ಲಿಂಗಾಯತ ಕಂಬಾರ, ಬಡಿಗೇರ ಸಮಾಜಕ್ಕೆ ಸೌಲಭ್ಯ ದೊರೆಯಲಿ: ಮಡಿವಾಳಪ್ಪ ಬಡಿಗೇರ
ಬೈಲಹೊಂಗಲ 14: ಲಿಂಗಾಯತ ಕಂಬಾರ, ಬಡಿಗೇರ ಸಮಾಜ ಚಿಕ್ಕದಾಗಿದ್ದು ವಿಶ್ವಕರ್ಮ ಸಮಾಜದವರಿಗೆ ಸರಕಾರದಿಂದ ಸಿಗುವ ಸೌಲಭ್ಯ ಲಿಂಗಾಯತ ಕಂಬಾರ, ಬಡಿಗೇರ ಸಮಾಜಕ್ಕೂ ದೊರೆಯಬೇಕೆಂದು ಸಂಘದ ರಾಜ್ಯಾಧ್ಯಕ್ಷ ಮಡಿವಾಳಪ್ಪ ಬಡಿಗೇರ ಹೇಳಿದರು.
ಅವರು ರವಿವಾರ ತಾಲೂಕಿನ ಸಂಪಗಾಂವ ಗ್ರಾಮದ ಬಯಲು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕಂಬಾರ, ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ತಾಲೂಕಾ ಘಟಕ ಉದ್ಘಾಟಿಸಿ ಮಾತನಾಡಿ, 2011-12 ರಲ್ಲಿ ಲಿಂಗಾಯತ ಕಂಬಾರ, ಬಡಿಗೇರ ಸಮಾಜ ಆರಂಭಗೊಂಡಿದ್ದು ಈಗ ರಾಜ್ಯದ ತುಂಬೆಲ್ಲಾ ವಿಸ್ತರಿಸಲಾಗಿದೆ. ಅಲ್ಪ ಪ್ರಮಾಣವುಳ್ಳ ಸಮಾಜ ಬಾಂಧವರು ಶಿಕ್ಷಣವಂತರಾಗಿ ಸಂಘಟಿತರಾಗಿ ಸಮಾಜದಲ್ಲಿ ಮುಂದೆ ಬಂದು ಆರ್ಥಿಕವಾಗಿ ಸದೃಢÀರಾಗಬೇಕೆಂದರು.
ಕಠಾರಿಪೂರಿಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿವಪ್ಪಜ್ಜ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಮುಖಂಡ ಸುರೇಶ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಬಸವರಾಜ ಕಂಬಾರ, ವೀರಬಸು ಕಂಬಾರ, ಮಹಾಂತೇಶ ಕಂಬಾರ, ಗಂಗಪ್ಪ ಕಂಬಾರ, ಈಶ್ವರ ಬಡಿಗೇರ, ಬಸವಂತಪ್ಪ ಕಂಬಾರ, ಕಾಳಪ್ಪ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಶಂಕರ ಬಡಿಗೇರ, ಭೀಮನ್ನ ಬಡಿಗೇರ ಇದ್ದರು.
ರಾಜ್ಯ ಉಪಾಧ್ಯಕ್ಷ ಬಸವರಾಜ ಕಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀ ಕಂಬಾರ, ಪೂಜಾ ಬಡಿಗೇರ ಪ್ರಾರ್ಥಿಸಿದರು. ಮಡಿವಾಳಪ್ಪ ಕಂಬಾರ ಸ್ವಾಗತಿಸಿದರು, ವೀರೇಶ ಕಂಬಾರ ವಂದಿಸಿದರು. ಕಲಾವಿದರಾದ ಹನುಮಂತ ಪಾದಗಟ್ಟಿ, ಅಪ್ಪಯ್ಯ ಬಡಿಗೇರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.