ವ್ಯಕ್ತಿತ್ವ ವಿಕಸನ ಯುವಜನರ ಆದ್ಯತೆಯಾಗಲಿ
ರಾಣೇಬೆನ್ನೂರು 20: ನಾವು ಕೇವಲ ವ್ಯಕ್ತಿಯಾಗಿ ಬೆಳೆಯುವುದು ಮುಖ್ಯ ಅಲ್ಲ, ವ್ಯಕ್ತಿತ್ವ ವಿಕಸನ ಗೊಳಿಸಿಕೊಳ್ಳುವುದು ಯುವ ಜನರ ಆದ್ಯ ಕರ್ತವ್ಯವಾಗ ಬೇಕು. ತಂದೆ-ತಾಯಿ, ಗುರು ಗಳು ಹಾಗೂ ದೇಶಕ್ಕೆ ಗೌರವ ನೀಡಬೇಕು. ಐಎಎಸ್/ಐಪಿಎಸ್ ಮಾಡುವುದು ದೊಡ್ಡ ಸಾಧನೆಯಲ್ಲ, ಯಾವುದೇ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದಲ್ಲಿ ಮಾತ್ರ ಅದು ಸಾಧನೆ ಎನಿಸಿಕೊಳ್ಳುತ್ತದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಅವರು ನಗರದ ಮಾಗೋಡ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾಶ್ರಮದಲ್ಲಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಹಾವೇರಿ, ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶ, ಹಾವೇರಿ ಜಿಲ್ಲೆಯ ಪದವಿ ಕಾಲೇಜುಗಳು, ಜೈ ಮಾತೃ ಭೂಮಿ ಯುವ ಸಾಂಸ್ಕೃತಿಕ ಕ್ರೀಡಾ ಸಂಘ(ರಿ) ಕರೂರ, ಸಂಗಮೇಶ್ವರ ಯುವ ಸಂಘ, ನಿಟ್ಟೂರು ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ1 ಹಾಗೂ ಘಟಕ2, ಯುವ ರೆಡ್ ಕ್ರಾಸ್ ಹಾಗೂ ಐಕ್ಯೂಏಸಿ ಇವರುಗಳ ಸಂಯುಕ್ತಾಶ್ರಯಗಳಲ್ಲಿ ಹಾವೇರಿ ಜಿಲ್ಲಾ ಮಟ್ಟದ ಯುವ ಸಪ್ತಾಹದ ಸಮಾತೋಪ ಹಾಗೂ ಯುವ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಸಾನಿಧ್ಯವನ್ನು ವಹಿಸಿಕೊಂಡಿದ್ದ ಪೂಜ್ಯ ಶ್ರೀ ಪ್ರಕಾಶಾನಂದಜೀ ಮಹಾರಾಜ, ವಿವೇಕಾನಂದರು ತಮ್ಮ ಅಲ್ಪ ಆಯುಷ್ಯದಲ್ಲಿ ಸುಧೀರ್ಘ ಜೀವನ ಕಂಡು ಕೊಂಡಿರುವರು. ಯುವಜನರನ್ನು ಬಡಿದೆಬ್ಬಿಸಿ ಭಾರತ ಸ್ವತಂತ್ರಗೊಳ್ಳಲು ನಿಜವಾದ ಪ್ರೇರಕರೇ ವಿವೇಕಾನಂದರು. ಭಾರತ ಕೇವಲ ದೇಶವಲ್ಲ, ಇದೊಂದು ಅಧ್ಯಾತ್ಮದ ಕಣಜ ಎಂಬುದನ್ನು ವಿವೇಕಾನಂದರು ತೋರಿಸಿದ್ದಾರೆ ಎಂದರು. ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಮಂಗಳಗೌರಿ ಅವರು, ಯುವತಿಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಹ ಸೌಂದರ್ಯಕ್ಕೆ ಹೆಚ್ಚು ಗಮನ ಕೊಡದೇ ಮನಸ್ಸಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು. ಒಬ್ಬಂಟಿಯಾಗಿ ಹೋಗುವಾಗ ಪುರುಷರು ಕೈಹಿಡಿದು ಎಳೆಯುವ ಬದಲು ಕೈಮುಗಿಯುವಂತೆ ನಮ್ಮ ವೇಶಭೂಷಣಗಳಿರಬೇಕು ಎಂದರು.
ವಿಶ್ವವಿದ್ಯಾಲಯ ಎನ್ಎಸ್ಎಸ್ ಕೋಶದ ಸಮನ್ವಯಾಧಿಕಾರಿ ಡಾ. ಎಂ.ಬಿ. ದಳಪತಿ ಅವರು ಮಾತನಾಡಿ, ನಶಿಸಿ ಹೋಗುತ್ತಿರುವ ನಮ್ಮ ಭಾರತೀಯ ಸಂಸ್ಕೃತಿ ಅತ್ಯದ್ಬುತ ಹಾಗೂ ವೈಶಿಷ್ಟ್ಯವಾಗಿದೆ. ಈ ಭವ್ಯ ಸಂಸ್ಕೃತಿಯನ್ನು ಸಂರಕ್ಷಿಸುವುದು ಯುವ ಜನತೆಯ ಮೇಲಿದೆ ಎಂದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಸಂಜೀವ್ ಕೋರೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೌಶಲ್ಯ ತರಬೇತಿಗಳ ಕುರಿತು ವಿವರಿಸಿದರು. ಸಿಂಡಿಕೇಟ್ ಸದಸ್ಯರಾದ ಡಾ. ರಮೇಶ ರಾಠೋಡ ವೇದಿಕೆಯಲ್ಲಿದ್ದರು.
ಯುವ ಸಪ್ತಾಹದ ಅಂಗವಾಗಿ ಜಿಲ್ಲೆಯ ವಿವಿದೆಡೆ ನಡೆದ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಶಸ್ತಿಪತ್ರ ಹಾಗೂ ಬಹುಮಾನಗಳನ್ನು ನೀಡಲಾಯಿತು. ಪ್ರಾಂಶುಪಾಲರಾದ ಪ್ರೊ.ಎಲ್.ವಿ.ಸಂಗಳದ ಅಧ್ಯಕ್ಷತೆವಹಿಸಿ, ವಿವೇಕಾನಂದರನ್ನು ಅರಿತುಕೊಳ್ಳುವುದು ಇಂದಿನ ಪ್ರಥಮಾದ್ಯ ಕರ್ತವ್ಯ ಎಂದರು.
ಡಾ. ಅರುಣಕುಮಾರ ಚಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ.ಪಾಟೀಲ ಸ್ವಾಗತಿಸಿದರು. ಡಾ. ಕೆ.ರಾಘವೇಂದ್ರ ಅತಿಥಿಗಳನ್ನು ಪರಿಚಯಿಸಿದರು. ಸುನೀಲ ಘಟರೆಡ್ಡಿಹಾಳ ಪ್ರಾರ್ಥಿಸಿದರು. ಡಾ. ಸಿದ್ದಲಿಂಗಮ್ಮ ಬಿ.ಜಿ. ಬಹುಮಾನ ವಿತರಣೆ ನಡೆಸಿಕೊಟ್ಟರು. ಶ್ರೀಮತಿ ಗೀತಾ ಕೋಟೆಣ್ಣವರ ವಂದಿಸಿದರು.
ಆರ್.ಎಫ್.ಅಯ್ಯನಗೌಡ್ರ, ಡಾ.ಎ.ವಿ. ಕುರ್ಲಿ, ಡಾ.ಎಲ್.ಎಂ.ಪೂಜಾರ, ಡಾ.ಬಸವರಾಜಪ್ಪ ಪಿ.ಟಿ., ಎಸ್.ಎಂ.ಸೀತಾಳದ, ಡಾ.ಎಚ್.ವೆಂಕಟೇಶ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಸರಸ್ವತಿ ಬೊಮ್ಮನಾಳ, ಸುರೇಶ್ ಹೊರಟ್ಟಿ, ಎಂ.ಡಿ.ಹೊನ್ನಮ್ಮನವರ, ಕುಮಾರ ಬೆಣ್ಣಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿದ್ದರು.