ಬಳ್ಳಾರಿ

ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕರವೇ ಒತ್ತಾಯ

ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ  ಕರವೇ ಒತ್ತಾಯ

ಬಳ್ಳಾರಿ 29: ಕರ್ನಾಟಕ ರಕ್ಷಣಾ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದವತಿಯಿಂದ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ವಾಡಿಕೆಯಂತೆ ಮಳೆ ಆಗಿಲ್ಲ. ಈಗಾಗಲೇ 236 ತಾಲ್ಲೂಕುಗಳ ಪೈಕಿ 192 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ವಿಶೇಷವಾಗಿ ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರು. ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ ನೀರು ಮಾತ್ರ. ಇಂಥ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸುಮಾರು 7 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಶ್ಚರ್ಯಕರವಾಗಿದೆ, ಆಘಾತಕಾರಿಯಾಗಿದೆ. 

ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೇ ಒಂದೂವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲಗದ್ದೆಗಳಿಗೆ ನೀರಿಲ್ಲ. ಕೈಗಾರಿಕೆಗಳಿಗೆ ಕೊಡಬೇಕಾದ ನೀರಿಲ್ಲ. ಹೀಗಿರುವಾಗ ಏಳು ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ? ಮಂಡ್ಯ ಭಾಗದ ರೈತರು ನೀರಿಗೆ ಏನು ಮಾಡಬೇಕು? ಬೆಂಗಳೂರಿನ ಒಂದೂವರೆ ಕೋಟಿ ಜನರು ಕುಡಿಯುವ ನೀರು ಇಲ್ಲದೆ ಸಾಯಬೇಕೆ?  

ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಪಾಲಿಸಬಾರದು. ನಾಡಿನ ಜನರ ಜೀವಗಳಿಗಿಂತ ಯಾವುದೋ ಪ್ರಾಧಿಕಾರದ ಆದೇಶ ದೊಡ್ಡದಾಗಲು ಹೇಗೆ ಸಾಧ್ಯ? ಈ ಪ್ರಾಧಿಕಾರದ ಆದೇಶ ಪಾಲಿಸಲು ಹೋಗಿ ಅವರು ಕೇಳಿದಷ್ಟು ನೀರನ್ನು ಇದುವರೆಗೆ ಬಿಟ್ಟಿದ್ದೇ ರಾಜ್ಯ ಸರ್ಕಾರದ ದೊಡ್ಡ ತಪ್ಪು. ಈಗಲೂ ಸರ್ಕಾರ ಸ್ಪಷ್ಟ ಧೋರಣೆಯನ್ನು ಪ್ರಕಟಿಸಿದಂತೆ ಕಾಣುತ್ತಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುವುದನ್ನು ಬಿಟ್ಟು ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ದೃಢ ಘೋಷಣೆಯನ್ನು ಮಾಡಬೇಕು.  

ರಾಜ್ಯ ಸರ್ಕಾರ ಮತ್ತೆ ನೀರು ಬಿಟ್ಟರೆ ಕುಡಿಯುವ ನೀರೂ ಇಲ್ಲದೆ ಹಾಹಾಕಾರ ಉಂಟಾಗಲಿದೆ. ಅದರಿಂದ ಆಗುವ ಅನಾಹುತಗಳನ್ನು ಊಹಿಸಲೂ ಸಾಧ್ಯವಿಲ್ಲ. ರಾಜ್ಯದ ಎಲ್ಲ ಸಂಸದರೂ ದೆಹಲಿಯಲ್ಲಿ ಧರಣಿ ನಡೆಸಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ರಾಜೀನಾಮೆ ನೀಡಲೂ ಸಿದ್ಧವಾಗಿರಬೇಕು.  

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶವನ್ನು ಪಾಲಿಸಬಾರದು, ತಮಿಳುನಾಡಿಗೆ ಮತ್ತೆ ನೀರು ಬಿಡಕೂಡದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ. ಒಂದೊಮ್ಮೆ ಸರ್ಕಾರ ಅಂಥ ದುಸ್ಸಾಹಸಕ್ಕೆ ಕೈಹಾಕಿದರೆ ರಾಜ್ಯದ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದವತಿಯಿಂದ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ (ಬೈಪಾಸ್ ರಸ್ತೆಯನ್ನು) ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. 

ಈ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕು ಅಧ್ಯಕ್ಷ ಡಿ.ಕಗ್ಗಲ್ ಶಂಕರ್, ಉಪಾಧ್ಯಕ್ಷರು ಕೆ.ಎಂ.ಶಿವಕುಮಾರ್, ಕಿಶೋರ್‌ಕುಮಾರ್ ವೇಣಿವೀರಾಪುರ, ಬೆಳಗಲ್ಲು ಕೃಷ್ಣ, ತಾರಾನಗರ ಲೋಕೇಶ್, ಪೊಂಪನಗೌಡ, ಕುಡತಿನಿ ಹೋಬಳಿ ಅಧ್ಯಕ್ಷ ಬಾವಿ ಶಿವಕುಮಾರ್, ಚಾನಾಳ್ ಮಲ್ಲಿಕಾರ್ಜುನ, ಮಸ್ಕಿ ಮಹಾಂತೇಶ್, ಜಂಗ್ಲಿಸಾಬ್, ಅಂಜಿ, ಕನಕಗಿರಿ ಭೀಮಯ್ಯ, ಉಚ್ಚಯ್ಯ, ಗಿರಿ ಪಲ್ಲದ್ ಗುರುಬಸಪ್ಪ, ದಿವಕಾರ್, ಶಿವು ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ