡಳಿ ಹೊಂದಿದೆ. ಅದಕ್ಕೆ ಸೂಕ್ತವಾದ ಸ್ವತಂತ್ರ ಜಮೀನಿನ ಅಗತ್ಯವಿದೆ. ಶಾಸಕರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಜಮೀನನ್ನು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದ ಡಾ. ಸಂಜಯ ನಾಯಕ ಅವರು, ಶಾಸಕರು ಇಂದು ತಮ್ಮ ಜನ್ಮ ದಿನೋತ್ಸವದ ಕೊಡುಗೆಯಾಗಿ ನೀಡಿರುವ ವಿದ್ಯುತ್ ಚಾಲಿತ ಯಂತ್ರ, ಗೋ ಮೇವಿನ ಸೇವೆ ಆಡಳಿತ ಮಂಡಳಿಗೆ ಸಂತೋಷ ತಂದಿರುವುದಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಾಮಾಜಿಕ ಚಿಂತಕಿ ಮಂಗಳಗೌರಿ ಅರುಣಕುಮಾರ ಪೂಜಾರ ಮತ್ತು ಮಕ್ಕಳು ಸೇರಿ ಗೋವುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ದೀಪಕ್ ಹರಪನಹಳ್ಳಿ, ಅನಿಲ್ಕುಮಾರ ಸಿದ್ದಾಳಿ, ಪವನ ಮಲ್ಲಾಡದ, ಮಲ್ಲಿಕಾರ್ಜುನ ಅಂಗಡಿ, ಶೇಖಪ್ಪ ನರಸಗೊಂಡರ, ಗೋ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಸಂಜಯ್ ನಾಯಕ್, ಗೌರವಾಧ್ಯಕ್ಷ ಶುಖರಾಜ ಜೈನ್, ಉಪಾಧ್ಯಕ್ಷರಾದ ಸೋಹನ್ಲಾಲ್ ಜೈನ್, ರವೀಂದ್ರ ಬಿಜಾಪುರ, ಕಾರ್ಯದರ್ಶಿ ರಾಜೇಶ್ ನವಲೆ, ಸದಸ್ಯರಾದ ಬಸವರಾಜ ಪಾಟೀಲ, ಜಸರಾಂ ಮಾಳಿ, ಭೂಮರಾಜ ಮಾಳಿ, ರೋಣೇಶ್ ಜೈನ್, ಸುನೀಲ್ ಮೆಹತಾ, ತೇಜಸ್ಕುಮಾರ ಕೆ.ಕೆ., ರೂಪೇಶ್ ಜೈನ್, ಆರ್.ಎನ್.ರಾಠೋಡ, ತಾನಮಲ್, ಬಸವರಾಜ ನರಸಗೊಂಡರ, ಕೆ.ಎಸ್.ನಾಗರಾಜ್, ಭರತ್ ಜೈನ್, ಆನಂದಪ್ಪ, ಲಲಿತ್ ಜೈನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.