ಪ್ರತಿ ಸಕ್ಕರೆ ಕಾರಖಾನೆ ಆವರಣದಲ್ಲಿ ಸರಕಾರವೇ ತೂಕದ ಯಂತ್ರಗಳನ್ನು ಅಳವಡಿಸಿ, ನಿರ್ವಹಿಸಲಿ
ಅಥಣಿ 14: ಪ್ರತಿ ಸಕ್ಕರೆ ಕಾರಖಾನೆ ಆವರಣದಲ್ಲಿ ಸರಕಾರವೇ ತೂಕದ ಯಂತ್ರಗಳನ್ನು ಅಳವಡಿಸಬೇಕು ಮತ್ತು ಈ ಯಂತ್ರಗಳನ್ನು ರಾಜ್ಯ ಸರಕಾರದ ಸಿಬ್ಬಂದಿಗಳೇ ನಿರ್ವಹಿಸಬೇಕು ಎಂದು ಮಾಜಿ ಸಚಿವ ಮತ್ತು ಅಥಣಿ ಶುಗರ್ಸ ಸಕ್ಕರೆ ಕಾರಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ ಸರಕಾರವನ್ನು ಆಗ್ರಹಿಸಿದರು.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 78 ಸಕ್ಕರೆ ಕಾರಖಾನೆಗಳ ಆವರಣದಲ್ಲಿಯೇ ಸರಕಾರ ಅಧಿಕೃತವಾಗಿ ತೂಕದ ಯಂತ್ರಗಳನ್ನು ಅಳವಡಿಸಿದಲ್ಲಿ ಮಾತ್ರ ತೂಕದಲ್ಲಾಗುವ ಮೋಸವನ್ನು ತಡೆಯಲು ಸಾಧ್ಯ ಎಂದರು. ಅಧಿವೇಶನಗಳಲ್ಲಿ ತೂಕದ ಮೋಸದ ಬಗೆಗೆ ಚರ್ಚೆ ಆಗುತ್ತಲೇ ಇದೆ ಆದರೆ ಇಂದಿನವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದ ಅವರು ರೈತರಿಗೆ ಕಾರಖಾನೆಗಳು ತೂಕದಲ್ಲಿ ಮಾಡುತ್ತಿರುವ ಮೋಸವನ್ನು ತಡೆಯುವ ದೃಷ್ಟಿಯಿಂದ ನಾನು ನನ್ನ ಮಾಲಿಕತ್ವದ ಸಕ್ಕರೆ ಕಾರಖಾನೆ ಪ್ರಾರಂಭಗೊಳ್ಳುವ ಮೊದಲಿನಿಂದ ಮತ್ತು ನಂತರವೂ ಹೋರಾಟ ಮಾಡುತ್ತಲೇ ಬಂದಿದ್ದೆನೆ ಎಂದು 2001 ರಿಂದ ಇಲ್ಲಿಯವರೆಗೆ ಮಾಡಿದ ಹೋರಾಟದ ದಾಖಲೆಗಳನ್ನು ಬಿಡುಗಡೆಗೊಳಿಸಿದರು.
2003 ರಲ್ಲಿ ಕಬ್ಬು ಬೆಳೆಗಾರರ ಸಂಘದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಮೋಹನ ಶಹಾ ಅವರಿಗೆ ಮನವಿಯೊಂದನ್ನು ಕೊಟ್ಟು ಪ್ರತಿ ಸಕ್ಕರೆ ಕಾರಖಾನೆಯ ಮುಖ್ಯ ದ್ವಾರದಲ್ಲಿ ತೂಕದ ಯಂತ್ರ ಸ್ಥಾಪಿಸಿ ಮತ್ತು ಈ ಯಂತ್ರವನ್ನು ನಿವೇ ನಿರ್ವಹಿಸಿ ಮತ್ತು ಇದಕ್ಕೆ ತಗಲುವ ಎಲ್ಲ ವೆಚ್ಚವನ್ನು ನಾನು ಭರುಸುತ್ತೇನೆ ಎಂದು ಆಗ್ರಹಿಸಿದ್ದೆ ಆದರೆ ಇಲ್ಲಿಯವರೆಗೂ ಅದು ಕಾರ್ಯ ರೂಪಕ್ಕೆ ಬರಲಿಲ್ಲ ಇಷ್ಟಕ್ಕೆ ಸುಮ್ಮನಾಗದ ನಾನು 2005 ರಲ್ಲಿ ಅಂದಿನ ಸರಕಾರದಲ್ಲಿ ಸಕ್ಕರೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮರೇಗೌಡ ಬೈಯ್ಯಾಪುರ ಇವರನ್ನು ಭೇಟಿ ಮಾಡಿ ಸರಕಾರದಿಂದಲೇ ತೂಕದ ಯಂತ್ರಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದ ಪರಿಣಾಮ ಜಿಲ್ಲೆಯ ಕೆಲ ಭಾಗಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಲಾಯಿತು ಆದರೂ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಹೇಳಿದರು.
2009 ರಲ್ಲಿ ನಾನು ಸ್ಥಳೀಯ ಇಬ್ಬರು ರೈತರಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತೂಕದಲ್ಲಾಗುತ್ತಿರುವ ಮೋಸವನ್ನು ಸರಿ ಪಡಿಸಬೇಕು ಎಂದು ಆಗ್ರಹಿಸಿ ರಿಟ್ ಅರ್ಜಿ ಹಾಕಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಲಾಗಿತ್ತು ಆದರೆ ಉಚ್ಚ ನ್ಯಾಯಾಲಯ ಇದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಆದರೂ ಸರಕಾರಕ್ಕೆ ತೂಕದಲ್ಲಾಗುತ್ತಿರುವ ಮೋಸವನ್ನು ತಡೆಯುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ಕೂಡ ಕೊಟ್ಟಿತ್ತು ಎಂದ ಅವರು 2010 ರಲ್ಲಿ ಕಾರಖಾನೆಗಳು ತೂಕದಲ್ಲಿ ಯಾವ ರೀತಿ ಮೋಸ ಮಾಡುತ್ತವೆ ಎನ್ನುವ ಕುರಿತು ವಿವರವಾಗಿ ಮಾಹಿತಿ ಕೊಡುವ ಮೂಲಕ ಸರಕಾರದ ಗಮನ ಸೆಳೆದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ರೈತರಿಗಾಗುವ ಮೋಸ ತಪ್ಪಿಸಲೆಂದು ಜಿಲ್ಲೆಯ ಅನೇಕ ಪ್ರಮುಖ ಸ್ಥಳಗಳಲ್ಲಿ ತೂಕದ ಯಂತ್ರಗಳನ್ನು ಸ್ಥಾಪಿಸಿದರು ಆದರೆ ಇಲ್ಲಿ ತೂಕ ಮಾಡಿಕೊಂಡು ಹೋಗುವ ಕಬ್ಬಿನ ವಾಹನಗಳಿಗೆ ಸಕ್ಕರೆ ಕಾರಖಾನೆಗಳು ಪ್ರವೇಶ ನಿರಾಕರಿಸಿದವು ಇದರ ಪರಿಣಾಮ ಈ ತೂಕದ ಯಂತ್ರಗಳು ಅನೇಕ ವರ್ಷಗಳಿಂದ ನಿರುಪಯುಕ್ತವಾಗಿವೆ ಎಂದು ಹೇಳಿದ ಅವರು ತೂಕದ ಯಂತ್ರಗಳನ್ನು ಅಳವಡಿಸಿದ ಸತೀಶ ಜಾರಕಿಹೊಳಿ ಇವರನ್ನು ನಾನು ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದೆ ಎಂದು ಹೇಳಿದರು.
2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಈ ಹಿಂದಿಗಿಂತಲೂ ಸದ್ಯದ ಸ್ಥತಿಯಲ್ಲಿ ತೂಕದಲ್ಲಿ ಭಾರೀ ಮೋಸ ನಡೆಯುತ್ತಿದ್ದು, ಇದನ್ನು ತಡೆಯಲು ತಕ್ಷಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಪರಿಣಾಮ ಸಿದ್ಧರಾಮಯ್ಯನವರು ಈ ವಿಷಯ ಗಂಭೀರವಾಗಿ ಪರಿಗಣಿಸಿ ಸಕ್ಕರೆ ಇಲಾಖೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು ಎಂದ ಅವರು ಇಷ್ಟಾದರೂ ಕೂಡ ತೂಕದಲ್ಲಿ ಮೋಸ ನಿಂತಿಲ್ಲ ಇದರ ಪರಿಣಾಮ ಕಬ್ಬು ಬೆಳೆಗಾರರಿಗೆ ಪ್ರತಿ ವರ್ಷ ನೂರಾರು ಕೋಟಿ ರೂ.ಗಳಷ್ಟು ಹಾನಿಯಾಗುತ್ತಿದ್ದು, ತಕ್ಷಣ ಸರಕಾರ ಸಕ್ಕರೆ ಇಲಾಖೆ ಮೂಲಕ ಕಾರಖಾನೆ ಆವರಣದಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿ ಸರಕಾರವೇ ನಿತಂತ್ರಿಸಬೇಕು ಆಗ ಮಾತ್ರ ರೈತರಿಗಾಗುವ ಮೋಸ ತಡೆಯಲು ಸಾಧ್ಯ ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರ ಸಂಘದ ಹಿರಿಯ ಮುಖಂಡ ದಾದಾ ಪಾಟೀಲ ಮಾತನಾಡಿ, ಕಬ್ಬಿನ ತೂಕದಲ್ಲಿ ಮೋಸವನ್ನು ತಡೆಯುವ ಸಂಬಂಧ ರಾಜ್ಯದಲ್ಲಿ ಹೋರಾಟ ಮಾಡಿದವರು ಯಾರಾದರು ಇದ್ದರೆ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತ್ರ ಎಂದ ಅವರು ಒಂದು ಸಕ್ಕರೆ ಕಾರಖಾನೆಯ ಅಧ್ಯಕ್ಷರಾಗಿ ಹೋರಾಟ ಮಾಡಿರುವುದು ವಿಶೇಷ. ಇವರು ಸಕ್ಕರೆ ಕಾರಖಾನೆಗಳನ್ನು ಕಟ್ಟಿ ರಾಜಕಾರಣಕ್ಕೆ ಬಂದಿದ್ದಾರೆ ಹೊರತು ರಾಜಕಾರಣಕ್ಕೆ ಬಂದು ಸಕ್ಕರೆ ಕಾರಖಾನೆ ಕಟ್ಟಿದವರಲ್ಲ ಎಂದು ಸ್ಪಷ್ಟ ಪಡಿಸಿದರು.