ರಾಣೆಬೆನ್ನೂರ

ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಗೆಲುವಿನ ತಂತ್ರಗಾರಿಕೆ ಅನುಸರಿಸಿ: ಲಿಂಗನಗೌಡ್ರ

ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಗೆಲುವಿನ ತಂತ್ರಗಾರಿಕೆ ಅನುಸರಿಸಿ: ಲಿಂಗನಗೌಡ್ರ

ರಾಣೇಬೆನ್ನೂರ 04: ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆದರೆ, ಸ್ಪರ್ಧಾ ಮನೋಭಾವನೆಯಲ್ಲಿ ಗೆಲುವಿಗಾಗಿ ಸೆಣಸಾಡಬೇಕೇ ಹೊರತು ಗೆದ್ದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದರಿಂದ ಯಾರಿಗೂ ಲಾಭವಿರುವುದಿಲ್ಲ. ಗೆದ್ದವರನ್ನು ನೋಡಿ ನಾವೂ ಸಹ ಅವರು ಸ್ಪರ್ಧೆಯಲ್ಲಿ ಅನುಸರಿಸಿದ ಕ್ರಮಗಳೇನು ಎನ್ನುವುದನ್ನು ಸೂಕ್ಷ್ಮವಾಗಿ ಅರಿತಾಗ ಮಾತ್ರ ಗೆಲುವನ್ನು ಸಾಧಿಸಲು ಸಾಧ್ಯವಿದೆ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ.ಲಿಂಗನಗೌಡ್ರ ಹೇಳಿದರು. 

ಅವರು ಸೋಮವಾರ ಕಾಲೇಜು ಆವರಣದಲ್ಲಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಅಂತರ ಮಹಾವಿದ್ಯಾಲಯಗಳ ಏಕವಲಯ ಖೋಖೋ ಪಂದ್ಯಾವಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಈ ದೇಶದ ಭವ್ಯ ಭವಿಷ್ಯದ ರೂವಾರಿಗಳು. ಶಿಕ್ಷಣದ ಜೊತೆ ಜೊತೆಗೆ ಪೂರಕವಾಗಿ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಂದರೆ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡಂತಾಗುತ್ತದೆ ಎಂದ ಅವರು, ಯುವ ಜನಾಂಗದ ಮೇಲೆ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಬಹಳಷ್ಟು ನೀರೀಕ್ಷೆ, ಭರವಸೆ ಇಟ್ಟುಕೊಂಡಿದ್ದಾರೆ. ಜೀವನ ಭವಿಷ್ಯದ ಭದ್ರತೆಗೆ ಇಂತಹ ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಬಹು ಅಗತ್ಯವಿದೆ ಎಂದರು. 

ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸಂಚಾರಿ ಠಾಣಾ ಪಿಎಸ್‌ಐ ಚನ್ನಮ್ಮ ಬಿ. ಹಡಪದ ಅವರು, ಸ್ಪರ್ಧೆಯಲ್ಲಿ ಪಾಲ್ಗೊಂಡವರು ಯಾವುದೇ ಕಾರಣಕ್ಕೂ ನಿರಾಸೆರಾಗಬಾರದು. ಗೆಲುವಾದಾಗ ಹಿಗ್ಗಬಾರದು, ಸೋತಾಗ ಕುಗ್ಗಬಾರದು. ಗೆಲುವಿನ ತಂತ್ರಜ್ಞಾನವನ್ನು ಸೂಕ್ಷ್ಮವಾಗಿ ಅಳವಡಿಸಿಕೊಂಡು ತಮ್ಮ ತರಬೇತುದಾರರ ಮಾರ್ಗದರ್ಶನ ಪಡೆದುಕೊಂಡು ಮುನ್ನಡೆದಾಗ ಮಾತ್ರ ಸದಾಕಾಲ ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸ್ಥಾನಿಕ ಅಡಳಿತ ಮಂಡಳಿಯ  ಸದಸ್ಯ ವೀರಣ್ಣ ಅಂಗಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪುರುಷ ಪ್ರಧಾನ ಸಮಾಜದ ಹಲವಾರು ಕಟ್ಟುಪಾಡುಗಳನ್ನು ಮೀರಿ ಸಿಡಿದೆದ್ದ ಏಕೈಕ ಶಿಕ್ಷಣ ಸಾಧಕಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಸಾಧನೆ ಅಮೋಘವಾದದ್ದು. ಅಂದು ವಿರೋಧಿಸಿದ ಇದೇ ಸಮಾಜ ಇಂದು ಗೌರವಿಸುತ್ತಿದೆ. ಅವರ ತ್ಯಾಗ ಇಂದಿನ ಮಹಿಳಾ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ ಎಂದರು. 

ವೇದಿಕೆಯಲ್ಲಿ ಇನ್ನೋರ್ವ ಸದಸ್ಯ ಬಿ.ಎಸ್‌.ಪಟ್ಟಣಶೆಟ್ಟಿ, ಶಿವಯೋಗಿ ಎಲಿ, ರಾಜ್ಯ ಕ್ರೀಡಾ ಒಕ್ಕೂಟದ ಉಪಾಧಕ್ಷೆ ಡಾ. ಕವಿತಾ ಗಡ್ಡದಗೂಳಿ  ಸೇರಿದಂತೆ ಮತ್ತಿತರ ಗಣ್ಯರು, ಕಾಲೇಜು ಉಪನ್ಯಾಸಕರು, ಸಿಬ್ಬಂದಿ, ಸ್ಪರ್ಧಾ ನಿರ್ಣಾಯಕರು ಉಪಸ್ಥಿತರಿದ್ದರು. 

ಆರಂಭದಲ್ಲಿ ಕ್ರೀಡಾ ದ್ವಜಾರೋಹಣ ಸಾಮೂಹಿಕವಾಗಿ ನೆರವೇರಿಸಲಾಯಿತು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಪ್ರಾರ್ಥಿಸಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪ್ರೊ.ಮಂಜಪ್ಪ ಸಿ.ಎಸ್ ಅವರು ಪ್ರಜ್ಙಾವಿಧಿ ಬೋಧಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಸ್ವಾಗತಿಸಿದರು. ಪ್ರೊ. ಸಾಯಿಲತಾ ಮಡಿವಾಳರ ನಿರೂಪಿಸಿ, ಪ್ರೊ.ಶೋಭಾ ದೊಡ್ಡನಾಗಳ್ಳಿ ವಂದಿಸಿದರು. 


ಸುದ್ದಿ ಓದಿ