ಮನುಷ್ಯರಾಗಿ ಬದುಕಲು ಬಿಡಿ, ಪ್ಲೀಜ್
ಶ್ರಾವಣದ ಆಗಸ ನೆನಪಿಸುವ ಹಾಗೆ, ಸದ್ಯದ ವಾತಾವರಣ. ಈಗಲೊ ಆಗಲೊ ಮಳೆ ಹನಿಯಬಹುದೆಂಬ ತೆರದಿ, ಯಾವಾಗ ಬೇಕಾದರೂ ಯುದ್ಧ ಘಟಿಸೀತೆಂಬ ಆತಂಕದ ಕಾಮರ್ೋಡಗಳು, ಮನದಾಗಸದ ತುಂಬ. ಸಂಭವಿಸಬಹುದಾದ ಸಾವು ನೋವುಗಳು, ವಿತ್ತ ಮತ್ತು ಪ್ರಾಕೃತಿಕ ಹಾನಿಗಳು.. .. ಎಲ್ಲ ನೆನಪಾದಾಗ, ದೇವರೆ, ಹೇಗಾದರೂ ಮಾಡಿ ಆಗಬಹುದಾದ ಯುದ್ಧವನ್ನು ತಪ್ಪಿಸಿ ಪುಣ್ಯಕಟ್ಟಿಕೊಳ್ಳಪ್ಪಾ, ಎಂದು ಬೇಡಿಕೊಳ್ಳುತ್ತಿರುವ ಅಸಂಖ್ಯಾತ ಮಾನವಜೀವಿಗಳಲ್ಲಿ ನಾನೂ ಸೇರಿದ್ದೇನೆ.
ಯುದ್ಧವೆಂಬುದು ನಮ್ಮ ಜೀವಕುಲದ ಭಸ್ಮಾಸುರ. ಇಲ್ಲಿ ಸೋತವ ಮತ್ತೆ ಬದುಕುವಂತಿಲ್ಲ. ಗೆದ್ದವನು ಸಂಭ್ರಮಿಸುವಂತಿಲ್ಲ. ಮಹಾಭಾರತ ಯುದ್ಧ ಮುಗಿದಮೇಲೆ ಧರ್ಮರಾಜನಿಗೆ ಬಂದಂತಹ ಯುದ್ಧವೈರಾಗ್ಯ. ಯುದ್ಧದಲ್ಲಿ ಸಾಯುವವರು ಆಳುವ ಪ್ರಭುಗಳಲ್ಲ. ಅವರು ಘೋಷಿಸುತ್ತಾರೆ, ಅರಮನೆಯಲ್ಲಿಯಲ್ಲಿ ಸುಖವಾಗಿರುತ್ತಾರೆ. ಅದೇ ಶ್ರೀಸಾಮಾನ್ಯರು ರಣರಂಗಕ್ಕೆ ಧಾವಿಸುತ್ತಾರೆ. ಸೆಣಸಾಡುತ್ತಾರೆ. ಉಸಿರು ಇರುವವರೆಗೆ ಕೊಲ್ಲುತ್ತಲೇ ಇರುತ್ತಾರೆ. ಕೊನೆಗೆ ವೈರಿಯ ಕಡೆಯಿಂದ ಹತರಾಗುತ್ತಾರೆ. ಇಷ್ಟೇ ಈ ಯುದ್ಧದ ಹಣೆಬರೆಹ !
ಈಗ ಯುದ್ಧದ ವ್ಯಾಖೆ ಬದಲಾಗಿದೆ. ಹಿಂದಿನ ಕಾಲವಾಗಿದ್ದರೆ ಅದಕ್ಕೊಂದು ಕಾರಣ ಇರುತ್ತಿತ್ತು. ಆತಂಕವಾದಿಗಳ, ಮತಾಂಧರ ಕೈಗೆ ಬ್ರಹ್ಮಾಸ್ತ್ರ ಸಿಕ್ಕಿದೆ. ಎಲ್ಲೆಂದರಲ್ಲಿ, ಹೇಗೆಬೇಕೊ ಹಾಗೆ, ಅವರಿವರೆನ್ನದೆ ಕಂಡಕಂಡವರನ್ನು, ಕಾಣದವರನ್ನೂ ಕೊಂದುಹಾಕುವ `ಕೊಲ್ಲುಬಾಕ'ರ ಅಟ್ಟಹಾಸ ! ವಿಶ್ವದ ನೆಮ್ಮದಿಗೆ ಬೆಂಕಿಯಿಕ್ಕುವ ಪಾಪಿಷ್ಟರು.
ತಾನು ಸಾಕುತ್ತಿರುವುದು ವಿಷದ ಹಾವನ್ನು ಎಂಬುದು ಪಾಕಿಸ್ತಾನಕ್ಕೆ ಗೊತ್ತಿತ್ತು. ಜಗತ್ತಿನ ಬಹುತೇಕ ರಾಷ್ಟ್ರ ಪ್ರಮುಖರು ನೀಡಿದ ಎಚ್ಚರಿಕೆಯನ್ನು ಹಗುರಾಗಿ ಕಂಡಿತು. ಪರಿಣಾಮವಾಗಿ ಬಿನ್ ಲಾಡೆನ್ಗಳಂಥ ಘಟಸರ್ಪಗಳು ಬೆಳೆದುನಿಂತವು. ಮನೆಯೊಳಗನ ಕಿಚ್ಚು ತನ್ನ ಮನೆಯನ್ನು ಸುಡುತ್ತದೆ ಎಂಬ ಪರಿವು ಪಾಕಿಗಳಿಗಿರಲಿಲ್ಲ. ತನ್ನ ಗೋರಿ ತಾನೆ ತೊಡಿಕೊಳ್ಳುತ್ತ ಬಂತು. ಪರಿಣಾಮವಾಗಿ ಅನ್ಯರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವ ಸ್ಥಿತಿಗೆ ಬಂದಿದೆ. ಇರಾನ್, ಸೌದಿ ಅರೇಬಿಯಾ, ಅಫಗಾನಿಸ್ತಾನ, ಟಕರ್ಿಗಳಂಥ ಸ್ವಧಮರ್ಿ ದೇಶಗಳಿಂದ ಖಂಡನೆಗೆ ಗುರಿಯಾಗಿದೆ. ತೀರ ನೆರೆಯ ದೊಡ್ಡರಾಷ್ಟ್ರ ಚೈನಾ ಕೂಡ ಪಾಕಿಸ್ತಾನದ ಸ್ನೇಹ ಕಳಚಿಕೊಂಡಿದೆ. ಇಂದು ಪಾಕಿಸ್ತಾನ ಏಕಾಂಗಿಯಾಗಿದೆ.
ಅದಕ್ಕೆ ಮಿತ್ರರಾಷ್ಟ್ರಗಳಿಲ್ಲ. ಆಥರ್ಿಕ ಬಲ ಹಿಂದಿನಂತೆ ಈಗಲೂ ಇಲ್ಲ. ಅನಕ್ಷರತೆ, ಬಡತನಗಳಿಂದ ಅಲ್ಲಿನ ಪ್ರಜೆಗಳು ಹೈರಾಣಗೊಂಡಿದ್ದಾರೆ. ತಮ್ಮನ್ನು ಆಳುವವರು ಐಷಾರಾಮಿ ಲೋಲುಪ ಜೀವನದಲ್ಲಿ ಮುಳುಗಿದ್ದರೆ, ಕೈಯಲ್ಲಿ ಏ.ಕೆ. 56, ಬಾಂಬ್ಗಳನ್ನು ಹಿಡಿದುಕೊಂಡು ಅಲ್ಲಿನ ಯುವಕರು ಉಗ್ರವಾದಿಗಳ ಗುಂಪು ಸೇರಿಕೊಂಡಿದ್ದಾರೆ. ಅವರ ರಕ್ತಗಳಲ್ಲಿ ದೇಶಾಭಿಮಾನಕ್ಕಿಂತ, ಭಾರತದ ಬಗೆಗಿನ ದ್ವೇಷಾಭಿಮಾನವೆ ತುಂಬಿಕೊಂಡಿದೆ.
ಎರಡು ವರ್ಷದ ಹಿಂದಿನ ಘಟನೆ ನೆನಪಾಗುತ್ತದೆ. ನಾನು ಗ್ರೀಸ್ ದೇಶಕ್ಕೆ ಹೊರಟು ನಿಂತಾಗಿನ ಆ ಪ್ರಸಂಗ. ದಾರಿ ಮಧ್ಯದ ಟಕರ್ಿಯ ಇಸ್ತಾನಬುಲ್ ವಿಮಾನ ನಿಲ್ದಾಣದಲ್ಲಿ ಆತ ಸಿಕ್ಕಿದ್ದ. ಹೀಗೆ ಭೆಟ್ಟಿಯಾದ ಪಾಕಿಸ್ತಾನದ ಆ ಯುವಕನ ಹೆಸರು ಅಲ್ತಾಪ್. ಆತ ಒಬ್ಬ ಪಾಕಿಸ್ತಾನಿ ತರುಣ. ಜರ್ಮನಿಯಲ್ಲಿ ಇಂಜನೀಯರ್ ಆಗಿದ್ದಾನೆ. ಐದು ನಿಮಿಷದಲ್ಲಿ ಆತ್ಮೀಯನಾಗಿಬಿಟ್ಟ. ಪಾಕಿಸ್ತಾನ-ಹಿಂದುಸ್ತಾನಗಳ ನಡುವಿನ ವೈಮನಸ್ಸು ಮಾತಿನ ನಡುವೆ ನುಸುಳಿತು. ಆತ ಹೇಳಿದ, ನಮ್ಮವರು ನಿಮ್ಮವರು ಯಾಕೆ ಸುಮ್ ಸುಮ್ನೆ ಜಗಳಾಡ್ತಾರೊ ಅರ್ಥವಾಗುವದಿಲ್ಲ. ಅವ್ರು ದೊಡ್ಡವರು ಪಾಲಿಟಿಕ್ಸ್ ಮಾಡುತ್ತಾರೆ. ಎರಡೂ ದೇಶಗಳ ಶ್ರೀಸಾಮಾನ್ಯರ ಮನಸ್ಸು ಹಾಳಾಗುತ್ತಿರುವುದೇ ಇವರಿಂದ. `ಭಜರಂಗಿ ಭಾಯಿಜಾನ್' ಸಿನೇಮಾ ಕೊಂಡಾಡಿದ. ಓರ್ವ ಪಾಕಿಸ್ತಾನಿ ಬಾಲಕಿಗಾಗಿ, ಭಾರತದ ಯುವಕ ತೆಗೆದುಕೊಂಡ ಕಷ್ಟಗಳನ್ನು ಆತ ಉದಾಹರಿಸಿದ.
ಅಲ್ತಾಪ್ ಹೇಳುತ್ತಿದ್ದ, `ಸರ್, ನಮಗೂ ನಿಮಗೂ ಯಾಕೆ ದ್ವೇಷ ಇರ್ಬೇಕು ಹೇಳಿ ? ನಮ್ಮ ಪೂರ್ವಜರು ಈ ಹಿಂದುಸ್ತಾನದಲ್ಲಿಯೆ ಇದ್ದವರಲ್ಲವೆ ? ಆಗೆಲ್ಲ ಹಿಂದು ಮುಸ್ಲಿಂ ಭಾಯಿ ಭಾಯಿ ಅಂತಿದ್ದರು. ಆದರೆ, ಈಗ ಹಿಂದುಗಳು ನಮ್ಮ ದುಷ್ಮನ್ಗಳು ಎಂದು ನಮ್ಮ ಮುಖಂಡರು ಹೇಳುತ್ತಾರೆ. ಯಾದ್ ರಖೀಯೆ ಸರ್, ಮಾಮೂಲಿ ಲೋಗ್ ಯಾರೂ ನಮ್ಮಲ್ಲಿ ಹಾಗೆ ಅನ್ನುವುದಿಲ್ಲ. ತಮ್ಮ ಪುರಾನಾ ದೋಸ್ತರನ್ನು, ಸಂಬಂಧಿಗಳನ್ನು ಕಾಣಲು ನಮ್ಮವರನ್ನು ಭೆಟ್ಟಿಯಾಗಲು ಅಲ್ಲಿಗೆ ಹೋಗಿ ಬರುತ್ತಿರುತ್ತಾರೆ. ಹಾಗೆಯೆ, ಹಿಂದುಸ್ತಾನದಿಂದ ನಮ್ಮಲ್ಲಿಗೆ ಬರುತ್ತಾರೆ. ಅಂದಾಗ ನಾವು-ನೀವು ದುಷ್ಮನ್ ಹೇಗಾಗುತ್ತೇವೆ ?'
ಈಚೆಗೆ, ಎರಡನೆಯ ಸಲ ನಾನು ಕಾಶ್ಮೀರದ ಕಣಿವೆಯಲ್ಲಿ ಸುತ್ತಾಡಿ ಬಂದೆ. ಶ್ರೀನಗರ ದಾಟಿ, ಅಮರನಾಥ್ದ ಕಡೆಗೆ ಹೊರಟಾಗ, ಕಾಡುದಾರಿಯ ಮಧ್ಯೆ ಒಂದೆಡೆ ವಾಸ್ತವ್ಯ ಮಾಡಬೇಕಾಯಿತು. ಕತ್ತಲು. ಸುತ್ತಲೂ ಗುಡ್ಡ. ನಿರ್ಜನ ಪ್ರದೇಶ. ಅಲ್ಲೊಂದು ಏಕೈಕ ಮನೆ. ನಾವು ಉಳಿದುಕೊಂಡ ಆ ಮನೆ ಅದು ಮುಸ್ಲಿಂರದಾಗಿತ್ತು. ಪಿಜಿ (ಪೇಯಿಂಗ್ ಗೇಸ್ಟ್) ಯಾಗಿದ್ದ ನಮ್ಮನ್ನು ತುಂಬ ಪ್ರೀತಿಯಿಂದ ನೋಡಿಕೊಂಡರು. ರಾತ್ರಿ ವಾಸ್ತವ್ಯಕ್ಕೆ ಅಗತ್ಯವಾಗಿದ್ದ ಬೆಚ್ಚನೆಯ ಹಾಸಿಗೆ, ಕುಡಿಯಲು ಶುದ್ಧನೀರು ನೀಡಿದರು. ಬೆಳಗಿನ ಚಹಾದ ಜತೆಗೆ ಸ್ನಾನಕ್ಕೆ ಬಿಸಿನೀರು (ಅಂಥ ಕೆಟ್ಟ ಚಳಿಯಲ್ಲಿ) ಕೊಟ್ಟರು. ಅಲ್ಲಿ ದುಡ್ಡು ದೊಡ್ಡದಾಗಿರಲಿಲ್ಲ, ವಿಶ್ವಾಸ ಮತ್ತು ಪ್ರೀತಿ ಮುಖ್ಯವಾಗಿತ್ತು. ಅವೆರಡೂ ನಮಗೆ ಧಾರಾಳವಾಗಿ ಸಿಕ್ಕವು.
ವಾಪಸ್ಸು ಬರುವಾಗ ವಾಸ್ತವ್ಯ ಮಾಡಿದ್ದು ಮತ್ತೊಂದು ಮುಸ್ಲಿಂ ಮನೆಯಲ್ಲಿ. ಈ ಹಿಂದಿನ ಮನೆಯಲ್ಲಾದಂತೆ ಇಲ್ಲೂ ಅದೆರೀತಿಯ ವ್ಯವಸ್ಥೆ. ಇವರು ಹಿಂದುಗಳು, ಹೊರಟಿದ್ದು ಹಿಂದು ದೇವಸ್ತಾನಕ್ಕೆ ಎಂಬ ಭೇದವನ್ನೆನಿಸಲಿಲ್ಲ ಅವರು. ಯಾಕೆಂದರೆ ಇವರಾರೂ `ಆಳುವ ವರ್ಗ'ಕ್ಕೆ ಸೇರಿದ `ಯುದ್ಧದಾಹಿ'ಗಳಲ್ಲ, ನಮ್ಮಂತೆಯೆ ಶ್ರೀಸಾಮಾನ್ಯರು. ಅದಕ್ಕೂ ಮುಖ್ಯವಾಗಿ ಮನುಷ್ಯರಾಗಿ ಬದುಕಲು ಬಯಸುವವರು.
-ಮಲ್ಲಿಕಾರ್ಜುನ ಹುಲಗಬಾಳಿ,
ಬನಹಟ್ಟಿ 9945119528