ರಾಣೆಬೆನ್ನೂರ

ರಾಯಣ್ಣನ ಮೂರ್ತಿ ವಿರೂಪಗೊಳಿಸಿದ ಎಂಇಎಸ್ ಪುಂಡರು: ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಣ್ಣನ ಮೂರ್ತಿ ವಿರೂಪಗೊಳಿಸಿದ ಎಂಇಎಸ್ ಪುಂಡರು: ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಣೇಬೆನ್ನೂರು 20: ಬೆಳಗಾವಿಯಲ್ಲಿ ಎಂಇಎಸ್‌. ಪುಂಡರು ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರ ವಾಹನಗಳನ್ನು ಜಖಂ ಗೊಳಿಸಿರುವ ಪ್ರಕರಣ ಇಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ವಜಾ ಮಾಡಬೇಕು ಎಂದು ಕರವೇ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್‌. ಪಾಟೀಲ ಅವರು, ಕನ್ನಡ ನೆಲದಲ್ಲಿ ವಾಸಿಸಿಕೊಂಡು ನೆಲದ ನೀರನ್ನು ಕುಡಿದು ಬದುಕುತ್ತಿರುವ ಕುತಂತ್ರಿಗಳು ಕನ್ನಡ ನಾಡು-ನುಡಿಯ ಗಡಿಭಾಗದ ಬಗ್ಗೆ ಖ್ಯಾತೆ ತೆಗೆಯುತ್ತಲೆ ಇರುತ್ತಾರೆ. ಇವರನ್ನು ಗುಂಡಾ ಕಾಯ್ದೆ ಅಡಿ ಬಂಧಿಸದಿದ್ದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಕೂಡಲೇ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿರುವ ಎಂಇಎಸ್ ಸಂಘಟನೆ ತಗೆದು ಹಾಕಬೇಕು ಎಂದು ಆಗ್ರಹಿಸಿದರು.  

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೂ ಸಹ ಯಾವುದೇ ಭಯವಿಲ್ಲದೆ ಕನ್ನಡಿಗರ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಿ ಹಾನಿ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ವಿಷಾದಿಸಿದರು. 

 ನ್ಯಾಯವಾದಿ ಎಸ್‌.ಡಿ. ಹಿರೇಮಠ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ವೀರಕಂಠೀರವ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ಬಿ., ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿ, ರಕ್ಷಣಾ ವೇದಿಕೆ ಕೊಟ್ರೇಶಪ್ಪ ಎಮ್ಮಿ, ಆನಂದ ಹುಲ್ಬನ್ನಿ, ಸಿದ್ದಪ್ಪ ಹೂಲಿಕಟ್ಟಿ, ಆಶೋಕ ಲಿಂಗದಳ್ಳಿ, ರೈತ ಸಂಘಟನೆಯ ಹರಿಹರಗೌಡ ಎಸ್‌. ಪಾಟೀಲ, ಮರಡೆಪ್ಪ ಎಸ್‌. ಚಳಗೇರಿ, ಭಾಲಚಂದ್ರ ದೊಡ್ಡಮನಿ, ಜಿ.ಬಿ.ಮಾಸಣಗಿ, ಭಾಷಾಸಾಬ ಹಂಪಾಪಟ್ಟಣದ, ನಾಗರಾಜ ಸುರ್ವೆ, ಪಿ.ಬಿ.ಬಣಕಾರ, ಡಿ.ಕೆ.ತೊಂಟಗಂಟಿ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ