ಇಂಡಿ

ತುಳಜಾಪೂರದ ಅಂಬಾಭವಾನಿ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ

ತುಳಜಾಪೂರದ ಅಂಬಾಭವಾನಿ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ

ವರದಿ ಸಚೀನ ಇಂಡಿ

ಇಂಡಿ 15: ಉತ್ತರ ಕರ್ನಾಟಕದ ಅನೇಕ ಭಕ್ತರ ಮನೆ ದೇವರು ಅಂದರೆ ಮಾಹಾರಾಷ್ಟ್ರ ರಾಜ್ಯದ ಉಸ್ಮಾನಬಾದ ಜಿಲ್ಲೆಯ ಸುಕ್ಷೇತ್ರ ತುಳಜಾಪೂರದ ಅಂಬಾಭವಾನಿ ದೇವಿ ಎಂದರೆ ತಪ್ಪಾಗಲಾರದು. ಅದರಂತೆ ವಿಜಯಪೂರ, ಬಾಗಲಕೋಟ, ಗದಗ, ಬೆಳಗಾವಿ, ಬೀದರ, ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ಪ್ರತಿ ಹಳ್ಳಿಗಳಿಂದ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಸುಕ್ಷೇತ್ರ ತುಳಜಾಪೂರದ ಅಂಬಾಭವಾನಿ ದೇವಿಯ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ತೆರಳುತ್ತಾರೆ.  

ದಸರಾ ಹಬ್ಬವಾದ ಮರುದಿನ ಗ್ರಾಮದ ಹಿರಿಯರು, ಯುವಕರು, ಹೆಣ್ಣು ಮಕ್ಕಳು, ವೃದ್ದರು, ಸೇರಿದಂತೆ ಅನೇಕರು ಹಳ್ಳಿಗಳಿಂದ ಭಕ್ತರು ಪಾದಯಾತ್ರೆ ಮೂಲಕ ತುಳಜಾ ಭವಾನಿ ದರ್ಶನಕ್ಕೆ ಹೋಗುತ್ತಾರೆ. ದೂರದ ತುಳಜಾಪುರಕ್ಕೆ ಭಕ್ತರು ಕಾಲ್ನಡಿಗೆ ಮೂಲಕ ಹೋಗೋದು ಸಾಹಸವೇ ಸರಿ. ಮನೆ ಹಳ್ಳಿಗಳಲ್ಲಿ ತುಳಜಾ ಭವಾನಿ ಬಗ್ಗೆ ಇರುವ ನಂಬಿಕೆ, ಭಯ, ಭಕ್ತಿ ಅಪರಿಮಿತ. ಮಕ್ಕಳ ಮದುವೆಯಿಂದ ಹಿಡಿದು ಮಕ್ಕಳಾಗುವ ತನಕ ದೇವಿಗೆ ಹರಕೆ ಮುಡಿ ಕಟ್ಟುವುದು ಈ ಭಾಗದಲ್ಲಿ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.  

ಭಕ್ತರು ವಿಜಯಪೂರ ಜಿಲ್ಲೆಯಷ್ಟೆ ಅಲ್ಲ, ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ತೆಲಂಗಾಣದಿಂದಲೂ ಸಾವಿರಾರು ಅಧಿಕ ಜನ ಭಕ್ತರು ಪಾದಯಾತ್ರೆ ಮೂಲಕವೇ ತುಳಜಾಪೂರಕ್ಕೆ ತೆರಳಿ ದೇವಿ ದರ್ಶನ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಬರಿಗಾಲಲ್ಲಿ ಸುಡುವ ಟಾರು ರಸ್ತೆಯಲ್ಲಿ ನಡೆದಾಟ, ಮರ- ಗಿಡದ ಬುಡದಲ್ಲಿ ಊಟ, ದಾರಿ ನಡುವೆ ದೇವಸ್ಥಾನ ಸಿಕ್ಕರೆ ವಿಶ್ರಾಂತಿ, ಇದು ದೇವಿ ದರ್ಶನಕ್ಕೆ ಹೋಗುವ ಭಕ್ತರ ದಿನಚರಿ. ನಾಲ್ಕೈದು ದಿನಗಳ ಅವಧಿಯಲ್ಲಿ ತುಳಜಾಪೂರದ ದೇವಿ ಮಂದಿರ ತಲುಪುವ ಭಕ್ತರು ದಿನವೊಂದಕ್ಕೆ ಸುಮಾರು 40 ಕಿಲೋ ಮೀಟರ್ ನಡೆಯುತ್ತಾರೆ.  

ದಾರಿಯುದ್ದಕ್ಕೂ ಭಜನೆ, ಗಾಯನ, ತಾಯಿ ಅಂಬಾ ಭವಾನಿ ಸ್ಮರಣೆ ನಡೆಯುತ್ತವೆ. ದಾಸೋಹ ತತ್ವ ಬೆಳೆಸಿದ್ದ ಶರಣರ ಅನ್ನದಾಸೋಹ ಇಲ್ಲಿ ಅಕ್ಷರಶಃ ಪಾಲನೆಯಾಗುತ್ತಿದೆ. ಭಕ್ತರ ಅನುಕೂಲಕ್ಕೆ ವಿವಿಧ ಗ್ರಾಮಸ್ಥರು, ಸಂಘಟಕರು ಹಾಗೂ ಉದ್ಯಮಿಗಳು ದಾರಿ ಮಧ್ಯೆ ಅನ್ನದಾಸೋಹ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಾರೆ. ಹಲವಾರು ವರ್ಷಗಳಿಂದ ಪಾದಯಾತ್ರೆ ನಡೆದುಕೊಂಡು ಬಂದಿದ್ದು, ದೇವಿ ದರ್ಶನಕ್ಕೆ ಹೋಗುವುದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ತುಳಜಾಪೂರಕ್ಕೆ ಪಾದಯಾತ್ರೆ ಮೂಲಕ ಒಂದು ವರ್ಷ ಹೋದವರು ಸತತ ಮೂರು ವರ್ಷ ಹೋಗಬೇಕು ಎಂಬ ನಂಬಿಕೆಯೂ ಇದೆ. ತಮ್ಮ ಹರಕೆ ಈಡೇರಿದವರು ದಸರಾ ಹಬ್ಬದ ಸಂದರ್ಭದಲ್ಲಿ ಕಾಲ್ನಡಿಗೆ ಮೂಲಕ ತುಳಜಾಪೂರಕ್ಕೆ ತೆರಳಿ ದೇವಿ ದರ್ಶನ ಮಾಡಿ ಹರಕೆ ತೀರಿಸುತ್ತಾರೆ.  

ವಿಜಯಪೂರ ಜಿಲ್ಲೆಯಿಂದ ಪಾದಯಾತ್ರೆಯ ಮೂಲಕ ತೆರಳುವ ಭಕ್ತರು ರಾಷ್ಟ್ರೀಯ ಹೆದ್ದಾರಿ-52ರ ಮಾರ್ಗದಿಂದ ತುಳಜಾಪೂರಕ್ಕೆ ಪಾದಯಾತ್ರೆ ಮೂಲಕ ತೆರಳುವ ಪಾದಯಾತ್ರಿಗಳು ಜಾಗ್ರತೆ ವಹಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಸದಾ ವಾಹನಗಳ ಓಡಾಟ ಇದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಭಕ್ತರು ಅತ್ಯಂತ ಎಚ್ಚರಿಕೆ ವಹಿಸಬೇಕಾಗುತ್ತದೆ. ಭಕ್ತರ ಪಾದಯಾತ್ರೆ ಸುರಕ್ಷತೆ ದೃಷ್ಠಿಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಂಚಾರಿ ಪೊಲೀಸರು ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಬಂದೋಬಸ್ತ ಕೈಗೊಳ್ಳುತ್ತಾರೆ. ಪಾದಯಾತ್ರೆ ಬಹುಪಾಲು ಭಕ್ತರ ಆಶಯವಾಗಿದೆ.  

ಒಟ್ಟಿನಲ್ಲಿ ಧಾರ್ಮಿಕತೆ, ದೈವಭಕ್ತಿಯ ಪರಾಕಾಷ್ಠೆ ಬಗ್ಗೆ ಅಲ್ಲಲ್ಲಿ ಮೌಢ್ಯತೆ ಎಂಬ ಪದ ಬಳಕೆ ಚಾಲ್ತಿಯಲ್ಲಿದ್ದರೂ ಕೂಡ ಆಧುನಿಕ ಸಮಾಜದಲ್ಲಿ ದೇವರೆಡೆಗಿನ ಭಯ ಭಕ್ತಿ ಮಾತ್ರ ಬದಲಾಗಿಲ್ಲ. ಇದಕ್ಕೆ ತುಳಜಾಪುರ ದೇವಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುವ ಭಕ್ತರ ಸಾಲೇ ಸಾಕ್ಷಿ. ಏನೇ ಇರಲಿ ಸುಕ್ಷೇತ್ರ ತುಳಜಾಪೂರದ ಅಂಬಾಭವಾನಿ ದೇವಿಯ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ತೆರಳುವ ಭಕ್ತರ ಪಾದಯಾತ್ರೆ ಸುಖಕರವಾಗಿರಲಿ ಎಂಬುವುದೇ ನಮ್ಮ ಲೋಕದರ್ಶನ ದಿನ ಪತ್ರಿಕೆಯ ಕಳಕಳಿಯಾಗಿದೆ. 


ಸುದ್ದಿ ಓದಿ