ಪಾದಯಾತ್ರೆ ಸುವರ್ಣ ಸೌಧ ಮುಟ್ಟುವದರೊಳಗಾಗಿ ಸಿಹಿ ಸುದ್ದಿ: ವಿಜಯೋತ್ಸವ ಗ್ಯಾರಂಟಿ ; ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ: ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶ
ಲೋಕದರ್ಶನ ವರದಿ
ಸವದತ್ತಿ 20: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಇಂದು ತಮ್ಮ ಜವಾಬ್ದಾರಿಯುತ ಹೇಳಿಕೆಯನ್ನು ನೀಡಿದ್ದು, ಅಧಿವೇಶನದ ಅವಧಿಯಲ್ಲಿ ನಮಗೆ ಮೀಸಲಾತಿಯನ್ನು ನೀಡುವ ಕಿವಿಮಾತನ್ನು ನನಗೆ ಹೇಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಜನರು ಮೀಸಲಾತಿಯ ಕೊಡುವುದರ ಬಗ್ಗೆ ಚಿಂತೆ ಬಿಡಿ ವಿಜಯೋತ್ಸವದತ್ತ ಕಡೆಗೆ ಎಲ್ಲರೂ ಗಮನ ಹರಿಸಿ ಎಂದು ಸಮಾಜಕ್ಕೆ ಕರೆ ಕೊಟ್ಟರು. ಈ ಅಧಿವೇಶನದಲ್ಲಿ ನಾವು ಬರಿಗೈಯಲ್ಲಿ ಹೋಗುವ ಪ್ರಶ್ನೇನೆ ಇಲ್ಲ. ನಮ್ಮ ಹೋರಾಟ ನಿರಂತರವಾಗಿರಬೇಕಿದ್ದು, ನಮ್ಮ ಪಾದಯಾತ್ರೆ ಸುವರ್ಣ ಸೌಧ ಮುಟ್ಟುವದರೊಳಗಾಗಿ ಸಿಹಿ ಸುದ್ದಿ ಬರಲಿದ್ದು, ವಿಜಯೋತ್ಸವ ಆಚರಿಸುವುದು ಗ್ಯಾರಂಟಿ ಎಂದರು.
ಸಂವಿಧಾನತ್ಮಕವಾಗಿ ಹಿಂದುಳಿದ ಆಯೋಗದ ವರದಿಯಂತೆ ಮುಖ್ಯಮಂತ್ರಿಗಳು ಅದರ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದು, ವಿರೋಧ ಪಕ್ಷದವರು ಇದಕ್ಕೆ ಬೆಂಬಲ ನೀಡಬೇಕೆಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೀಸಲಾತಿ ಕುರಿತು ಸೂಕ್ಷ್ಮವಾಗಿ ನನ್ನೊಂದಿಗೆ ಮಾತನಾಡಿದ್ದು, ಈ ವಿಷಯವನ್ನು ಈ ಸಮಾವೇಶದಲ್ಲಿ ಮಾತನಾಡುವದು ಬೇಡ ಅದನ್ನು ಡಿ.22ರಂದು ಹೇಳುವದಾಗಿ ಸ್ಪಷ್ಟ ಪಡಿಸಿದರು.
ಎಲ್ಲ ಪಕ್ಷಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರಿಗೆ ಅವಕಾಶ ನೀಡಬೇಕಿದ್ದು, ಟೆಕೆಟ್ ಹಂಚಿಕೆಯ ಕೋರ್ ಕಮೀಟಿಯಲ್ಲಿ ನಮ್ಮ ಸಮಾಜದವರು ಕಡ್ಡಾಯವಾಗಿ ಇರಲೇ ಬೇಕೆಂದು ಒತ್ತಾಯಿಸಿದರು. ನೊಂದಂತ ಎಲ್ಲ ಸಮಾಜಗಳಿಗೆ ಮೀಸಲಾತಿ ದೊರಕಬೇಕಿದ್ದು, ಅದನ್ನು ಪಡೆದುಕೊಳ್ಳವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಲುಮತಕ್ಕೆ ಎಸ್.ಟಿ ಮೀಸಲಾತಿ ನೀಡು ಎಂದು ಹೇಳಿದವರು ನಾವೇ ಆಗಿದ್ದು, ಪಂಚಮಸಾಲಿ ಸಮಾಜದವರು ಮತ್ತೊಬ್ಬರ ಏಳ್ಗೆಗೆಗೆ ಚಿಂತನೆ ಮಾಡಿದವರು ಎಂದರು.
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಗಳು ಹೇಳಿದ ಮಾತು ಇಂದು ನಮ್ಮಲ್ಲಿ ನಿರಾಶೆಯನ್ನು ಮೂಡಿಸಿದ್ದು, ಇಂದಿನಿಂದ ವಿರಾಟ ಸಮಾವೇಶವನ್ನು ಆರಂಭಿಸಲಾಗುತ್ತಿದೆ ಎಂದರು. ಸವದತ್ತಿಯಿಂದ ಸುವರ್ಣ ಸೌಧದವರೆಗೆ ಪಾದಯಾತ್ರೆಯನ್ನು ಇಂದಿನಿಂದಲೇ ಪ್ರಾರಂಭಿಸಿಸುತ್ತಿದ್ದು, ಡಿ.22ರೊಳಗೆ ನಮಗೆ ಸಿಹಿ ಸುದ್ದಿ ಬರದೇ ಹೋದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕುವುದು ಶತಸಿದ್ಧ ಎಂದರು. ಡಿ.22ರಂದು 25ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಜನಾಂಗದವರು ಸುವರ್ಣ ಸೌಧದಮುಂದೆ ಸೇರುವಂತೆ ಕರೆ ಕೊಟ್ಟರು. ಮೀಸಲಾತಿ ಕೊಟ್ಟರೆ ಮುತ್ತಿನ ಹಾರ ಇಲ್ಲವಾದಲ್ಲಿ ಹರ ಹರ ಮಹಾದೇವ ಎಂಬ ಘೋಷಣೆಯೊಂದಿಗೆ ಸುವರ್ಣ ಸೌಧ ಮುತ್ತಿಗೆಯನ್ನು ಹಾಕಲಾಗುವುದು ಎಂದರು.
ಇಂದು ರಾತ್ರಿಯಿಂದಲೆ ಪಾದಯಾತ್ರೆ ಪ್ರಾರಂಭಗೊಂಡು ಕರೀಕಟ್ಟಿಯಲ್ಲಿ ವಸತಿ ಮಾಡಿ ಬೆಳವಡಿ, ಬೈಲಹೊಂಗಲ ಮಾರ್ಗವಾಗಿ ಹಿರೇಬಾಗೇವಾಡಿಯಿಂದ ಸುವರ್ಣ ಸೌಧದತ್ತ ಪಾದಯಾತ್ರೆ ಸಾಗಲಿದೆ ಎಂದರು. ಡಿ.22ರ ವಿರಾಟ ಸಮಾವೇಶಕ್ಕೆ ಗೋಕಾಕದಿಂದ 2.5ಲಕ್ಷ ರೊಟ್ಟಿ ಬರುತ್ತಿದ್ದು, ಅನೇಕ ದಾನಿಗಳು ಅನ್ನದಾಸೋಹಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.
ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಮೀಸಲಾತಿ ವಿಷಯದಲ್ಲಿ ರಾಜಕಾರಣ ಬೇಡವಾಗಿದ್ದು, ಸಮಾಜದ ಬಡಜನರಿಗೆ ನ್ಯಾಯ ಒದಗಿಸುವ ಕಾರ್ಯ ನಡೆಯಬೇಕಿದೆ ಎಂದರು. ಮುಖ್ಯಮಂತ್ರಿಗಳು ಒಮ್ಮೆಯಲ್ಲ 4 ಬಾರಿ ಆಶ್ವಾಸನೆ ನೀಡಿ ಮೀಸಲಾತಿಯ ಬಗ್ಗೆ ಹಿಂದೇಟು ಹಾಕುತ್ತಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರವರಿಂದ ನಾವು ಒಪ್ಪಿಗೆ ಕೊಡಿಸುತ್ತಿದ್ದು, ಆಡಳಿತ ಪಕ್ಷದ ಜವಾಬ್ದಾರಿ ಇಲ್ಲಿ ಪ್ರಮುಖವಾಗಿದೆ ಎಂದರು.
ಅರವಿಂದ ಬೆಲ್ಲದ ಮಾತನಾಡಿ, ಮುಖ್ಯಮಂತ್ರಿಗಳು ಮೀಸಲಾತಿ ಕೊಡುತ್ತಾರೆಂಬ ವಿಶ್ವಾಸ ನಮಗಿದ್ದು, ವಿರೋಧ ಪಕ್ಷದ ನಾಯಕರು ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಿ ಎಂದರು.
ವಿಜಯಾನಂದ ಕಾಶೆಪ್ಪನವರ ಮಾತನಾಡಿ, ಮಾತು ತಪ್ಪಿ ಅಕಾರ ಕಳೆದುಕೊಂಡ ಬಿ.ಎಸ್.ಯಡಿಯೂರ್ಪನವರ ನಂತರ ಈಗ ಬೊಮ್ಮಾಯಿಯವರ ಪಾಳೆ ಬಂದಿದ್ದು, ಮೀಸಲಾತಿ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಹೋದಲ್ಲಿ ಮುಖ್ಯಮಂತ್ರಿಗಳು ಕುರ್ಚಿ ಕಳೆದುಕೊಳ್ಳುವದು ಗ್ಯಾರಂಟಿ ಎಂದರು. ಎರಡು ಪೀಠಗಳನ್ನು ಒಂದು ಮಾಡುತ್ತೇವೆ ಎಂದು ಹೋಗಿ ಕೊನೆಗೆ ಮೂರನೆ ಪೀಠವನ್ನು ಮಾಡಿದ ನಿರಾಣಿಯವರು ತಮ್ಮ ಅಸ್ಥಿತ್ವವನ್ನೆ ಕಳೆದುಕೊಂಡಿದ್ದಾರೆ ಎಂದರು.
ಈರಣ್ಣ ಕಡಾಡಿ ಮಾತನಾಡಿ, ಮತ್ತೆ ಪಾದಯಾತ್ರೆ ಮೂಲಕ ಹೋರಾಟ ಮಾಡುವುದು ಅವಶ್ಯವಿಲ್ಲ ಎನಿಸುತ್ತಿದೆ. ನಮಗೆ ನ್ಯಾಯ ಸಿಗುವುದು ನಿಶ್ಚಿತವಾಗಿದ್ದು, ಮುಖ್ಯಮಂತ್ರಿಗಳು ಡಿ.22ರೊಳಗೆ ಪ್ರಮುಖ ನಿರ್ಧಾರವನ್ನು ಸ್ಪಷ್ಟಪಡಿಸಲಿದ್ದಾರೆ ಎಂದರು.
ವಿನಯ ಕುಲಕರ್ಣಿ, ರತ್ನಕ್ಕ ಮಾಮನಿ, ಪಂಚನಗೌಡ ದ್ಯಾಮನಗೌಡರ, ವಿರುಪಾಕ್ಷ ಮಾಮನಿ, ಅಲ್ಲಮಪ್ರಭು ಪ್ರಭುನವರ ಮಾತನಾಡಿದರು.
ಇದಕ್ಕೂ ಮುಂಚೆ ಎಪಿಎಮ್ಸಿಯಿಂದ ಸಹಸ್ರಾರು ಸಂಖ್ಯೆಯ ಪಂಚಮಸಾಲಿ ಜನಾಂಗದವರೊಂದಿಗೆ ಬೃಹತ್ತ ರಾ್ಯಲಿಯನ್ನು ಏರಿ್ಡಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳ ಹಾಗೂ ಕುಂಭ ಮೇಳಗಳೊಂದಿಗೆ ರಾ್ಯಲಿಯು ತಾಲೂಕು ಕ್ರೀಡಾಂಗಣ ತಲುಪಿತು.
ಶಂಕರ ಮಾಡಲಗಿ, ರುದ್ರಣ್ಣ ಚಂದರಗಿ, ಪಿ.ಐ.ಪಾಟೀಲ, ಡಾ.ವಿ.ಐ.ಪಾಟೀಲ, ರಾಜಶೇಖ ಕಾರದಗಿ, ಡಾ.ಎನ್.ಸಿ.ಬೆಂಡಿಗೇರಿ, ಬಸವರಾಜ ಕಾರದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಜಶೇಖರ ಕಾರದಗಿ ಸ್ವಾಗತಿಸಿದರು.