ಹೊಸಪೇಟೆ

ಬಸವಣ್ಣ : ಪರ್ಯಾಯ ಸಂಸ್ಕೃತಿ ಜನಕ

ಬಸವಣ್ಣ : ಪರ್ಯಾಯ ಸಂಸ್ಕೃತಿ ಜನಕ

ಹೊಸಪೇಟೆ 17: ಪರ್ಯಾಯ ಸಂಸ್ಕೃತಿಯನ್ನು ಹುಟ್ಟು ಹಾಕುವ ಮೂಲಕ ಬಸವಣ್ಣನವರು ಸಮಾಜದಲ್ಲಿದ್ದ ಅಸಮಾನತೆಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಅಮರೇಶ ನುಗಡೋಣಿ ಅವರು ಅಭಿಪ್ರಾಯ ಪಟ್ಟರು. 

ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗವು ದಿನಾಂಕ 15ರಂದು ಭುವನ ವಿಜಯದಲ್ಲಿ ಬಸವ ಜಯಂತಿ ಪ್ರಯುಕ್ತ ಏರಿ​‍್ಡಸಿದ್ದ ಉಪನ್ಯಾಸ ಮತ್ತು ವಚನ ಗಾಯನ ಕಾರ್ಯಕ್ರಮದಲ್ಲಿ ಬಸವಣ್ಣ : ಪರ್ಯಾಯ ಸಂಸ್ಕೃತಿ ಜನಕ ಕುರಿತು ಉಪನ್ಯಾಸ ನೀಡುತ್ತಿದ್ದರು. 

ಆ ಕಾಲದಲ್ಲಿ ವರ್ಣಭೇದ, ವರ್ಗಭೇದ ಜಾತಿ, ವೃತ್ತಿ, ಲಿಂಗ, ಆಹಾರ, ವಾಸದ ಸ್ಥಳಗಳಲ್ಲಿ ಇಂತಹ ಅನೇಕ ಭೇದಗಳು ಅಸಮಾನತೆಗಳು ತುಂಬಿ ತುಳುಕುತ್ತಿದ್ದವು. ಜೊತೆಗೆ ಹಲವು ನಿಷೇಧಗಳೂ ಇದ್ದವು. ಬಸವಣ್ಣನವರು ಇವ ನಮ್ಮವ ಇವ ನಮ್ಮವ ಎಂದು ಅಣ್ಣ, ಅಕ್ಕ, ಅಯ್ಯ ಎಂದು ಕರೆಯುವ ಸಂಸ್ಕೃತಿಯ ಮೂಲಕ ಕೆಳವರ್ಗಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಪರಿಣಾಮವಾಗಿ, ಧರ್ಮದ ನಿರಾಕರಣೆ, ಪ್ರಭುತ್ವದ ನಿರಾಕರಣೆ ಅಗ್ರಹಾರ, ಮಠ-ಮಾನ್ಯ, ದೇವಾಲಯಗಳ ನಿರಾಕರಣೆಯ ಚಳುವಳಿ ಕೆಳವರ್ಗಗಳಿಂದ ಆರಂಭವಾಯಿತು. ಕೆಳವರ್ಗಗಳು ಬೇಡುವ ಜಾಗದಲ್ಲಿ ಕೆಳವರ್ಗಗಳೇ ದಾಸೋಹ ನೀಡುವ ಸಂಸ್ಕೃತಿಯನ್ನು ಹುಟ್ಟುಹಾಕಿ ದುಡಿದರೆ ಮಾತ್ರ ಲಿಂಗಕ್ಕೆ ಅರ​‍್ಿಸಬೇಕೆಂದು ಕಾಯಕತತ್ವದ ಪಾವಿತ್ರ್ಯವನ್ನು ತಂದ ಬಸವಣ್ಣನವರು ಸಂಪತ್ತಿನ ಸಮಾನತೆ ತಂದರು ಎಂದು ನುಗಡೋಣಿ ಅವರು ವಿವರಿಸಿದರು. 

ಕಲಿಸುವ ಹಕ್ಕನ್ನು ನಿರಾಕರಿಸುವ ಸಂದರ್ಭದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಅಕ್ಷರ ಕಲಿಸಿರಬಹುದು. ಇಂದಿನ ವಿದ್ವಾಂಸರಿಗೆ ಸವಾಲಾಗುವ ರೀತಿಯಲ್ಲಿ ವಚನ ಸಾಹಿತ್ಯ ರಚನೆ ಆಯಿತು. ಅನುಭವ ಮಂಟಪದಲ್ಲಿ ನಾಯಕನನ್ನು ಮಾಡಿಕೊಳ್ಳುವ ಅಗತ್ಯ ವಚನಕಾರರಿಗೆ ಕಾಣಲಿಲ್ಲ. ದೇವಾಲಯ ನಿರಾಕರಣೆಯ ಮೂಲಕ ಲಿಂಗದ ಪರಿಕಲ್ಪನೆ ತಂದು ಅರಿವಿನ ದಾರಿ ತೋರಿಸಿದರು. ದೇವಾಲಯ ನಿರಾಕರಣೆಯಿಂದ ಪ್ರಭುತ್ವಕ್ಕೆ ಆದಾಯದ ಹೊಡೆತ ಯಾವ ಮಟ್ಟದಲ್ಲಿ ಬಿದ್ದಿರಬಹುದೆಂದು ಊಹಿಸಲಾಗದು. ಹೀಗೆ ಬಸವಣ್ಣನವರ ಗುಂಪು ಪ್ರವಾಹದ ವಿರುದ್ಧ ಹೋದಂತೆ ಕಂಡರೂ ಪರ್ಯಾಯ ಸಂಸ್ಕೃತಿಯನ್ನು ಕಟ್ಟುತ್ತಲಿತ್ತು. ಆದರೆ ಈ ಉತ್ಸಾಹ ಮುಂದೆಯೂ ಉಳಿಯಬೇಕಿತ್ತು ಎಂದು ಅನಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಪಶ್ಚಿಮದ ಸ್ತ್ರೀವಾದಕ್ಕೆ ಬೇಕಾದ ಎಲ್ಲ ಮೂಲ ಆಕರಗಳು ವಚನ ಸಾಹಿತ್ಯದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವರಾದ ಡಾ.ವಿಜಯ ಪೂಣಚ್ಚ ತಂಬಂಡ ಅವರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ವಿಶ್ವಗುರು ಎಂದು ಘೋಷಿಸಿರುವುದು ಕನ್ನಡಕ್ಕೆ ಕೊಟ್ಟ ಅತಿದೊಡ್ಡ ಗೌರವ ಎಂದು ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತ, ರಾಜ್ಯ, ರಾಷ್ಟ್ರ, ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ಕೊಡುಗೆ ಬಗ್ಗೆ ಚರ್ಚೆಯಾಗುತ್ತಿರುವ ಹೆಮ್ಮೆಯ ಸಂಗತಿ ಎಂದರು. 

ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿದ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರ ಕಾರ್ಯಕ್ರಮದ ರೂಪುರೇಷೆ ತಿಳಿಸಿ, ಶಾಸ್ತ್ರೀಯ, ಜಾನಪದ, ಅಲೆಮಾರಿ, ಫ್ಯೂಷನ್ ಮಾದರಿಯಲ್ಲಿ ವಿದ್ಯಾರ್ಥಿಗಳು ಹಾಡಲಿದ್ದಾರೆ. ಎಲ್ಲರೂ ಪ್ರೋತ್ಸಾಹಿಸಿ ಎಂದರು. 

ಉಪನ್ಯಾಸದ ಆರಂಭದ ಮೊದಲು ವೇದಿಕೆಯ ಮೇಲಿನ ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. 

ನಂತರ ವಚನ ನೃತ್ಯ ಮತ್ತು ಗಾಯನ ಕಾರ್ಯಕ್ರಮ ನಡೆದವು.  

ದೃಶ್ಯಕಲಾ ವಿಭಾಗದ ಓ.ಇ. ವಿದ್ಯಾರ್ಥಿನಿ(ಬಿವಿಎ 1ನೇ ಸೆಮಿಸ್ಟರ್) ಕು. ಮಮ್ತಾಜ್ ಅತ್ತ ಇತ್ತ ಹೋಗದಂತೆ ಹೆಳವನ ಮಾಡಯ್ಯ ವಚನಕ್ಕೆ ಭರತನಾಟ್ಯ ಪ್ರದರ್ಶಿಸಿದರು. 

ಸಂಗೀತ ವಿಭಾಗದ ದುರ್ಗೇಶ ಮತ್ತು ಹನುಮಂತ ಎನ್ನ ಕಾಯವ ದಂಡಿಗೆಯ ಮಾಡಯ್ಯ ವಚನವನ್ನು ಜುಗಲ್ ಬಂದಿಯಲ್ಲಿ ನಡೆಸಿಕೊಟ್ಟರು. 

ರವಿವರ್ಮ ಮತ್ತು ಗುಂಡಿ ಭರತ್ ಕವಾಲಿಶೈಲಿಯಲ್ಲಿ ಕಳಬೇಡ ಕೊಲಬೇಡ ವಚನ ಪ್ರಸ್ತುತಪಡಿಸಿದರು. ಕಲ್ಲನಾಗರ ಕಂಡರೆ ವಚನವನ್ನು ಕು. ಅಕ್ಷತಾ ಇಂಪಾಗಿ ಹಾಡಿ ಬೇಸಿಗೆಯ ಬಿಸಿಲ ದಣಿವಾರಿಸಿದರು. ರಂಜನಿ ಅವರು ನಿಮ್ಮ ಶರಣರಿಗೆ ಎಂದು ಪ್ರತಿಭಟನೆಯ ದಾಟಿಯಲ್ಲಿ ಹಾಡಿದರು. 

ಕ್ಲಾಸಿಕಲ್ ಫ್ಯೂಷನ್ ಪ್ರಯೋಗವನ್ನು ಪ್ರಥಮಬಾರಿಗೆ ನಡೆಸಿದ ಗುಂಡಿ ಭರತ್ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ವೆಸ್ಟರ‌್ನರ್ ಶೈಲಿಯಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಇದಕ್ಕಾಗಿ ಕಹೋನ್ ವಾದ್ಯವನ್ನು ದಿನೇಶ್ ಅವರು ಹಾಗೂ ಕಿರಣ್ ಅವರು ಗಿಟಾರ್ ಅನ್ನು ಮಧುಸೂದನ್ ಕೀಬೋರ್ಡ್‌ ನುಡಿಸಿ ಕಳೆಗಟ್ಟಿಸಿದರು. 

ಶಾಸ್ತ್ರೀಯ ಪದ್ಧತಿಯ ಪ್ರಕಾರ ಗಾಯನದ ಮುಕ್ತಾಯವನ್ನು ಪಿಎಚ್‌.ಡಿ. ಸಂಶೋಧಕಿ ವಿನಯಶ್ರೀ ಅವರು ಚಕೋರಂಗೆ ಚಂದ್ರಮನ ವಚನವನ್ನು ಭೈರವಿಯಲ್ಲಿ ಹಾಡಿ ಎಲ್ಲರ ಮನಸೂರೆ ಮಾಡಿದರು. 

ಈ ಎಲ್ಲ ವಚನಗಳ ಗಾಯನಕ್ಕೆ ಡಾ. ತಿಮ್ಮಣ್ಣ ಭೀಮರಾಯ್ ಮಾನ್ಪಡೆ ರಾಗಸಂಯೋಜನೆ ಮಾಡಿದ್ದರು. ಶ್ರೀ ದೊಡ್ಡಬಸಪ್ಪ, ಹನುಮಂತಪ್ಪ, ಮಲ್ಲಿಕಾರ್ಜುನ ತಬಲಾ ಸಾಥಿದಾರರಾಗಿದ್ದರು. ಮಧುಸೂದನ್ ಹಾರೋ​‍್ಮನಿಯಂ ನುಡಿಸಿದರು. 

ವಿಭಾಗದ ಅಧ್ಯಾಪಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಡಾ. ತಿಮ್ಮಣ್ಣ ಭೀಮರಾಯ ವಂದಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು. 


ಸುದ್ದಿ ಓದಿ