ಅಥಣಿ

ಖಿಳೇಗಾಂವ ಬಸವೇಶ್ವರ ಏತ ನೀರಾವರಿ, ಕೆರೆ ತುಂಬುವ ಯೋಜನೆಗೆ ಡಿಸೆಂಬರನಲ್ಲಿಯೇ ಬೊಮ್ಮಾಯಿ ಅವರಿಂದ ಚಾಲನೆ: ಶ್ರೀಮಂತ ಪಾಟೀಲ

ಖಿಳೇಗಾಂವ ಬಸವೇಶ್ವರ ಏತ ನೀರಾವರಿ, ಕೆರೆ ತುಂಬುವ ಯೋಜನೆಗೆ ಡಿಸೆಂಬರನಲ್ಲಿಯೇ ಬೊಮ್ಮಾಯಿ ಅವರಿಂದ ಚಾಲನೆ: ಶ್ರೀಮಂತ ಪಾಟೀಲ

ಲೋಕದರ್ಶನ ವರದಿ 


ಅಥಣಿ 05: ಡಿಸೆಂಬರ ತಿಂಗಳಿನಲ್ಲಿಯೇ ಸಿ ಎಂ ಬಸವರಾಜ ಬೊಮ್ಮಾಯಿ ಅವರಿಂದ ಖಿಳೇಗಾಂವ ಬಸವೇಶ್ವರ ಯೋಜನೆ ಉದ್ಘಾಟನೆ ಮತ್ತು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. 

 ಅವರು ತಾಲೂಕಿನ ಬೇವನೂರು ಗ್ರಾಮದಲ್ಲಿ 3 ಕೋಟಿ 10 ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಹನುಮಾನ ಮಂದಿರದಲ್ಲಿ ಮಾತನಾಡುತ್ತಿದ್ದರು. 

           ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳುವುದರಿಂದ ಬರಗಾಲ ಪೀಡಿತ ಈ ಭಾಗದ ರೈತರು ಅಂದಾಜು 1 ಕೋಟಿ ಟನ್ ಕಬ್ಬು ಬೆಳೆ ಬೆಳೆಯುತ್ತಾರೆ ಇದರಿಂದಾಗಿ ರೈತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲು ಸಾಧ್ಯ ಎಂದ ಅವರು ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಶಾಸಕ ಸ್ಥಾನ ಕಲ್ಪಿಸಿರುವಿರಿ, ನನ್ನ ಜೀವನ ಇರುವವರೆಗೂ ಈ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಆದರೂ ಈ ಭಾಗದಲ್ಲಿ ಮೂಲಭೂತ ಸೌಲಭ್ಯಗಳ ಜೊತೆಗೆ ಅಭಿವೃದ್ಧಿ ಪರ ಕಾರ್ಯಗಳನ್ನೂ ಕೂಡ ಅನುಷ್ಠಾನಗೊಳಿಸುವ ಮೂಲಕ ರೈತರಿಗೆ, ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು. 

          ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ತಲುಪದ ಗ್ರಾಮಗಳ ಕೃಷಿಗೆ ಅನುಕೂಲವಾಗಲೆಂದು 23 ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗಿದ್ದು ಈ ಯೋಜನೆಗೆ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು ಎಂದರು. 

           ಇದಕ್ಕೂ ಮುನ್ನ ಶಾಸಕರು 2 ಕೋಟಿ ವೆಚ್ಚದ ಕಾಗವಾಡ ಮತಕ್ಷೇತ್ರದ ಅಥಣಿ ಚಮಕೇರಿ ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ, 60 ಲಕ್ಷ ರೂಪಾಯಿ ವೆಚ್ಚದ ಜಲಜೀವನ್ ಮಿಶನ್ ಯೋಜನೆಗೆ, 40 ಲಕ್ಷ ರೂ ಅನುದಾನದ ಗುಂಡೇವಾಡಿ ಶಿವನೂರ ರಸ್ತೆಗೆ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಗುಂಡೇವಾಡಿ ವಡಗೇರ​‍್ಪನ ತೋಟದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. 

            ಧುರೀಣರಾದ ಶಿವಾನಂದ ಗೊಲಭಾವಿ, ಆಬಾ ಚವ್ಹಾಣ, ಶಿವಾನಂದ ಶಂಕರಹಟ್ಟಿ, ಅರ್ಜುನ ನಾಯಿಕ, ಈಶ್ವರ ಮುಜಗೋಣಿ, ನಾನಾಸಾಹೇಬ ಅವತಾಡೆ, ರಾಜು ಆಲಬಾಳ, ಪ್ರಕಾಶ ತಿರಳೆ, ಬಿಳ್ಯಾನಿ ನಾಯಿಕ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಆರ್‌.ಪಿ.ಅವತಾಡೆ, ಪ್ರವೀಣ ಸೂರ್ಯವಂಶಿ, ಪಂಚಾಯತ ರಾಜ್ ಇಲಾಖೆಯ ವೀರಣ್ಣ ವಾಲಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ರವೀಂದ್ರ ಮೂರಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ