ರಾಣೆಬೆನ್ನೂರ

ಸಾರ್ವಜನಿಕ ಹಿತಾಸಕ್ತಿ; ಕಸಾಪ ಚುನಾವಣೆ ಮುಂದೂಡಿಕೆ

ಸಾರ್ವಜನಿಕ ಹಿತಾಸಕ್ತಿ;  ಕಸಾಪ ಚುನಾವಣೆ ಮುಂದೂಡಿಕೆ

ರಾಣೀಬೆನ್ನೂರ 29: ಸಾರ್ವಜನಿಕ ಹಿತಾಸಕ್ತಿ ಮತ್ತು ಸಹಜ ನ್ಯಾಯದ ಹಿನ್ನಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು  ಮುಂದೂಡಿ ಆದೇಶಿಸಿದ್ದು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಇಲ್ಲಿನ ಸಾಹಿತಿ ಕಸಾಪದ ಅಜೀವ ಸದಸ್ಯ ಜೆ.ಎಂ.ರಾಜಶೇಖರ ತಿಳಿಸಿದ್ದಾರೆ. ಅಲ್ಲದೇ ಚುನಾವಣೆಯನ್ನು ಸಂಪೂರ್ಣವಾಗಿ ರದ್ದು ಮಾಡಿ ಹೊಸದಾಗಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕೆಂದು ವಿಶೇಷ ಕರ್ತವ್ಯಾಧಿಕರಿ ಹಾಗೂ ಪದನಿಮಿತ್ತ ಸರ್ಕಾರದ ಸಹಕಾರ ಇಲಾಖೆಯ ಜಂಟಿ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.   

ಈ ಕುರಿತಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೇಂದ್ರದ ಚುನಾವಣೆ ಅಧಿಕಾರಿಗಳು ಹಾಗೂ ಉಪನಿಬಂಧಕರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿದ ತಾವು ಚುನಾವಣೆ ಘೋಷಣೆ ಪ್ರಕ್ರಿಯೆ ಆರಂಭದಿಂದಲೂ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದೇನೆ ಕಸಾಪ ಚುನಾವಣೆಯನ್ನು ಕೋವಿಡ್‌-19 ಪ್ರಕರಣಗಳ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಇದು ಸಾರ್ವಜನಿಕ ಹಿತ ದೃಷ್ಟಿಯಿಂದ ಯೋಗ್ಯವಾಗಿದೆ. ಆದರೆ ಮತ್ತೊಂದು ಪ್ರಕಟಣೆ ಹೊರಡಿಸಿರುವ ಚುನಾವಣಾ ಅಧಿಕಾರಿಗಳು ಯಾವ ಹಂತದಲ್ಲಿ ಚುನಾವಣೆ ನಿಲ್ಲಿಸಲ್ಪಟ್ಟಿದೆಯೋ ಅದೇ ಹಂತದಿಂದ ಮುಂದೂಡಲಾಗಿದೆ ಎಂದು ವಿವರಿಸಿದ್ದಾರೆ.  

ಈ ಅಂಶವು ಸಹಜ ನ್ಯಾಯದ ವಿರುದ್ದದ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿ ಮಾಡಿರುವ ಆದೇಶವಾಗಿದೆ. ಈಗ ರಾಜ್ಯದಲ್ಲಿ ಮತ ಚಲಾಯಿಸಲು ಸಿದ್ದಪಡಿಸಿರುವ ಮತದಾರರ ಪಟ್ಟಿಯಲ್ಲಿ 50,000ಕ್ಕೂ ಹೆಚ್ಚು ಮತದಾರರು ಮರಣ ಹೊಂದಿದ್ದಾರೆ. ಅಲ್ಲದೇ ಈಗಾಗಲೇ ಕಾನೂನು ಬಾಹಿರವಾಗಿ, ಏಕ ಪಕ್ಷೀಯವಾಗಿ 3 ವರ್ಷದ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಿಕೊಂಡು ದಬ್ಬಾಳಿಕೆ ಮಾಡಿರುವ ಮಾಜಿ ಜಿಲ್ಲಾಧ್ಯಕ್ಷರುಗಳು ರಾಜ್ಯಾದ್ಯಂತ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪುನ: ಸ್ಪರ್ಧೆ ಮಾಡಿದ್ದಾರೆ. ಅವರು ಮೃತ ಮತದಾರರ ಹೆಸರಿನಲ್ಲಿ ನಕಲಿ ಮತದಾನ ಮಾಡಿಸಿಕೊಳ್ಳುವ ಎಲ್ಲಾ ಸಾದ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ಇರುವ ಹಂತದಿಂದಲೇ ಮುಂದೂಡಿದ ಚುನಾವಣೆ ಮಾಡಿದರೆ ಚುನಾವಣೆ ನಡೆಯುವ ಹಂತದ ಹೊತ್ತಿಗೆ ಅರ್ಹರಾಗಿರುವ ಹೊಸ ಮತದಾರರ ಮತದಾನದ ಹಕ್ಕನ್ನು ಅಸ್ವಾಭಾವಿಕವಾಗಿ, ಸಹಜ ನ್ಯಾಯದ ವಿರುದ್ಧವಾಗಿ 5 ವರ್ಷಗಳ ಕಾಲ ಹೊಸಕಿ ಹಾಕಿದಂತಾಗುತ್ತದೆ. ಎಲ್ಲಾ ಪೂರ್ವ ಸಿದ್ಧತೆಗಳು ಮುಗಿದಿದೆ ಎಂಬ ಅಧಿಕಾರ ಶಾಹಿಯ ಹಿತಾಸಕ್ತಿಗಳ ಹಿನ್ನೆಯಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಚುನಾವಣೆಯನ್ನು ಚುನಾವಣೆ ನಿಲ್ಲಿಸಿದ ಹಂತದಿಂದಲೇ ಮುಂದೂಡಿರುವುದರ ಹಿಂದೆ ಪಟ್ಟ ಭದ್ರ ಹಿತಾಸಕ್ತರ ಅಧಿಕಾರ ದಾಹದ ಕುರುಹು ಕಂಡು ಬರುತ್ತಿದೆ ಎಂದಿದ್ದಾರೆ.  

ಚುನಾವಣೆಗೆ ಸ್ಪರ್ಧೆಯ ಅರ್ಹತೆ ಇರುವ ಕೆಲ ಅಭ್ಯರ್ಥಿಗಳನ್ನು ಅನರ್ಹಗೊಳಿಸಿರುವ ಚುನಾವಣಾ ಅಧಿಕಾರಿಗಳು  ನಿಯಮಾವಳಿಗಳನ್ನು ಪಾಲನೆ ಮಾಡುವಲ್ಲಿ ಕರ್ತವ್ಯ ಲೋಪ ಮಾಡಿದ ಪ್ರಕರಣಗಳು ಇವೆ. ಅನರ್ಹಗೊಳಿಸಿದ ಪ್ರಕರಣವನ್ನು ಪ್ರಶ್ನೆ  ಮಾಡಿದರೆ, ಮಾಡಿದವರಿಗೆ ನ್ಯಾಯಾಲಯಕ್ಕೆ ಹೋಗಿ ಎಂದು ಉಡಾಫೆಯಗಿ ಹೇಳಿದ್ದಾರೆ. ತನ್ಮೂಲಕ ಚುನಾವಣಾ ಅಧಿಕಾರಿಗಳು ಸಹ ಅಧಿಕಾರಶಾಹಿಗಳ ಪರವಾಗಿ ಲಾಬಿ ಮಾಡಿರುವುದರ ಪ್ರಕರಣಗಳು ವರದಿಯಾಗಿವೆ. ಈಗಲೇ ಮತದಾನಕ್ಕೆ ಅರ್ಹರಿರುವ ಎಷ್ಟೋ ಮತದಾರರ ಹೆಸರುಗಳೇ ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿವೆ ಎಂಬ ದೂರುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ. ಮುಂದೂಡಿದ ಚುನಾವಣೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಮತದಾರರ ಪಟ್ಟಿಯಲ್ಲಿ ಈಗಿರುವ ಮೃತರ ಹೆಸರುಗಳನ್ನು ತೆಗೆದು ಹಾಕಬೇಕು. ಮತದಾರರ ಪರಿಷ್ಕೃತ ಪಟ್ಟಿ ತಯಾರಿಸಲು ತಹಶೀಲ್ದಾರರ ಕಚೇರಿಯ ಮೂಲಕ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡಬೇಕು. ಹೊಸದಾಗಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. 


ಸುದ್ದಿ ಓದಿ