ಮಸಾಲಾ ಕಿಂಗ್ ಧರ್ಮಪಾಲ್ ಗುಲಾಟಿ ವಿಧಿವಶ
ನವದೆಹಲಿ, ಡಿ 03: ಮಸಾಲೆ ಬ್ರಾಂಡ್ 'ಎಂಡಿಹೆಚ್' ಮಾಲೀಕ ಧರಂಪಾಲ್ ಗುಲಾಟಿ ಅವರು ಹೃದಯಾಘಾತದಿಂದಾಗಿ ಗುರುವಾರ ನಿಧನರಾಗಿದ್ದಾರೆ. 'ಎಂಡಿಹೆಚ್ ಅಂಕಲ್', 'ದಾದಾಜಿ' ಎಂದು ಜನಪ್ರಿಯರಾಗಿದ್ದ ಮಹಾಶೆ ಧರಂಪಾಲ್ ಗುಲಾಟಿ, ಭಾರತದ ಅತಿದೊಡ್ಡ ಮಸಾಲೆ ಬ್ರಾಂಡ್ಗಳಲ್ಲಿ ಒಂದಾದ ಎಂಡಿಹೆಚ್ -ಮಹಶಿಯಾನ್ ಡಿ ಹಟ್ಟಿಯ ಸ್ಥಾಪಕರಾಗಿದ್ದರು. ಗುಲಾಟಿ "ದೇಶದ ಮಸಾಲೆಗಳ ಸುಗಂಧವನ್ನು ಇಡೀ ಜಗತ್ತಿಗೆ ಹರಡಿದ್ದಾರೆ" ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಂತಾಪ ಸೂಚಿಸಿದ್ದಾರೆ.
ಪ್ರಸ್ತುತ ಪಾಕಿಸ್ತಾನಕ್ಕೆ ಸೇರಿರುವ ಸಿಯಾಲ್ಕೋಟ್ನಲ್ಲಿ ಜನಿಸಿದ ಗುಲಾಟಿ, ವಿಭಜನೆಯ ನಂತರ ಭಾರತಕ್ಕೆ ಬಂದರು. ಮೊದಲು ಅಮೃತಸರಕ್ಕೆ ಬಂದು ನಂತರ ದೆಹಲಿಗೆ ತೆರಳಿ ಎಂಡಿಹೆಚ್ ಮಸಾಲಾ ಕಾರ್ಖಾನೆಯನ್ನು 1959 ರಲ್ಲಿ ರಾಷ್ಟ್ರ ರಾಜಧಾನಿಯ ಕೀರ್ತಿ ನಗರದಲ್ಲಿನ ಒಂದು ಜಮೀನಿನಲ್ಲಿ ಸ್ಥಾಪಿಸಿದ್ದರು. ಆನಂತರದ್ದು ಇತಿಹಾಸದಲ್ಲಿ ದಾಖಲಾಯಿತು.
ಇಂದು, ಎಂಡಿಹೆಚ್ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತಿದೆ. ಅಮೆರಿಕ, ಜಪಾನ್ ಮತ್ತು ಕೆನಡಾದಂತಹ ವಿಶ್ವದಾದ್ಯಂತದ ಅನೇಕ ದೇಶಗಳಿಗೆ ಮಸಾಲೆಗಳನ್ನು ರಫ್ತು ಮಾಡುತ್ತದೆ.ಅಪ್ರತಿಮ ವ್ಯಕ್ತಿತ್ವದ ಧರ್ಮಾಲ್ ಗುಲಾಟಿ ಸಾವಿಗೆ ಟ್ವಿಟರ್ ಸಂತಾಪ ಸೂಚಿಸಿ ಅವರ ಜೀವನದ ಹಾದಿಯನ್ನು ನೆನಪಿಸಿಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಲಾಟಿ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿ, ಗುಲಾಟಿಯವರದ್ದು, ಸಮಾಜದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸ್ಪೂರ್ತಿದಾಯಕ ವ್ಯಕ್ತಿತ್ವ ಎಂದು ಹೇಳಿದ್ದಾರೆ.