ಸರ್ವ ರಂಗದಲ್ಲಿ ಕನ್ನಡ ಭಾಷೆ-ಬರಹ ಬಳಕೆಯಾಗಲಿ: ಬಾರಂಗಿ
ರಾಣೀಬೆನ್ನೂರ 05: ಇಂದಿನ ಯುವ ಸಮುದಾಯ ಆಂಗ್ಲ ಭಾಷಾ ವ್ಯಾಮೋಹಕ್ಕೆ ಸಿಲುಕಿ ನಮ್ಮ ನೈಜ ಸಂಸ್ಕೃತಿಯ ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕನ್ನಡ ಮಾತೃ ಭಾಷೆ ಮರೆಯಾಗುತ್ತಿದೆ ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಚಂದ್ರ್ಪ ಬಾರಂಗಿ ಹೇಳಿದರು. ಅವರು ಇಲ್ಲಿನ ಹಲಗೇರಿ ರಸ್ತೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಿತಿಯು ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ಭಾರತ ರತ್ನ ಡಾ.ಬಿದಾನ್ಚಂದ್ರ ರಾಯ್ ಅವರು ಜನ್ಮ ದಿನೋತ್ಸವದ ಅಂಗವಾಗಿ ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ರೋಗ ಮತ್ತು ರೋಗಿಯ ಚಿಕಿತ್ಸೆ ಫಲಕಾರಿಯಾಗುವುದು ವೈದ್ಯರ ಓಷಧಿ ಅಥವಾ ನೀಡುವ ಚುಚ್ಚು ಮದ್ದಿನಿಂದಲ್ಲ ವೈದ್ಯನ ಸಾಂತ್ವನದ ಮಾತು ಕೂಡಾ ಬಹಳ ಪ್ರಾಮುಖ್ಯತೆ ಹೊಂದುತ್ತದೆ. ಸರ್ಕಾರದ ಆದೇಶದಂತೆ ಸಂಘ-ಸಂಸ್ಥೆಗಳು ಸರ್ಕಾರಿ ಕಚೇರಿಗಳು ಮತ್ತಿತರೆ ಯಾವುದೇ ಸಾರ್ವಜನಿಕ ವ್ಯವಹಾರಿಕ ವಲಯದಲ್ಲಿ ಕನ್ನಡ ಭಾಷೆ ಬರಹ ಜಾರಿಯಾಗಬೇಕಾಗಿದೆ. ಆದರೆ ಆದೇಶವನ್ನು ಉಲ್ಲಂಘಿಸುತ್ತಿರುವುದು ಎಲ್ಲೆಡೆಯೂ ಅಧಿಕವಾಗಿ ಕಾಣುವಂತಾಗಿದೆ ಜನ-ಸಾಮಾನ್ಯರಿಗೆ ವೈದ್ಯರು ಬರೆದುಕೊಡುವ ಓಷಧಿಯ ಚೀಟಿಯಲ್ಲಿ ಆಂಗ್ಲ ಭಾಷೆಯ ಬರಹವೇ ವಿಜೃಂಭಿಸುತ್ತದೆ. ಇದರಿಂದ ಆಂಗ್ಲ ಭಾಷೆಯ ಜ್ಞಾನವಿಲ್ಲದ ಸಾಮಾನ್ಯರಿಗೆ ಅರ್ಥವೇ ಸಿಗುವುದಿಲ್ಲಾ. ಕನ್ನಡ ಭಾಷೆ ಹಾಗೂ ಬರಹವನ್ನು ವೈದ್ಯಕೀಯ ವಲಯದಲ್ಲಿ ಹೆಚ್ಚಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವೈದ್ಯರ ದಿನಾಚರಣೆ ನಿಮಿತ್ಯ ತಾಲೂಕ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಅವರನ್ನು ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು. ಆಸ್ಪತ್ರೆಯ ವೈದ್ಯರಾದ ಡಾ.ಮಂಜುಳಾ ದೈವಜ್ಞ, ಡಾ. ಕಿರಣ ನಾಡಿಗೇರ, ಡಾ. ಗೋವಿಂದ, ಡಾ.ಎಸ್.ಎಸ್.ಗಡಾದ, ಡಾ. ಚಂಪಾ ಎಸ್. ಗಡಾದ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.