ಒಂದು ಬಾರಿ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಲಿ: ಡಿ. ಟಿ.ಪಾಟೀಲ
ಸಂಕೇಶ್ವರ 02: ರಾಜ್ಯದ ಸಕ್ಕರೆ ಜಿಲ್ಲೆ ಎಂದೇ ಖ್ಯಾತಿ ಗಳಿಸಿರುವ ಬೆಳಗಾವಿ ಸಂಕೇಶ್ವರ ಪಟ್ಟಣದಲ್ಲಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ದಿ. ಅಪ್ಪಣ್ಣಗೌಡ ಪಾಟೀಲ ಇವರ ನೇತೃತ್ವದಲ್ಲಿ ಇಡೀ ದೇಶದಲ್ಲಿಯೇ ದಾಖಲೆಯ ಬೆಲೆಯನ್ನು ನೀಡಿ ಖ್ಯಾತಿಯನ್ನು ಪಡೆದಿತ್ತು. ರೈತರ ಕಷ್ಟ ಸುಖಗಳಿಗೆ ಅಂದಿನ ಕಾಲದಲ್ಲಿ ಸರ್ಕಾರ ಆಡಳಿತ ಮಂಡಳಿಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದವು. ಆದರೆ ಇಂದು ರೈತನು ತುಂಬಾ ಕಷ್ಟದಲ್ಲಿದ್ದಾನೆ. ನಿಸರ್ಗವು ಕೂಡ ಅವನಿಗೆ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ಕಷ್ಟ ಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಆರ್ಥಿಕವಾಗಿ ಕುಗ್ಗಿ ಹೋಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಹಕಾರಿ ಧುರೀಣ ಡಿ.ಟಿ. ಪಾಟೀಲ ಕರಗಾಂವ ಹೇಳಿದರು.
ಇಂದು ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರಗಳು ಬಿಜೆಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ರೈತರ ಬಾಳು ಹಸನಾಗುತ್ತಿಲ್ಲ. ರೈತನು ಸಾಲದ ಸುಳಿಗೆ ಸಿಲುಕಿ ಕುಗ್ಗಿ ಹೋಗಿದ್ದಾನೆ. ರಾಜ್ಯ ಸರಕಾರಗಳು ಕೆಲವು ಮಟ್ಟಿಗೆ ರೈತರ ಸಾಲದ ಬಡ್ಡಿ ಮನ್ನಾ ಮಾಡುತ್ತಿದ್ದರೂ ಕೇಂದ್ರ ಸರಕಾರಗಳು ರೈತರ ಪರವಾಗಿ ನಿಲ್ಲುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಬಾರತವು ಕೃಷಿ ಪ್ರಧಾನ ವಾದ ದೇಶವಾಗಿದೆ. ರೈತರ ದೇಶದ ಬೆನ್ನೆಲುಬು ಎಂದು ಭಾಷಣ ಬಿಗಿಯುತ್ತಾರೆ. ಆದರೆ ರೈತರ ಬಗ್ಗೆ ಕೇಂದ್ರ ಸರ್ಕಾರದ ಕಳಕಳಿ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ಕೇಂದ್ರ ಸರ್ಕಾರ ಕೈಗಾರಿಕಾ ಉದ್ಯಮಿಗಳ ಸಾಲವನ್ನು ಬಡ್ಡಿಯನ್ನು ಮನ್ನಾ ಮಾಡುತ್ತದೆ. ದೇಶದ ಬ್ಯಾಂಕುಗಳಿಗೆ ಮೋಸ ಮಾಡಿ ದೇಶ ಬಿಟ್ಟು ಓಡಿ ಹೋಗುವ ದೇಶ ದ್ರೋಹಿಗಳ ಸಾಲವನ್ನು ಮನ್ನಾ ಮಾಡುತ್ತದೆ. ಆದರೆ ಹಗಲಿರುಳು ದೇಶಕ್ಕಾಗಿ ಹೊಲದಲ್ಲಿ ದುಡಿಯುವ ರೈತರ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ಕಷ್ಟಪಟ್ಟು ಹೊಲದಲ್ಲಿ ದುಡಿದ ರೈತರ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಕೃಷಿ ಪ್ರಧಾನವಾದ ಈ ದೇಶದಲ್ಲಿ ರೈತರನ್ನು ನಿರ್ಲಕ್ಷಿಸಲಾಗುತ್ತಿದೆ. ಇದರ ಬಗ್ಗೆ ಆಡಳಿತ ಪಕ್ಷವಾಗಲಿ ವಿರೋಧ ಪಕ್ಷಗಳಾಗಲಿ ಬೇರೆ ಯಾವುದೇ ಪಕ್ಷಗಳಾಗಲಿ ಆಸಕ್ತಿಯನ್ನು ತೋರುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರಿಂದ ಸರ್ಕಾರಗಳು ಒಂದು ಬಾರಿ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೋದಲೆಲ್ಲಾ ಸಬ್ಕಾ ಸಾಥ ಸಬ್ ಕಾ ವಿಕಾಸ ಎಂಬ ಘೋಷಣೆಯನ್ನು ಕೂಗುತ್ತಾರೆ. ಆದರೂ ರೈತರನ್ನು ಕಡೆಗಣಿಸಲಾಗುತ್ತಿದೆ. ದೇಶದಲ್ಲಿ ರೈತರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ ಎಂಬ ವ್ಯಥೆ ಇದೆ. ಇನ್ನಾದರೂ ಎಲ್ಲ ಪಕ್ಷಗಳು, ಧುರೀಣರು ಪಕ್ಷ ಬೇಧ ಭಾವ ಮರೆತು ರೈತರನ್ನು ಕಾಪಾಡಬೇಕು. ಅವರು ಬೆಳೆದ ಬೆಳೆಗೆ ಯೋಗ್ಯವಾದ ಬೆಲೆ ಕೊಟ್ಟು ಅವರು ಬದುಕಲು ದಾರಿ ಕಲ್ಪಿಸಿ ಕೊಡಬೇಕೆಂದು ಹೇಳಿದ್ದಾರೆ.