ರಾಷ್ಟ್ರೀಯ

ಮತದಾರರ ಪಟ್ಟಿಯಿಂದ ಕೇರಳ ಮುಖ್ಯ ಚುನಾವಣಾಧಿಕಾರಿ ಹೆಸರೇ ಮಾಯ !

ಮತದಾರರ ಪಟ್ಟಿಯಿಂದ ಕೇರಳ ಮುಖ್ಯ ಚುನಾವಣಾಧಿಕಾರಿ ಹೆಸರೇ ಮಾಯ !

ತಿರುವನಂತಪುರಂ, ಡಿಸೆಂಬರ್ 8: ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಕೇರಳ ಮುಖ್ಯ ಚುನಾವಣಾಧಿಕಾರಿ (ಸಿಇಒ) ಟೀಕಾ ರಾಮ್ ಮೀನಾ ಅವರ ಹೆಸರು ಸೇರಿಸಿಲ್ಲವಾದ್ದರಿಂದ ರಾಜ್ಯದಲ್ಲಿ ಮಂಗಳವಾರ ನಡೆಯುತ್ತಿರುವ ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಮತ ಚಲಾಯಿಸಲು ಸಾಧ್ಯವಾಗಿಲ್ಲ.

ಹಿಂದಿನ ಲೋಕಸಭಾ ಚುನಾವಣೆ ವೇಳೆ ಮಹಾನಗರ ಪಾಲಿಕೆ ಪ್ರದೇಶದ ಪೂಜಪ್ಪುರ ವಾರ್ಡ್‌ನಲ್ಲಿರುವ ಮತಗಟ್ಟೆಯಲ್ಲಿ  ಮತ ಚಲಾಯಿಸಿದ್ದ ಸಿಇಒ ಅವರಿಗೆ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸದ ಕಾರಣ ಈ ಬಾರಿ ಮತದಾನದ ಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಚುನಾವಣಾಧಿಕಾರಿಯೂ ಆಗಿರುವ ತಿರುವನಂತಪುರಂ ಜಿಲ್ಲಾಧಿಕಾರಿಯವರಿಗೆ ಸಿಇಒ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಈ ವಿಷಯ ಕುರಿತು ಪ್ರತಿಕ್ರಿಯಿಸಿರುವ ಸಿಇಒ ಮೀನಾ,  ‘ಹಿಂದಿನ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಲಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತೆ ಎಂದು ಭಾವಿಸಿದ್ದೆ. ಆದರೆ, ಈ ಬಾರಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ.’ ಎಂದು ಹೇಳಿದ್ದಾರೆ. 

ಸುದ್ದಿ ಓದಿ