ರಕ್ತಹೀನತೆ, ಬಳಕೆಯಾಗದ ಪೋಷಣಾ ನಿಧಿ ಕುರಿತು ಮೋದಿ ಸರ್ಕಾರವನ್ನು ಪ್ರಶ್ನಿಸಿದ ಖರ್ಗೆ
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸರ್ಕಾರದ ಐಸಿಎಂಆರ್–ಸಂಪದಾ ವರದಿಯನ್ನು ಉಲ್ಲೇಖಿಸಿದ ಖರ್ಗೆ, ಸಂತಾನೋತ್ಪತ್ತಿ ವಯೋಮಾನದ ಶೇ. 55.9ರಷ್ಟು ಮಹಿಳೆಯರು ಮತ್ತು ಒಂದರಿಂದ ನಾಲ್ಕು ವರ್ಷದೊಳಗಿನ ಶೇ. 42ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಹದಿಹರೆಯದ ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಸುಮಾರು ಮೂರನೇ ಎರಡರಷ್ಟು ಮಂದಿಗೆ ವಿಟಮಿನ್ ಬಿ12 ಕೊರತೆಯಿದೆ. ಸಂತಾನೋತ್ಪತ್ತಿ ವಯೋಮಾನದ ಸುಮಾರು ಶೇ. 30ರಷ್ಟು ಮಹಿಳೆಯರಲ್ಲಿ ಮಧ್ಯಮ ಅಥವಾ ತೀವ್ರ ಸ್ವರೂಪದ ರಕ್ತಹೀನತೆ ಇದೆ ಎಂದೂ ಅವರು ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ಸಂತಾನೋತ್ಪತ್ತಿ ವಯೋಮಾನದ ಶೇ. 66ರಷ್ಟು ಮಹಿಳೆಯರು ಮತ್ತು ಶೇ. 57ರಷ್ಟು ಚಿಕ್ಕ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಆರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್–6) ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ದೇಶದ ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ವಯಸ್ಸಿಗೆ ತಕ್ಕ ತೂಕ ಹೊಂದಿಲ್ಲ ಮತ್ತು ಪ್ರತಿ ಐದು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಕ್ಷಮ್ ಅಂಗನವಾಡಿ, ಪೋಷಣ್ 2.0 ಮತ್ತು ಅವುಗಳ ಹಿಂದಿನ ಯೋಜನೆಗಳಿಗೆ ಆರು ಹಣಕಾಸು ವರ್ಷಗಳಲ್ಲಿ ₹1.13 ಲಕ್ಷ ಕೋಟಿಗೂ ಹೆಚ್ಚು ಹಣ ಬಿಡುಗಡೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ. ಪೋಷಣ್ 2.0 ಅಡಿಯಲ್ಲಿ ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾದ ಮೊತ್ತಕ್ಕೂ ವೆಚ್ಚವಾದ ಮೊತ್ತಕ್ಕೂ ₹2,500 ಕೋಟಿಗೂ ಹೆಚ್ಚಿನ ಅಂತರವಿದೆ ಎಂದು ಅವರು ಆರೋಪಿಸಿದ್ದಾರೆ. ಮೂಲ ಪೋಷಣ್ ಅಭಿಯಾನಕ್ಕೆ ಬಿಡುಗಡೆಯಾದ ಹಣದ ಸುಮಾರು ಶೇ. 44ರಷ್ಟು ಬಳಕೆಯಾಗದೆ ಉಳಿದಿದೆ ಎಂದೂ ಹೇಳಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟ ಪಾಲು 2015–16ರ ಶೇ. 0.96ರಿಂದ 2025–26ರಲ್ಲಿ ಶೇ. 0.50ಕ್ಕೆ ಇಳಿದಿದೆ ಎಂದು ಖರ್ಗೆ ತಿಳಿಸಿದ್ದಾರೆ. ಪೋಷಕಾಂಶಯುಕ್ತ ಅಕ್ಕಿ ವಿತರಣೆ ಮತ್ತು ಕಬ್ಬಿಣಾಂಶ ಪೂರಕ ಕಾರ್ಯಕ್ರಮಗಳ ಹೊರತಾಗಿಯೂ ಪೋಷಕಾಂಶಗಳ ಕೊರತೆ ಮುಂದುವರಿದಿರುವುದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪೋಷಣಾ ಸೇವೆಗಳ ಸಮನ್ವಯ ಮತ್ತು ವಿತರಣೆಯನ್ನು ಸುಧಾರಿಸಲು ಕೇಂದ್ರ ಸರ್ಕಾರ 2018ರಲ್ಲಿ ಪೋಷಣ್ ಅಭಿಯಾನವನ್ನು ಆರಂಭಿಸಿತ್ತು. ಬಳಿಕ ಅದನ್ನು ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಯೋಜನೆಯಡಿ ತರಲಾಯಿತು. ಅಂಗನವಾಡಿಗಳ ಮೂಲಕ ಪೂರಕ ಪೌಷ್ಟಿಕ ಆಹಾರ ನೀಡುವುದು, ಮಕ್ಕಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಪೌಷ್ಟಿಕಾಂಶದ ಕುರಿತು ಅರಿವು ಮೂಡಿಸುವುದು ಈ ಯೋಜನೆಯ ಭಾಗವಾಗಿದೆ.