ಉದ್ಯೋಗಕ್ಕಾಗಿ ಲಂಚ ಪ್ರಕರಣ: ಮಾಜಿ ಡಿಎಂಕೆ ಸಚಿವ ಕೆ.ಎನ್. ನೆಹರು ಅವರ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್
ಚೆನ್ನೈ, ಅ. 26 : ಹಿಂದಿನ ಡಿಎಂಕೆ ಆಡಳಿತಾವಧಿಯಲ್ಲಿ ನಡೆದಿತ್ತೆನ್ನಲಾದ ಬಹುಕೋಟಿ ಉದ್ಯೋಗಕ್ಕಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ, ಭ್ರಷ್ಟಾಚಾರ ಪ್ರಕರಣ ದಾಖಲಿಸುವಂತೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (ಡಿವಿಎಸಿ) ನೀಡಿದ್ದ ತನ್ನ ಹಿಂದಿನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಹಿರಿಯ ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ಮಾಜಿ ಪೌರಾಡಳಿತ ಸಚಿವ ಕೆ.ಎನ್. ನೆಹರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಮೊದಲ ಪೀಠವು ಅರ್ಜಿಯನ್ನು ವಜಾಗೊಳಿಸಿದ್ದು, ಪ್ರಕರಣದ ತನಿಖೆ ಮುಂದುವರಿಸಲು ರಾಜ್ಯದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿದೆ.
2026ರ ಫೆಬ್ರವರಿ 20ರಂದು ನೆಹರು ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಡಿವಿಎಸಿಗೆ ನಿರ್ದೇಶನ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಾಜಿ ಸಚಿವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
2025ರ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿದ್ದ ಪತ್ರ ಮತ್ತು 232 ಪುಟಗಳ ದಾಖಲೆ ಈ ವಿವಾದಕ್ಕೆ ಮೂಲವಾಗಿದೆ. ಪೌರಾಡಳಿತ ಮತ್ತು ಜಲಪೂರೈಕೆ ಇಲಾಖೆಯಲ್ಲಿ 2,538 ಸಹಾಯಕ ಎಂಜಿನಿಯರ್‌ಗಳು, ಕಿರಿಯ ಎಂಜಿನಿಯರ್‌ಗಳು ಹಾಗೂ ನಗರ ಯೋಜನಾ ಅಧಿಕಾರಿಗಳ ನೇಮಕಾತಿಗಾಗಿ 634 ಕೋಟಿ ರೂಪಾಯಿ ಲಂಚ ಸಂಗ್ರಹಿಸಲಾಗಿದೆ ಎಂದು ಇಡಿ ಆರೋಪಿಸಿತ್ತು.
ನೆಹರು ಅವರ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಮಾಜಿ ಸಚಿವರು, ಡಿವಿಎಸಿ ಮತ್ತು ರಾಜ್ಯ ಸರ್ಕಾರದ ಪರ ವಕೀಲರ ವಿಸ್ತೃತ ವಾದಗಳನ್ನು ಆಲಿಸಿದ ಮೊದಲ ಪೀಠವು ಆಗಸ್ಟ್ 10ರಂದು ತೀರ್ಪನ್ನು ಕಾಯ್ದಿರಿಸಿತ್ತು. ಮರುಪರಿಶೀಲನಾ ಅರ್ಜಿ ಇತ್ಯರ್ಥವಾಗುವವರೆಗೆ ನೆಹರು ವಿರುದ್ಧ ದಾಖಲಾದ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶವನ್ನೂ ನ್ಯಾಯಾಲಯ ವಿಸ್ತರಿಸಿತ್ತು.
ಇದಕ್ಕೂ ಮೊದಲು ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಜಾರಿ ನಿರ್ದೇಶನಾಲಯದ ಪತ್ರ ಹಾಗೂ ದಾಖಲೆಗಳ ಆಧಾರದ ಮೇಲೆ ನೆಹರು ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸುವಂತೆ ಡಿವಿಎಸಿಗೆ ನಿರ್ದೇಶನ ನೀಡಿತ್ತು.
ಎಐಎಡಿಎಂಕೆ ಸಂಸದ ಐ.ಎಸ್. ಇನ್‌ಬದುರೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ನಿರ್ದೇಶನ ನೀಡಲಾಗಿತ್ತು. 2025ರ ಡಿಸೆಂಬರ್ 13ರಂದು ತಾವು ಸಲ್ಲಿಸಿದ್ದ ಮನವಿ ಹಾಗೂ ಜಾರಿ ನಿರ್ದೇಶನಾಲಯ ಒದಗಿಸಿದ ದಾಖಲೆಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಅವರು ಕೋರಿದ್ದರು.
ಶಾಸನಬದ್ಧ ತನಿಖಾ ಸಂಸ್ಥೆಯೊಂದು ಗಂಭೀರ ಸ್ವರೂಪದ ಅಪರಾಧಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಒದಗಿಸಿದಾಗ, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳ ಪ್ರಕಾರ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯಸಭಾ ಸದಸ್ಯರು ವಾದಿಸಿದ್ದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್, ಜಾರಿ ನಿರ್ದೇಶನಾಲಯವು ಅಗತ್ಯ ದಾಖಲೆಗಳೊಂದಿಗೆ ಪತ್ರ ಸಲ್ಲಿಸಿದ್ದರೂ ಹಿಂದಿನ ಡಿಎಂಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ ಮಾಜಿ ಸಚಿವರನ್ನು ರಕ್ಷಿಸುವ ಪ್ರಯತ್ನ ಮಾಡಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇನ್‌ಬದುರೈ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನೆಹರು ಅವರಿಗೆ ನೋಟಿಸ್ ನೀಡಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಡಿಎಂಕೆ ನಾಯಕ ಆ ಅವಕಾಶವನ್ನು ಬಳಸಿಕೊಂಡಿರಲಿಲ್ಲ ಎಂದೂ ಅವರು ತಿಳಿಸಿದರು.
ನೆಹರು ಪರ ವಕೀಲರು, ತಮ್ಮ ಕಕ್ಷಿದಾರರ ವಾದ ಆಲಿಸದೆ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿರುವುದು ಅವರ ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆಯುಂಟುಮಾಡಿದೆ ಎಂದು ವಾದಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಹಿಂಪಡೆಯುವ ಅಧಿಕಾರ ಈಗಿನ ಸರ್ಕಾರಕ್ಕೆ ಇಲ್ಲ ಎಂದೂ ಅವರು ಪ್ರತಿಪಾದಿಸಿದರು.
ವಾದಗಳನ್ನು ಪರಿಶೀಲಿಸಿದ ನ್ಯಾಯಪೀಠವು, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 154ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವುದು ಕಡ್ಡಾಯ ಎಂದು ಅಭಿಪ್ರಾಯಪಟ್ಟಿತು. 2,538 ನೇಮಕಾತಿಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 66(2)ರ ಅಡಿಯಲ್ಲಿ ಒದಗಿಸಿರುವ ದಾಖಲೆಗಳನ್ನು ದೀರ್ಘಕಾಲದ ಪ್ರಾಥಮಿಕ ತನಿಖೆಯ ಹೆಸರಿನಲ್ಲಿ ಬಾಕಿ ಉಳಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಜಾರಿ ನಿರ್ದೇಶನಾಲಯ ಒದಗಿಸಿರುವ ದಾಖಲೆಗಳು ಮೇಲ್ನೋಟಕ್ಕೆ ಸಂಜ್ಞೇಯ ಅಪರಾಧಗಳು ನಡೆದಿರುವುದನ್ನು ಸೂಚಿಸುತ್ತವೆ. ಪ್ರಾಥಮಿಕ ತನಿಖೆ ಮುಂದುವರಿಸುವ ಮೂಲಕ ಎಫ್‌ಐಆರ್ ದಾಖಲಿಸುವುದನ್ನು ರಾಜ್ಯ ಸರ್ಕಾರ ವಿಳಂಬ ಮಾಡಬಾರದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿತು.
ಮಾಜಿ ಸಚಿವ ಕೆ.ಎನ್. ನೆಹರು ಅವರ ಮರುಪರಿಶೀಲನಾ ಅರ್ಜಿ ವಜಾಗೊಂಡಿರುವುದರಿಂದ, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಡಿವಿಎಸಿ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಮುಂದುವರಿಸಬಹುದಾಗಿದೆ.