ಚಿಕ್ಕೋಡಿ

ಕಬ್ಬು ನುರಿಯುವ ಹಂಗಾಮಿನೊಂದಿಗೆ ಕಾರ್ಮಿಕರ ಕಾರ್ಯಾರಂಭ

ಕಬ್ಬು ನುರಿಯುವ ಹಂಗಾಮಿನೊಂದಿಗೆ ಕಾರ್ಮಿಕರ ಕಾರ್ಯಾರಂಭ

ಮಾಂಜರಿ 2:  2023-24 ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭಗೊಂಡಿದ್ದು, ಕಬ್ಬು ಬೆಳೆಗಾರರು ಮಳೆಯ ಆಭಾವದಿಂದ ಉತ್ಪಾದನೆ ಕುಂಠಿತ, ಸಾಲ-ಸುಲದೊಂದಿಗೆ ಕಬ್ಬು ಉತ್ಪಾದನೆ ಮಾಡಿರುವ ನೋವು ಇನ್ನೊಂದಡೆಯಾದರೆ ಜೀವನದ ಹೊಟ್ಟೆ ಹೊರೆಯಲು ಮಹಾರಾಷ್ಟ್ರದ ಕಬ್ಬು ಕಟಾವುಗಾರರು ರಾಜ್ಯದ ಗಡಿಭಾಗದಲ್ಲಿ ತಮ್ಮ ಸರಕು ಸರಂಜಾಮನೊಂದಿಗೆ ಸಕ್ಕರೆ ಕಾರಖಾನೆಗಳ ಸುತ್ತಮುತ್ತಲಿನ ಗ್ರಾಮಗಳ ನಾನಾ ಕಬ್ಬಿನ ಗದ್ದೆಗಳಲ್ಲಿ, ರಸ್ತೆಯ ಬದಿಯಲ್ಲಿ ಹಾಗೂ ಖಾಲಿಯಿದ್ದ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕವರಗಳ ಗುಡಿಸಲುಗಳನ್ನು ಮಾಡಿಕೊಂಡು ವಾಸವಾಗಿದ್ದಾರೆ. 

ಮಹಾರಾಷ್ಟ್ರದ ಬೀಡ, ಉಸ್ಮಾನಾಬಾದ, ಜತ್, ಪಂಡರಪೂರ, ವಿಜಾಪೂರ ಜಿಲ್ಲೆಗಳಿಂದ ಕಬ್ಬು ಕಟಾವು ಕೆಲಸ ಆವಲಂಬಿಸಿ ಸಂಸಾರ ಸಮೇತ ಆಗಮಿಸುವ ಕಬ್ಬು ಕಟಾವು ಕಾರ್ಮಿಕರ ಬದುಕು ಬಯಲಿನಲ್ಲಿಯೇ ಆರಂಭವಾಗಿದೆ. ಕಳೆದ ಫೆಬ್ರುವರಿಯಿಂದ ನಿಂದ ಅಕ್ಟೋಬರ ಮೂರನೇ ವಾರದ ವರೆಗೆ ಬಿಕೋ ಎನ್ನುತ್ತಿದ್ದ ಬಯಲು ಪ್ರದೇಶ, ಹೊಲ, ಗದ್ದೆಗಳಲ್ಲೀಗ ಪ್ಲಾಸ್ಟಿಕ್ ಗುಡಿಸಲುಗಳಲ್ಲಿ ದೀಪದ ಬೆಳಕು ಕಾಣಿಸುತ್ತಿದೆ.  

ಇದೇ ತಿಂಗಳ ಮೂರನೇಯ ವಾರದಲ್ಲಿ ರಾಜ್ಯದ ಕಾರ್ಖಾನೆಗಳು ಕಬ್ಬು ನುರಿಯುವ ಹಂಗಾಮು ಪ್ರಾರಂಬಿಸಿದ್ದು,  ಮತ್ತು ನೆರೆಯ ಮಹಾರಾಷ್ಟದ ಗಡಿಗೆ ಹೊಂದಿದ ಸಕ್ಕರೆ ಕಾರಖಾನೆಗಳು ನವೆಂಬರ 1ರಿಂದ ಕಬ್ಬು ನುರಿಯುವ ಕಾರ್ಯ ಆರಂಭಿಸಲಿದ್ದಾರೆ. ಗಡಿಭಾಗದಲ್ಲಿ ಕಬ್ಬು ನುರಿಯುವ ಕಾರ್ಯ ಭರದಿಂದ ಸಾಗಿದ್ದು, ಇಂದಿಗೂ ಕಾರ್ಮಿಕರು ರಾಜ್ಯದ ಗಡಿ ಭಾಗದಲ್ಲಿ ಆಗಮಿಸುತ್ತಿದ್ದಾರೆ. 

ಪ್ರತಿಯೊಂದು ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೂರು ಕಲ್ಲಿನ ಒಲೆ, ವಾಸ್ತವಕ್ಕೆ ಪ್ಲಾಷ್ಟಿಕ್ ಹೋದಿಕೆಯ ಗುಡಿಸಲುಗಳು, ಜೊತೆಗೆ ಅಲ್ಯೂಮಿನಿಯಂ ಬಕೆಟ್, ಧಾನ್ಯ, ಮಸಾಲೆ, ಅಡುಗೆ ಪದಾರ್ಥ ಸೇರಿದಂತೆ ಕೆಲ ಪಾತ್ರೆಗಳೊಂದಿಗೆ ಅವರ ಚಿಕ್ಕ ಸಂಸಾರ ಸಾಗುತ್ತಿದೆ. ದಿನವೀಡೀ ಕುಟುಂಬದ ಸದಸ್ಯರೆಲ್ಲಾ ಕಬ್ಬು ಕಟಾವು ಮಾಡುತ್ತಾರೆ. ರಾತ್ರಿ ಬರುವ ಚಕ್ಕಡಿಗಾಡಿ, ಟ್ರ್ಯಾಕ್ಟರ ಮತ್ತು ಲಾರಿಗಳಿಗೆ ಕಬ್ಬು ತುಂಬಿ ಕಾರ್ಖಾನೆಗೆ ಸಾಗಿಸಲು ಗಾಳಿ-ಚಳಿ ಲೆಕ್ಕಿಸದೇ ದುಡಿಯುತ್ತಿದ್ದಾರೆ.  

ಒಟ್ಟಿನಲ್ಲಿ ಇಂದಲ್ಲ ನಾಳೆ ತಮಗೂ ಒಳ್ಳೆಯ ದಿನಗಳು ಬರಬಹುದು ಎಂಬ ಕನಸು ಹೊತ್ತು ಶ್ರಮಿಸುವ ಕೂಲಿಕಾರರು ಕಾರ್ಖಾನೆಯ ಚಕ್ರ ನಿಲ್ಲುತ್ತಿದ್ದಂತೆ ಸಂಸಾರ ಸಮೇತ ತಮ್ಮೂರಿನತ್ತ ಸಾಗುತ್ತಾರೆ. ಒಟ್ಟಿನಲ್ಲಿ ನಾನಾ ಕಬ್ಬಿನ ಗದ್ದೆಗಳಲ್ಲಿ ಹಾಗೂ ಖಾಲಿಯಿದ್ದ ಸ್ಥಳಗಳಲ್ಲಿ ರವದಿ ಗುಡಿಸಲುಗಳನ್ನು ಮಾಡಿಕೊಂಡು ವಾಸವಾಗಿರುವ ದೃಶ್ಯಗಳು ನೋಡಲು ಸಿಗುತ್ತವೆ. 


ಸುದ್ದಿ ಓದಿ