ಸುಸ್ಥಿರ ಅಭಿವೃದ್ಧಿಯತ್ತ ಗ್ರಾಮವನ್ನು ಕರೆದೊಯ್ಯುವ ಕಾರ್ಯವಾಗಲಿ
ತಾಲೂಕಾ ಪಂಚಾಯತಿ ಇಓ ಯಶವಂತಕುಮಾರ: ಗ್ರಾಮ ಪಂಚಾಯತಿ ದೂರದೃಷ್ಠಿ ಯೋಜನೆಗೆ ಚಾಲನೆ
ಸವದತ್ತಿ-22: ಕೇವಲ ರಸ್ತೆ, ಚರಂಡಿಯನ್ನು ನಿರ್ಮಿಸಿದರೆ ಸಾಲದು, ಗ್ರಾಮದಲ್ಲಿನ ವಿವಿಧ ಸಮಸ್ಯೆ ಪರಿಹರಿಸಿ ಸುಸ್ಥಿರ ಅಭಿವೃದ್ಧಿಯತ್ತ ಗ್ರಾಮವನ್ನು ಕರೆದೊಯ್ಯುವ ಕಾರ್ಯ ಮಾಡಬೇಕೆಂದು ತಾಲೂಕಾ ಪಂಚಾಯತಿ ಇಓ ಯಶವಂತಕುಮಾರ ಹೇಳಿದರು.
ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಗ್ರಾಮ ಪಂಚಾಯತಿ ದೂರದೃಷ್ಠಿ ಯೋಜನೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯತ್ನಲ್ಲಿ ಉದ್ಭವಾಗುವ ಸಮಸ್ಯೆಗಳ ಕುರಿತು ಇಂದೇ ಸಂಪನ್ಮೂಲ ಮತ್ತು ಎಲ್ಲ ರೀತಿಯ ಅನುದಾನದ ಬಳಕೆಯಿಂದ ಪರಿಹಾರ ಕಂಡುಕೊಳ್ಳುವ ಯೋಜನೆ ಇದಾಗಿದೆ. ಮುಂದಿನ 5 ವರ್ಷಗಳಲ್ಲಿ ಗ್ರಾಮದಲ್ಲಿನ ಸಮಸ್ಯೆಗಳಿಗೆ ಶಾಸ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಿ ಸುಸ್ಥಿರ ಅಭಿವೃದ್ಧಿ ಕಾಣಬೇಕಿದೆ. ಪಂಚಾಯತಿಯ ಸರ್ವಾಂಗೀಣ ಅಭಿವೃದ್ಧಿ ಜಿಪಿಡಿಪಿ ಮುಖ್ಯ ಉದ್ದೇಶವಾಗಿದೆ.
ಗ್ರಾಮೀಣದ ಅಭಿವೃದ್ಧಿಗೆ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ತರಬೇತಿ ಅಗತ್ಯವಾಗಿದೆ. ಸಮಸ್ಯೆಗಳ ಆಧ್ಯತೆ ಮೇರೆಗೆ ಯೋಜನೆ ರೂಪಿಸಿ ಪರಿಹರಿಸುವ ಕಾರ್ಯ ನಿರಂತರ ನಡೆಯಲಿ. ತಾಲೂಕಿನ ಎಲ್ಲ ಪಂಚಾಯತಿಗಳ ಅಧ್ಯಕ್ಷರು ಆಗಮಿಸುವ ನೀರೀಕ್ಷೆ ಇತ್ತು. ಕೆಲವರು ಮಾತ್ರ ಹಾಜರಾಗಿದ್ದಾರೆ. ಮುಂದಿನ ತರಬೇತಿ ಶಿಬಿರದಲ್ಲಿ ಎಲ್ಲರೂ ಸೇರಿ ಗ್ರಾಮಗಳ ಸುಸ್ಥಿರ ಅಭಿವೃದ್ಧಿಯತ್ತ ಶ್ರಮಿಸೋಣ ಎಂದರು
ನರೇಗಾ ಎಡಿ ಎಸ್.ಎಸ್. ಹಂದ್ರಾಳ ಮಾತನಾಡಿ, ಗ್ರಾಮೀಣದ ಸಮಸ್ಯೆಯನ್ನು ಗ್ರಾಮದಲ್ಲಿಯೇ ಪರಿಹರಿಸಲೆಂದು ಅಧಿಕಾರ ವಿಕೇಂದ್ರಿಕರಣಕ್ಕೆ ಪಂಚಾಯತ ರಾಜ್ ಇಲಾಖೆಯನ್ನು ಶಾಸನ ಬದ್ದವಾಗಿ ಸೃಷ್ಠಿಸಲಾಯಿತು. ಇದರಿಂದ ಗ್ರಾಮಗಳಲ್ಲಿರುವ ಬಹುಜನರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವಲ್ಲಿ ಸಹಕಾರಿಯಾಗುತ್ತದೆ.
ಅಪೌಷ್ಠಿಕತೆ, ಬಡತನ, ನಿರುದ್ಯೋಗ, ಶಿಶು ಮರಣ ಪ್ರಮಾಣ ಸೇರಿ ಕೆಲ ಅಂಶಗಳು ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ನಗರ ಪ್ರದೇಶಗಳಲ್ಲಿರದ ಸೌಲಭ್ಯಗಳು ಮತ್ತು ಅನುದಾನ ಗ್ರಾಮೀಣ ಭಾಗಕ್ಕೆ ಇದೆ. 26 ಇಲಾಖೆಗಳ ಯೋಜನೆಗಳ ಸಹಕಾರದಿಂದ ಇವುಗಳ ಸದ್ಬಳಕೆಯಾಗಲಿ. ಏಕಕಾಲದಲ್ಲಿ ಕಾರ್ಯಗಳು ನಡೆಸಲಾಗುತ್ತಿದ್ದು ಈ ಕುರಿತು ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಡಾ. ಮಾರುತಿ ಚೌಡಕ್ಕನವರ, ಆರ್.ಎ. ಪಾಟೀಲ, ಗ್ರಾ.ಪಂ ಅಧ್ಯಕ್ಷರು, ಪಿಡಿಒಗಳಿದ್ದರು.