ತಾಳಿಕೋಟಿ

ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ
Mūru tālūkugaḷannu barapīḍita pradēśavendu ghōṣisalu āgraha

ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ  

ತಾಳಿಕೋಟಿ, ಸೆ. 12: ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ಈ ಮೂರು ತಾಲೂಕುಗಳ ಜೊತೆಗೆ ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಸ್ಥಳೀಯ ಪ್ರವಾಸಿ ಮಂದಿರದ ಬಳಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿತು.  

ಧರಣಿ ನಿರತ ರೈತರಿಗೆ ಬೆಂಬಲ ಸೂಚಿಸಲು ತಾಳಿಕೋಟಿಯ ವಕೀಲರು ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ವಕೀಲ ಗಂಗಾಧರ ಕಸ್ತೂರಿ ಮಾತನಾಡಿ, ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಆದರೆ, ಅವರನ್ನು ಆಳುವವರು ರೈತರ ಬೆನ್ನು ಮುರಿಯುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಈ ಕೆಟ್ಟ ರಾಜಕಾರಣ ನಿಲ್ಲಬೇಕು ಎಂದು ಹೇಳಿದರು.  

ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕುಗಳು ಒಣಭೂಮಿ ಪ್ರದೇಶಗಳಾಗಿದ್ದು, ಇಲ್ಲಿ ನೀರಾವರಿ ಸೌಲಭ್ಯ ಕಡಿಮೆಯಿದೆ. ಪ್ರಸಕ್ತ ವರ್ಷ ಮಳೆ ಕೈಕೊಟ್ಟಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಮಿಗೆ ಬಿತ್ತನೆ ಮಾಡಿದ ಬೀಜ, ಗೊಬ್ಬರ ಸೇರಿದಂತೆ ಕೃಷಿ ವೆಚ್ಚವೂ ಭರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಈ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ವಕೀಲರಾದ ಪ್ರಭಾಕರ ಗುಡಗುಂಟಿ ಹಾಗೂ ಸಂತೋಷ ತಳೊಳ್ಳಿ ಮಾತನಾಡಿ, ರೈತರ ಹೋರಾಟದಲ್ಲಿ ಯಾವುದೇ ಸ್ವಾರ್ಥವಿಲ್ಲ. ಅವರ ಹೋರಾಟ ಎಲ್ಲರಿಗಾಗಿ ನಡೆಯುತ್ತಿದೆ. ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ರಸ್ತೆಗೆ ತಂದು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ನೋವಿನ ಸಂಗತಿ. ಇದು ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು.  

ಸರ್ಕಾರ ಶೀಘ್ರವೇ ಬರ ಘೋಷಣೆ ಮಾಡದಿದ್ದರೆ ರೈತರು ಕಾನೂನು ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ರೈತರು ನಡೆಸುವ ನ್ಯಾಯಪರ ಹಾಗೂ ಕಾನೂನುಬದ್ಧ ಹೋರಾಟಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ನೀಡಿ ಅವರೊಂದಿಗೆ ನಿಲ್ಲುತ್ತೇವೆ ಎಂದು ಅವರು ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ವಕೀಲರಾದ ಎಂ.ಆರ್‌. ಪಾಟೀಲ, ಎಂ.ಬಿ. ಅಸ್ಕಿ, ಎಸ್‌.ಎಸ್‌. ಹಾಲಣವರ, ಎಸ್‌.ಎಂ. ಕಿಣಗಿ, ಎಂ.ಬಿ. ಕಟ್ಟಿಮನಿ, ಸಿ.ಎಸ್‌. ಚಲವಾದಿ, ಎಂ.ಬಿ. ದೊಡ್ಡಮನಿ, ಬಸವರಾಜ ಕಟ್ಟಿಮನಿ, ಎಸ್‌.ಬಿ. ನಾರಿ, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಾಳಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹಡಿಮನಿ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ