ಯುವಜನತೆ ಅಹಿಂಸಾ ಮಾರ್ಗದಲ್ಲಿ ಮುನ್ನಡೆಯಲಿ: ಸಿದ್ದಣ್ಣವರ
ಶಿಗ್ಗಾವಿ 14: ಇಡೀ ವಿಶ್ವವೇ ಎದುರಿಸುತ್ತಿರುವ ಈಗಿನ ಪ್ರಕ್ಷುಬ್ಧ ಸ್ಥಿತಿಗೆ ಅಹಿಂಸೆ ಒಂದೇ ಪರಿಹಾರ, ಭಗವಾನ್ ಮಹಾವೀರರು ಬೋಧಿಸಿರುವ ಅಹಿಂಸಾ ಮಾರ್ಗ ಮತ್ತು ಸಸ್ಯಾಹಾರ ಪಾಲಿಸಿದ್ದೇ ಆದರೆ ವಿಶ್ವಕ್ಕೆ ಕಂಟಕವಾಗಿ ಕಾಡುತ್ತಿರುವ ಯುದ್ಧೋನ್ಮಾದಿ ಕಾರ್ಮೋಡ ದಿಂದ ಮುಕ್ತಿ ಹೊಂದಬಹುದು, ಈ ನಿಟ್ಟಿನಲ್ಲಿ ಈಗಿನ ಯುವಜನತೆ ಅಹಿಂಸಾ ಮಾರ್ಗದಲ್ಲಿ ಮುನ್ನಡೆದಿದ್ದೇಯಾದರೆ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಿದ್ದು ಸಾರ್ಥಕವಾದಂತೆ ಆಗುತ್ತದೆ ಎಂದು ಮಹಾವೀರ್ ಜಯಂತಿ ಸೇವಾ ಸಮಿತಿ ಅಧ್ಯಕ್ಷರಾದ ಮಹಾದೇವಪ್ಪ ಸಿದ್ದಣ್ಣವರ ಹೇಳಿದರು.
ತಾಲೂಕಿನ ಬನ್ನೂರು ಗ್ರಾಮದಲ್ಲಿ ಭಗವಾನ್ ಶ್ರೀ 1008 ಮಹಾವೀರ ಜಿನಮಂದಿರ ಸೇವಾ ಸಮಿತಿಯವರು ಏರಿ್ಡಸಿದ್ದ ಮಹಾವೀರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವದ ಅತೀ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮದ ಸಾರ ವಾದ, ಅಹಿಂಸೆಯಿಂದ ಸುಖ, ಮೈತ್ರಿಯಿಂದ ಪ್ರಗತಿ, ತ್ಯಾಗದಿಂದ ಶಾಂತಿ, ಧ್ಯಾನದಿಂದ ಸಿದ್ದಿ ಎಂಬ ಮಹಾವೀರರ ವಾಣಿಯನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ, ಅಂತವರು ಮಾತ್ರ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಜಿನಮಂದಿರ ಸೇವಾ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಹೊನ್ನಪ್ಪನವರ್, ಸದಸ್ಯರುಗಳಾದ ಬಸವರಾಜ್ ಮಾಯಣ್ಣವರ , ಕೆ, ಸಿ, ಸಿದ್ದಣ್ಣವರ, ಸುನಿಲ್ ಬೋಗಾರ್, ಪ್ರವೀಣ್ ಸಿದ್ದಣ್ಣ ವಾರ್, ರವಿ ಹೊನ್ನಪ್ಪನವರ್ ಹಾಗೂ ಜೈನ ಸಮಾಜದ ಸಮಸ್ತ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಸಂಚರಿಸಿ, ಜಿನ ಮಂದಿರ ಆವರಣದಲ್ಲಿ ವೇದಿಕೆ ಸೇರಿತು.