ಬಾಗಲಕೋಟೆ

ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಬಲೀಕರಣದ ಪ್ರತೀಕ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಭಿಮತ ಬಾಗಲಕೋಟೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಬಲೀಕರಣದ ಪ್ರತೀಕ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಭಿಮತ ಬಾಗಲಕೋಟೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
Kittur Rani Chennamma is a symbol of women's empowerment, opines District In-charge Minister Vijayan

 ಬಾಗಲಕೋಟೆ 23: ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ಸಾಹಸ, ಶೌರ್ಯ ಮತ್ತು ದೇಶಪ್ರೇಮ ಇಂದಿನ ಪೀಳಿಗೆಗೆ ಸದಾ ಮಾದರಿಯಾಗಿವೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ ಹೇಳಿದರು.ನಗರದ ಡಾ. ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ರಾಣಿ ಚೆನ್ನಮ್ಮ ಅವರ ಜೀವನಾದರ್ಶಗಳನ್ನು ಯುವಜನತೆ ನಿಜ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರು ತಮ್ಮ ಸಂಸ್ಥಾನದ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಜನರ ಹಿತವನ್ನು ಕಾಪಾಡಲು ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಡಿದರು. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಎದೆಗುಂದದೆ ಶತ್ರುಗಳನ್ನು ಎದುರಿಸಿದ ಅವರ ಸಾಹಸಗಾಥೆ ಭಾರತೀಯರ ಆತ್ಮಗೌರವ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಅವರ ಹೋರಾಟದ ಇತಿಹಾಸವು ನಾಡಿನ ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದು, ನಾಡು-ನುಡಿ ಮತ್ತು ದೇಶದ ಗೌರವವನ್ನು ಎತ್ತಿಹಿಡಿಯುವ ಸಂಕಲ್ಪವನ್ನು ಮೂಡಿಸುತ್ತದೆ ಎಂದರು.ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರೂ ಮುಂಚೂಣಿಯಲ್ಲಿ ನಿಂತು ಹೋರಾಡಬಲ್ಲರು ಎಂಬುದನ್ನು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ ಕಿತ್ತೂರು ರಾಣಿ ಚೆನ್ನಮ್ಮ ಅವರು ಮಹಿಳಾ ಸಬಲೀಕರಣದ ಪ್ರತೀಕವಾಗಿದ್ದಾರೆ. ಅವರ ತ್ಯಾಗ, ಬಲಿದಾನ ಹಾಗೂ ನಾಯಕತ್ವದ ಗುಣಗಳನ್ನು ಸ್ಮರಿಸುವುದರ ಜೊತೆಗೆ, ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಜಯಂತಿ ಆಚರಣೆಯ ನಿಜವಾದ ಉದ್ದೇಶವಾಗಿದೆ ಎಂದು ಹೇಳಿದರು.ಸುಮಾರು 25 ವರ್ಷಗಳ ಬೇಡಿಕೆಯನ್ನು ಪುರಸ್ಕರಿಸಿದ ರಾಜ್ಯ ಸರ್ಕಾರ 2017ರ ಅ. 23 ರಂದು ಜಯಂತಿ ಆಚರಣೆ ಮುಂದಾಯಿತು. ಅಂದಿನ ಮುಖ್ಯಮಂತ್ರಿ ಅವರು, ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಜಯಂತಿ ಆಚರಣೆಯನ್ನು ಸರಕಾರ ಜಾರಿಗೊಳಿಸಿತು. ವಿಧಾನಸೌಧದ ಆವರಣದಿಂದ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಅಂದಿನಿಂದ ಈ ಜಯಂತಿಯನ್ನು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು. ದೇಶದ ಹಿತಕ್ಕಾಗಿ ಎಲ್ಲ ಜಾತಿ ಜನಾಂಗದವರು ತಮ್ಮ ಜೀವ ಮುಡಿಪಾಗಿಟ್ಟಿದ್ದನ್ನು ಇತಿಹಾಸದಲ್ಲಿ ಕಾಣುತ್ತೇವೆ. ಜಾತ್ಯತೀತ ತಳಹದಿ ಮೇಲೆ ಈ ದೇಶವಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರು ಎಲ್ಲರ ಒಳಿತಿಗಾಗಿ ಸಂವಿಧಾನ ಬರೆದಿದ್ದಾರೆ. ಭಾರತದ ಸಂವಿಧಾನ ಎಲ್ಲರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಎಲ್ಲ ವರ್ಗದವರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ಅವರು ಧೈರ್ಯ, ಸ್ಥೈರ್ಯದಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ. ಅಂತಹ ಧೀರೋದಾತ್ತ ಮಹಿಳೆ ಚನ್ನಮ್ಮನವರ ಜೀವನ ನಮಗೆಲ್ಲ ಸ್ಫೂರ್ತಿದಾಯಕವಾಗಿದೆ ಎಂದರು.  ಚನ್ನಮ್ಮನವರಲ್ಲಿದ್ದ ಕೆಚ್ಚೆದೆಯ ರಾಷ್ಟ್ರಾಭಿಮಾನವಿದ್ದುದರಿಂದ ಅವರು ಪ್ರಾಣದ ಹಂಗು ತೊರೆದು, ಪರಕೀಯರ ವಿರುದ್ದ ಹೋರಾಡಿ ಸೈ ಎನಿಸಿಕೊಂಡ ಧೀರ ಮಹಿಳೆ. ಅವರ ಕೆಚ್ಚೆದೆಯ ದೇಶಪ್ರೇಮ, ಸಾಹಸ ಹಾಗೂ ಧೈರ್ಯ ಇಂದಿನ ಮಹಿಳೆಯರಿಗೆ ದಾರೀದೀಪವಾಗಿದೆ ಎಂದರು. ವೀರರಾಣಿ ಕಿತ್ತೂರು ಚನ್ನಮ್ಮಳ ಬಾಲ್ಯ ಜೀವನದ ಪರಂಪರೆ ಹಾಗೂ ಶೌರ್ಯ ಸ್ಮರಣೀಯ. ಅವರು ಚಿಕ್ಕವರಿದ್ದಾಗ ಕುದುರೆ ಸವಾರಿನ ಬಿಲ್ವಿದ್ಯೆಯಲ್ಲಿ ಪರಿಣತಿ ಸಾಧಿಸಿದ್ದರು. ದೇಶ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ದ ಕೆಚ್ಚೆದೆಯಿಂದ ಹೋರಾಡುವ ಮೂಲಕ ಈ ದೇಶದ ಕೆಚ್ಚೆದೆಯ ನಾರಿಯರ ಸಾಲಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿದೆ ಎಂದರು. ಎಂಥದ್ದೇ ವಿಷಮ ಪರಿಸ್ಥಿತಿ ಎದುರಾದರೂ, ನಮ್ಮತನವನ್ನು ಬಿಡಬಾರದು. ಪ್ರತಿಯೊಬ್ಬರಲ್ಲೂ ಆತ್ಮಸ್ಥೈರ್ಯ ಇರಬೇಕೆಂಬುದು ಅವರ ನಿಲುವಾಗಿತ್ತು. ಅವರ ಪರಂಪರೆ, ರಾಷ್ಟ್ರ ಪ್ರೇಮ ಸೇರಿದಂತೆ ಅನೇಕ ಉದಾತ್ತ ಚಿಂತನೆಗಳ ಗಣಿಯಾಗಿದ್ದ ಚೆನ್ನಮ್ಮ ಅವರು, ಶೌರ್ಯ ಹಾಗೂ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದವರು ಬಣ್ಣಿಸಿದರು. ಹೊಸದಿಲ್ಲಿಯ ಪಾರ್ಲಿಮೆಂಟ್ ಸಂಕಿರ್ಣದಲ್ಲಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಸ್ಥಾಪಿಸಲಾಗಿದೆ. ಇತಿಹಾಸದ ಮಹತ್ವದ ಘಟನೆಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಯುವಜನತೆಗೆ ತಿಳಿಸುವ ಮೂಲಕ ದೇಶಪ್ರೇಮ, ಸಾಮಾಜಿಕ ಸಾಮರಸ್ಯ ಮತ್ತು ನಾಡಿನ ಸಂಸ್ಕೃತಿಯ ಬಗ್ಗೆ ಗೌರವ ಬೆಳೆಸಬೇಕು ಎಂದರು. ಇಂದಿನ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ, ಅವರ ಬದುಕಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ತುಂಬಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಪೋಷಕರದ್ದಾಗಿದೆ ಎಂದರು. ವಿಧಾನ ಪರಿಷತ್ತಿನ ಸದಸ್ಯರಾದ ಹಣಮಂತ ನಿರಾಣಿ ಅವರು ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮ ಅವರು ವೀರ ಕಿತ್ತೂರ ಸಂಸ್ಥಾನ ವಶಪಡಿಸಿಕೊಳ್ಳಲು ಬ್ರಿಟೀಷರ ವಿರುದ್ದ ಹೋರಾಡಿದ ಧೀರ ಮಹಿಳೆ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದು ಕರೆ ನೀಡಿದ ಅವರು, ಕೆಚ್ಚೆದೆಯ ದೇಶಾಭಿಮಾನ ಹೊಂದಿ, ಸೋಲಿನ ಬಿಸಿ ಅನುಭವವನ್ನು ಚೆನ್ನಮ್ಮ ಅವರು ಬ್ರಿಟಿಷರಿಗೆ ಮುಟ್ಟಿಸಿದರು. ಮಹಿಳೆಯಾಗಿ ಅವರು ಶೌರ್ಯ, ಸಾಹಸ ಮೆರೆದಿದ್ದಾರೆ. ಚನ್ನಮ್ಮಳೊಟ್ಟಿಗೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಮಕ್ಕಳು ಚೆನ್ನಮ್ಮನ ಧೈರ್ಯಸ್ಥೈರ್ಯ  ಹೊಂದಬೇಕು. ಅನೇಕ ಮಹಿಳೆಯರು ದೇಶಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಅವರ ಜೀವನದ ಮೌಲ್ಯಗಳು ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆ ಅರ್ಥೈಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಸಭೆಯಲ್ಲಿ ಬಾಗಲಕೋಟೆ ಶಾಸಕ ಉಮೇಶ ಮೇಟಿ,ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಅನೀಲ ದಡ್ಡಿ, ಜಿಲ್ಲಾಧಿಕಾರಿಗಳಾದ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿದ್ಧಾರ್ಥ ಗೋಯಲ್ ಉಪವಿಭಾಗಾಧಿಕಾರಿಗಳಾದ ಮಹೇಶ ಮಾಲಗತ್ತಿ, ಜಿಲ್ಲಾ ರವಿ ಪಟ್ಟಣ, ಸಂಗಮೇಶ ದೊಡಮನಿ, ಶಿವಲಿಂಗಪ್ಪ ರಾಂಪೂರ, ವೀರರಾಣಿ ಛದ್ಮವೇಷಧಾರಿ ಶ್ರೇಯ ಜಕಾತಿ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ