ಸರ್ವ ಧರ್ಮಗಳನ್ನು ಪ್ರೀತಿಸುವುದೆ ಭಾವೈಕ್ಯತೆ: ವಾಲಿಕಾರ
ತಾಳಿಕೋಟೆ 02: ಸರ್ವ ಧರ್ಮಗಳನ್ನು ಹೃದಯದಲ್ಲಿ ಸಮಾನವಾಗಿ ಪ್ರೀತಿಸುವುದು, ಅದರಂತೆ ನಡೆ ನುಡಿಯನ್ನು ಇಟ್ಟುಕೊಳ್ಳುವುದೇ ಭಾವೈಕ್ಯತೆಯಾಗಿದೆ ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸೀಂಪೀರ ವಾಲಿಕಾರ ಹೇಳಿದರು.
ತಾಲೂಕಿನ ಮೂಕಿಹಾಳ ದರ್ಗಾದ ಲಾಡ್ಲೆಮಶ್ಯಾಕ್ ದರ್ಗಾದ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ "ಭಾವೈಕ್ಯತೆಗೆ ಶರಣರ, ಸಂತರ ಹಾಗೂ ಸೂಫಿಗಳ ಕೊಡುಗೆ'' ಚಿಂತನ ಗೋಷ್ಠಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯೇ ಈ ನಾಡಿನ ಸಂಸ್ಕೃತಿಯಾಗಿದ್ದು ಬಹುತ್ವದಲ್ಲಿ ಸುಖವಿದೆ. ವಿಶ್ವಮಾನವತೆ ಸಾರಿದ ರಾಷ್ಟ್ರಕವಿ ಕುವೆಂಪು ಸಂದೇಶವನ್ನು ಇಟ್ಟುಕೊಂಡು ಸಮಭಾವದಿಂದ ಈ ನಾಡನ್ನು ಮುನ್ನಡೆಸೋಣ ಎಂದರು.
ಎಸ್.ಕೆ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಜಿ.ಎಂ.ಘಿವಾರಿ ಮಾತನಾಡಿ, ಹಿಂದು ಮುಸ್ಲಿಂ ಭಾವೈಕ್ತೆಯ ತವರಾಗಿ ಲಾಡ್ಲೇಮಶ್ಯಾಕ ದರ್ಗಾ ಬೆಳಗುತ್ತಿದೆ. ಮನುಷ್ಯರನ್ನು ಮನುಷ್ಯರಂತೆ ಗೌರವಿಸುವುದೇ ಮಾನವೀಯತೆ ಎಂದರು.
ಆರಂಭದಲ್ಲಿ “ಮಹಿಳೆಯರ ಸ್ಥಾನ ಮತ್ತು ಘನತೆ'' ಪ್ರಥಮಗೋಷ್ಠಿಯನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂಧ ಉದ್ಘಾಟಿಸಿ ಮಾತನಾಡಿ, ಮಹಿಳೆಗೆಈ ನಾಡಿನಲ್ಲಿ ದೇವತೆಯ ಸ್ಥಾನ ನೀಡಲಾಗಿದೆ. ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ ಮೊದಲಾದ ಸಂಬಂಧಗಳ ಮೂಲಕ ಬಾಳು ಬೆಳಗುವವಳು ಹೆಣ್ಣು ಎಂದರು.
ಶಿಕ್ಷಕಿ ವಿಜಯಲಕ್ಷಿ-್ಮ ಕವಲಗಿ,ಮಾತನಾಡಿದರು. ಎಸ್.ಕೆ.ಪ್ರೌಢಶಾಲೆ ಉಪ ಪ್ರಾಚಾರ್ಯ ಎಸ್.ಡಿ. ಕರ್ಜಗಿ ಮಾತನಾಡಿದರು.
ಮಳಖೇಡದ ಸೈಯ್ಯದಶಹಾ ಮುಸ್ತಫಾ ಖಾದ್ರಿ, ಇಂಗಳೇಶ್ವರ ವಚನಶಿಲಾ ಮಮಟಪದ ಚನ್ನಬಸವ ಸ್ವಾಮೀಜಿಗಳು ನಿಂಗನಗೌಡ ಪಾಟೀಲ, ಈರಸಂಗಪ್ಪಗೌಡ ಪಾಟೀಲ, ಜಾತ್ರಾಮಹೋತ್ಸವದ ಅಧ್ಯಕ್ಷ ಕೆ.ಎಚ್.ಪಾಟೀಲ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಕೆ.ಎಚ್.ನದಾಫ, ಎಸ್.ವಿ.ಸಜ್ಜನರ, ಎಸ್.ಎಸ್.ಗದಗಿನಮಠ, ಕಸಾಪ ತಾಲ್ಲೂಕಾ ಘಟಕದ ಅಧ್ಯಕ್ಷ ಆರ್.ಎಲ್.ಕೊಪ್ಪದ, ಸದಸ್ಯರುಗಳಾದ ಅರೀಪ್ ಹೊನ್ನುಟಗಿ, ಡಾ.ಸಿ.ಲಿಂಗಪ್ಪ, ಪುಟ್ಟು ಮಹೀಂದ್ರಕರ, ಜಗದೀಶ ಕಟ್ಟಿಮನಿ, ಇಬ್ರಾಹಿಂ ಮನ್ಸೂರ, ಆರ್.ಬಿ.ದಾನಿ ಸೇರಿದಂತೆ ಇತರರು ಇದ್ದರು. ಎ.ಎಸ್.ಹೊಸಗೌಡರ ಹಾಗೂ ಸಿದ್ಧನಗೌಡ ಕಾಶಿನಕುಂಟಿ ನಿರ್ವಹಿಸಿದರು.