ಪುಸ್ತಕಗಳು

ಡಾ. ಪಿ. ಜಿ. ಕೆಂಪಣ್ಣವರ ಅವರ ಲೇಖನ ಸಂಗ್ರಹ "ಅವಲೋಕನ"

ಡಾ. ಪಿ. ಜಿ. ಕೆಂಪಣ್ಣವರ ಅವರ ಲೇಖನ ಸಂಗ್ರಹ  "ಅವಲೋಕನ"

  ಬೆಳಗಾವಿಯ ಸಾಹಿತ್ಯ ಮತ್ತು ವಿದ್ವತ್  ವಲಯದಲ್ಲಿ ಪರಿಚಿತ ಹೆಸರು ಡಾ. ಕೆಂಪಣ್ಣವರ ಅವರದು. ಕಳೆದ ಎರಡು ಮೂರು ದಶಕಗಳಿಂದ ನಿರಂತರ ಸಾಗಿ ಬಂದಿರುವ ಅವರ ಬರವಣಿಗೆ ಅವರ ವಿಶಾಲ ಜೀವನ ದೃಷ್ಟಿ ಮತ್ತು ಅಧ್ಯಯನದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಳ್ಳುತ್ತವೆ.  ಈಚೆಗಷ್ಟೇ ಕುಸ್ತಿಪಟು  ಹಿಂದಕೇಸರಿ ಚಂಬಣ್ಣ  ಮುತ್ನಾಳ ಅವರ ಕುರಿತಾದ ಕೃತಿ ನಮ್ಮ ಓದಿಗೆ ಸಿಕ್ಕಿತ್ತು.  ಕವನ , ಕಥೆ, ಜೀವನ ಚರಿತ್ರೆ, ಅನುವಾದ, ಸಂಪಾದಿತ ಕೃತಿಗಳು , ಸಂಶೋಧನ ಲೇಖನಗಳು ಸೇರಿದಂತೆ ಅವರ ಬರೆಹದ ವ್ಯಾಪ್ತಿ ವಿಸ್ತಾರ ಬಹಳ ದೊಡ್ಡದು. 
              ಪ್ರಸ್ತುತ " ಅವಲೋಕನ"  ಸುಮಾರು ೨೪ ಲೇಖನಗಳು ಭಾಷೆ,  ಸಾಹಿತ್ಯ,  ಸಂಸ್ಕೃತಿಗೆ ಸಂಬಂಧ ಪಟ್ಟಿರುವಂತಹವು. ಅವುಗಳ ವಿಷಯ ವೈವಿಧ್ಯತೆ ಗಮನಿಸಿದಾಗ ಡಾ. ಕೆಂಪಣ್ಣವರ ಅವರ ಓದಿನ ಆಳ ಅಗಲಗಳನ್ನಷ್ಟೇ ಅಲ್ಲ, ಬದುಕಿನ ಸೂಕ್ಷಾತಿಸೂಕ್ಷ್ಮ ಸಂಗತಿಗಳೂ ಅವರ ಬರೆಹಕ್ಕೆ  ವಸ್ತುವಾಗುವುದನ್ನು ಕಾಣಬಹುದಾಗಿದೆ.  ಸಾಹಿತ್ಯಾಭ್ಯಾಸಿಯಾಗಿರುವ ಅವರು ಸಹಜವಾಗಿಯೇ ಹಲವು ಹಿರಿಯ ಸಾಹಿತಿಗಳ ಕೃತಿಗಳನ್ನು ಅವಲೋಕಿಸುವ ಕೆಲಸ ಮಾಡಿದ್ದಾರೆ. ಬಿಎಂಶ್ರೀ ಅವರ "ಹೊಂಗನಸು", ಅಡಿಗರ ಭೂಮಿಗೀತ, ಕಣವಿಯವರ ದೀಪಧಾರಿ, ಮಿರ್ಜಿ ಅಣ್ಣಾರಾಯರ ನಿಸರ್ಗ, ಮದುರಚೆನ್ನರ ಕಾವ್ಯ, ಭುಜೇಂದ್ರ ಮಹಿಷವಾಡಿ, ಅಕಬರ ಅಲಿ, ಕುವೆಂಪು ಅವರ ಕಾವ್ಯ, ಕನ್ನಡ ಕಾದಂಬರಿಗಳಲ್ಲಿ ಹೋರಾಟ ಮೊದಲಾದ ಲೇಖನಗಳ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನುಪರಿಚಯಿಸಿಕೊಡುತ್ತಾರೆ. 
      ಹಾಗೆಯೇ ಸಾಂದರ್ಭಿಕ ಬರೆಹಗಳಲ್ಲಿ ಚಿಕ್ಕೋಡಿ ತಾಲುಕಿನ ಸಾಹಿತ್ಯ ಪರಂಪರೆ, ಬೆಳಗಾವಿ ಜಿಲ್ಲೆಯ ಭಾಷಾ ವೈವಿಧ್ಯತೆ, ವಚನ ಸಾಹಿತ್ಯದಲ್ಲಿ ಕಾಯಕಪ್ರಜ್ಞೆ, ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು, ರಾಯಬಾಗ ತಾಲೂಕಿನ ಸಾಹಿತ್ಯ, ಚಿಕ್ಕೋಡಿ ತಾಲೂಕಿನ ಸಾಹಿತ್ಯ, ಸಾಹಿತ್ಯಸಂತ ಬಿ. ಎ. ಸನದಿ, ಕುಸ್ತಿಕಲೆ ಬೆಳೆದು ಬಂದ ಬಗೆ , ಗ್ರಾಮ ಸಂಸ್ಕೃತಿ ಬಿಂಬಿಸುವ ನನ್ನೂರು ಮೊದಲಾದವು ನಮ್ಮ ಗಮನ ಸೆಳೆಯುವ ಉಪಯುಕ್ತ ಲೇಖನಗಳೆನಿಸುತ್ತವೆ. 
          ಅವರಷ್ಟೇ ಸರಳವಾದ ಶೈಲಿ , ವಿಷಯದ ಸ್ಪಷ್ಟತೆ, ಸಂಶೋಧನಾ ದೃಷ್ಟಿ, ಸಾಹಿತ್ಯ ಸಂಸ್ಕೃತಿಯ ಪ್ರೀತಿ ಇವೆಲ್ಲ ಇವರ ಬರೆಹಗಳಲ್ಲಿ ಎದ್ದು ಕಾಣುವ ಕೆಲವು ಅಂಶಗಳು. ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೆ ತಾವು ಸಾಹಿತ್ಯದ ಕೃಷಿ ಮಾಡುತ್ತ, ಓದುತ್ತ ,  ಬರೆಹಗಾರರ ಬಳಗದಲ್ಲಿ ಬೆರೆತುಕೊಂಡು ಹೋಗುವ ಡಾ. ಕೆಂಪಣ್ಣವರ ಅವರ ಈ  "ಅವಲೋಕನ"  ಅವರಿಂದ ಇನ್ನಷ್ಟು ಹೆಚ್ಚಿನ ಸಾಹಿತ್ಯ ಕೃತಿಗಳನ್ನು ನಿರೀಕ್ಷಿಸುವಂತೆ ಮಾಡುತ್ತದೆ. ಒಂದಿಷ್ಟು ಮಹತ್ವದ ಕೃತಿಗಳನ್ನು ಅವರು ನಮಗೆ ನೀಡಲಿ ಎಂದು ಆಶಿಸುವವರಲ್ಲಿ ನಾನೂ ಒಬ್ಬ. 
                ‌    -ಎಲ್. ಎಸ್. ಶಾಸ್ತ್ರಿ

ಸುದ್ದಿ ಓದಿ