ಕಾಗವಾಡದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ; ಪ್ರತಿಯೊಬ್ಬರಿಗೂ ಸಾಮಾನ್ಯ ಕಾನೂನು ತಿಳುವಳಿಕೆ ಅಗತ್ಯ
ಲೋಕದರ್ಶನ ವರದಿ
ಕಾಗವಾಡ 08 : ಪ್ರತಿಯೊಬ್ಬರಿಗೂ ಸಾಮಾನ್ಯ ಕಾನೂನು ಜ್ಞಾನ ಇಂದಿನ ಅಗ್ಯವಾಗಿದ್ದು, ಕಾನೂನು ಗೊತ್ತಿಲ್ಲವೆಂದು ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಕಾನೂನಿಗೆ ತಲೆಬಾಗಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾಗವಾಡ ಜೆಎಂಎಫ್ಸಿ ಸಿವ್ಹಿಲ್ ನ್ಯಾಯಾಧೀಶೆ ರೂಪಾ ಚಿನವರ ಹೇಳಿದರು. ಅವರು ಶನಿವಾರ ದಿ. 07 ರಂದು ಪಟ್ಟಣದ ಶಿವಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ, ತಾಲೂಕಾ ಕಾನೂನು ಸೇವಾ ಸಮಿತಿ ಕಾಗವಾಡ, ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಪಟ್ಟಣ ಪಂಚಾಯತಿ,
ಶಿವಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ನ್ಯಾಯ ನಿಮ್ಮದು, ನೆರವು ನಮ್ಮದು ಎಂಬ ಧ್ಯೇಯದೊಂದಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ರಕ್ಷಣೆಯ ಕುರಿತು ವಿವರಿಸಿದರು. ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಗವಾಡ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಎಸ್. ಕನ್ನಾಳ ವಹಿಸಿದ್ದರು. ಪಟ್ಟಣದಲ್ಲಿ ಪ್ರಾರಂಭಗೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಬಳಿಕ ತಾಲೂಕಿನ ವಿವಿಧ ಶಾಲೆಗಳಲ್ಲಿ ನ್ಯಾಯವಾದಿಗಳ ಸಂಘದ ಪದಾಧೀಕಾರಿಗಳು ಮತ್ತು ವಕೀಲರು ಹಮ್ಮಿಕೊಂಡು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ರವೀಂದ್ರ ಹಾದಿಮನಿ, ತಾ.ಪಂ. ಇಓ ವೀರಣ್ಣಾ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಮಧಬಾವಿ, ಅತಿಥಿಗಳಾಗಿ ಸರ್ಕಾರಿ ಅಭಿಯೋಜಕ ಬಸವರಾಜ ಕಾಂಬಳೆ, ಸಿಡಿಪಿಓ ಆರ್.ವ್ಹಿ. ಗುದಗೆನ್ನವರ, ಪ.ಪಂ. ಮುಖ್ಯಾಧಿಕಾರಿ ಪಿ.ಎ. ಕಲ್ಯಾಣಶೆಟ್ಟಿ, ಪಿಎಸ್ಐ ಆರ್.ಎಸ್. ಖೋತ, ಶಿವಾನಂದ ಶಾಲೆಯ ಮುಖ್ಯಾದ್ಯಾಪಕ ಎಸ್.ಆರ್. ಪಂಢರಪೂರೆ ಸೇರಿದಂತೆ ನ್ಯಾಯಾವಾದಿಗಳು, ಶಿಕ್ಷಕರು, ಅಧಿಕಾರಿಗಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.