ಬಳ್ಳಾರಿ

ಕಡಿಮೆ ಇಳುವರಿ: ಉತ್ತಮ ಬೆಲೆ ನೀರೀಕ್ಷೆಯಲ್ಲಿ ಮಾವು ಬೆಳೆಗಾರರು

ಕಡಿಮೆ ಇಳುವರಿ: ಉತ್ತಮ ಬೆಲೆ ನೀರೀಕ್ಷೆಯಲ್ಲಿ ಮಾವು ಬೆಳೆಗಾರರು

ಶಶಿಧರ ಕುಲಕರ್ಣಿ  

ಮುಂಡಗೋಡ: ತಾಲೂಕಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಮಾವು ಅತಿ ಕಡಿಮೆ ಪ್ರಮಾಣದಲ್ಲಿ ಹೂವು ಬಿಟ್ಟಿದ್ದು ಬರುವಷ್ಟು ಇಳುವರಿಗೆ ಉತ್ತಮ ಬೆಲೆ ಸಿಗಬಹುದು ಎಂದು ಮಾವು ಬೆಳೆಗಾರರು ತೃಪ್ತಿ ಪಡಬೇಕಾಗಿದೆ.   

ಒಟ್ಟು 345ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು 150ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹೂವು ಕಂಡು ಬಂದಿದ್ದು ಇನ್ನುಳಿದ ಪ್ರದೇಶದಲ್ಲಿ ಗಿಡಗಳು ಹೂವು ಬಿಟ್ಟಿಲ್ಲ ಹಾಗೂ ಮುಂದೆ ಹೂವು ಬಿಡುವ ಹಂತದಲ್ಲಿ ಇವೆ. ತಾಲೂಕಿನ ಪಾಳಾ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಾವು ಬೆಳೆಯುತ್ತಾರೆ. ಇಲ್ಲಿನ ಮಣ್ಣಿನ ಗುಣ ಮತ್ತು ಹವಾಮಾನದ ಪೂರಕ ವಾತಾವರಣದಿಂದ ಇಲ್ಲಿ ಆಪೂಸ್, ರಸಪೂರಿ, ತೋತಾಪೂರಿ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಅಲ್ಲಿಯೂ ಈ ಬಾರಿ ಹೂವು ಬಿಟ್ಟ ಗಿಡಗಳ ಸಂಖ್ಯೆ ಕಡಿಮೆ.  

ಈ ಬಾರಿ ಮಾವು ತಡವಾಗಿ ಹೂವು ಬಿಡುತ್ತಿದ್ದು ಈವರೆಗೆ ಶೇ.30ರಷ್ಟು ಮಾತ್ರ ಹೂವು ಬಿಟ್ಟಿದೆ. ಇಲ್ಲಿಯವರೆಗೆ ಬಿಟ್ಟ ಹೂವು ಮುಂದೆ ಕಾಯಿಗಳ ಕಟಾವಿನ ವೇಳೆ ಬೆಲೆ ಕಾಣಬಹುದು. ಇನ್ನು ಮುಂದೆ ಬಿಡುವ ಹೂವು ಮುಂದೆ ಕಾಯಿಗಳ ಕಟಾವಿನ ವೇಳೆ ಬೆಲೆ ಕಡಿಮೆಯಾಗಬಹುದು. ಇಳುವರಿ ಕಡಿಮೆಯಾಗುವ ಕಾರಣದಿಂದ ಮುಂದೆ ಉತ್ತಮ ಬೆಲೆ ಸಿಗಬಹುದು ಎಂಬ ನೀರೀಕ್ಷೆಯಲ್ಲಿ ಮಾವು ಬೆಳೆಗಾರರು ಇದ್ದಾರೆ.         

ಅಣ್ಣಪ್ಪ ನಾಯ್ಕ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ: 

ಮಾವಿಗೆ ಈ ಬಾರಿ ಅಕಾಲ. ಎಲ್ಲ ಕಡೆ ಬಹಳ ಕಡಿಮೆ ಪ್ರಮಾಣದಲ್ಲಿ ಹೂವು ಬಿಟ್ಟಿದೆ. ಕಾಯಿ ಕಚ್ಚುವ ಸಮಯದಲ್ಲಿ ಕಂಡು ಬರುವ ಜಿಗಿಹುಳು ಮತ್ತು ಬೂದು ರೋಗ ಬಾಧೆಗೆ ಗಂಧಕ ಮತ್ತು ಮೊನೋಗ್ರಟಾಫಾಸ್ ಎರಡು ಬಾರಿ ಸಿಂಪರಣೆ ಮಾಡಬೇಕು. ಈಗಾಗಲೆ ಅಲ್ಲಲ್ಲಿ ಮಾವು ಬೆಳೆಗಾರರು ಸಿಂಪರಣೆ ಮಾಡಿದ್ದಾರೆ. ಕಳೆದ ಬಾರಿ ಕರೊನಾ ಕಾರಣದಿಂದ ಮಾವು ಬೆಳೆಗಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈ ಬಾರಿ ಕಾಳಜಿ ವಹಿಸಿದ್ದಾರೆ.    

ಮಂಜುನಾಥ ವೆರ್ಣೇಕರ ಮುಂಡಗೋಡ, ಮಾವು ಬೆಳೆಗಾರ: 

ನನ್ನ ನಾಲ್ಕು ಎಕರೆ ತೋಟದಲ್ಲಿ ಒಟ್ಟು 300 ಮಾವಿನ ಗಿಡಗಳಿದ್ದು ಕೇವಲ 80 ಗಿಡಗಳು ಮಾತ್ರ ಹೂವು ಬಿಟ್ಟಿವೆ. ಕೆಲವು ಗಿಡಗಳಲ್ಲಿ ಕಾಯಿಗಳು ಇಬ್ಬನಿಗೆ ಉದುರುತ್ತಿವೆ. ಈ ಬಾರಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. 


ಸುದ್ದಿ ಓದಿ