ಸಂಕೇಶ್ವರ

ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು

ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ್ರು ಒತ್ತಾಯ: ಸಂಕೇಶ್ವರದಲ್ಲಿ 67ನೆಯ ಕರ್ನಾಟಕ ರಾಜ್ಯೋತ್ಸವ 

ವರದಿ: ಎಂ.ಬಿ.ಘಸ್ತಿ  

ಸಂಕೇಶ್ವರ 06: ಕನ್ನಡಕ್ಕೆ ಇನ್ನೂವರೆಗೆ ತಕ್ಕ ಮಾನ್ಯತೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರದಿಂದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯುತ್ತಿಲ್ಲ.  ದಿವಂಗತ ದೇವರಾಜ ಅರಸು ಮತ್ತು ಆರ್‌.ಗುಂಡೂರಾವ ಸೇರಿದಂತೆ ಅನೇಕ ಮುಖ್ಯಮಂತ್ರಿಗಳು ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ್ರು ವಿಷಾದ ವ್ಯಕ್ತಪಡಿಸಿದರು.   

ಸಂಕೇಶ್ವರದಲ್ಲಿ ನಡೆದ 67 ನೆಯ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಸರೋಜಿನಿ ಮಹಿಷಿ ವರದಿ ಸೇರಿದಂತೆ ಅನೇಕ ವರದಿಗಳ ಜಾರಿಗೆ ಪ್ರಯತ್ನ ನಡೆಯಲಿಲ್ಲ.  ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಪ್ರಾಶಸ್ತ್ಯ ನೀಡಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. 

1984ರಲ್ಲೆ ಕನ್ನಡ ಕಡ್ಡಾಯವಾಗಬೇಕಿತ್ತು. ಆದರೆ ರಾಜ್ಯದ ಉಚ್ಛ ನ್ಯಾಯಾಲಯವು ಪಾಲಕರು ಹೇಗೆ ಹೇಳುತ್ತಾರೆ ಹಾಗೇ ಕೇಳಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.  ವಾದವು ಸರ್ವೋಚ್ಛ ನ್ಯಾಯಾಲಯದ ಮೆಟ್ಟಲೇರಿ 2014 ರಲ್ಲಿ ಕನ್ನಡ ಕಡ್ಡಾಯ ಭಾಷೆ ಮಾಡಬಾರದೆಂದು ತೀರ​‍್ು ನೀಡಿತು.  ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡುವಂತಿಲ್ಲವೆಂದು ತುಂಬಾ ದು:ಖದಿಂದ ಹೇಳಿದರು. 

ಕರ್ನಾಟಕದಲ್ಲಿ ಸಾರ್ವಭೌಮ ಕನ್ನಡವೇ ಕಡ್ಡಾಯ ಇದಕ್ಕಾಗಿ ಹೋರಾಟಕ್ಕಾಗಿ ತಾವು ರಾಜ್ಯದ ತುಂಬೆಲ್ಲ ಸಂಚರಿಸಿದೆವು.  ಕರ್ನಾಟಕ ರಕ್ಷಣಾ ವೇದಿಕೆ ಹುಟ್ಟಿಕೊಂಡು 25 ವರ್ಷಗಳು ಗತಿಸಿದವು.  ಕರ್ನಾಟಕದ ತುಂಬೆಲ್ಲ ಕನ್ನಡ ಚಳುವಳಿ ನಡೆಯಿತು.  ಉತ್ತರ ಕರ್ನಾಟಕದಲ್ಲಿ ಕನ್ನಡದ ಕಿಚ್ಚು ಹೊತ್ತಿತ್ತು.  ರಾಜ್ಯದಲ್ಲಿ ರಕ್ಷಣಾ ವೇದಿಕೆಯ ಸುಮಾರು 13000 ಶಾಖೆಗಳು ಇದ್ದು 65000 ಕನ್ನಡ ಅಭಿಮಾನಿ ಕಾರ್ಯಕರ್ತರ ಸೇನೆ ತಯಾರಿ ಇದೆ.  ಕನ್ನಡಿಗರು ಹೃದಯವಂತರು.  ಪ್ರೀತಿಯಿಂದ ಮಾತನಾಡಿದರೆ ಏನು ಬೇಕಾದರೂ ಮಾಡಬಹುದು.  ಎಲ್ಲರೂ ಅಭಿಮಾನ ಪ್ರೀತಿಯಿಂದ ಬದುಕೋಣ ಎಂದು ಹೇಳಿದರು.   

ತಮಿಳುನಾಡಿನ ಮುಖ್ಯಮಂತ್ರಿ ದಿ. ಎಂ.ಜಿ.ಆರ್‌. ತಮಿಳಿನಾಡಿನಿಂದ ಬೆಂಗಳೂರಿಗೆ ವಲಸೆ ಬಂದ ತಮಿಳರಿಗೆ ಅಲ್ಲಿಯ ಭಾಷೆ ಕಲಿತು ಕನ್ನಡ ನಾಡು ನುಡಿಗೆ ಗೌರವ ತೋರಬೇಕೆಂದು ಹೇಳಿದರು. ಬೆಳಗಾವಿ ಯಾವತ್ತಿದ್ದರೂ ಕನ್ನಡಿಗರದ್ದೆ ಎಂದು ಹೇಳಿದರು.  ಕನ್ನಡದ ಜಲ ನೆಲ ಇದರ ಬಗ್ಗೆ ಯಾರಾದರೂ ತಕರಾರು ಎತ್ತಿದರೆ ದೊಂಬೆ ಗಲಭೆಗಳನ್ನು ಮಾಡಿದರೆ ಅಂತಹವರಿಗೆ ನಾವು ತಕ್ಕ ಪಾಠವನ್ನು ಕಲಿಸುತ್ತೇವೆಂದು ಗುಡುಗಿದರು.  ಈಗಾಗಲೇ ಕನ್ನಡದ ನನ್ನ ಹೋರಾಟದಲ್ಲಿ ನನ್ನ ಮೇಲೆ 45 ಪ್ರಕರಣಗಳು ದಾಖಲಾಗಿರುತ್ತವೆ.  ಜೈಲು ಎಂದರೆ ತಾವೆನೂ ಹೆದರುವವರಲ್ಲ.  ಈಗಾಗಲೇ ಕನ್ನಡಕ್ಕಾಗಿ ಸಾಕಷ್ಟು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ.  ಈ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳ್ಳಲು ಸುಮಾರು 1 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿದ್ದೇನೆ.  ಆದರೆ ನನ್ನ ತಾಯಿ ನಾಡಿಗೆ ಎಂದೂ ದ್ರೋಹ ಮಾಡುವುದಿಲ್ಲವೆಂದು ಒತ್ತಿ ಹೇಳಿದರು.   

ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ಕೊಡಿಸಿದ್ದೇವೆ.  ರೇಲ್ವೆಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದುದ್ದನ್ನು ರದ್ದು ಮಾಡುವಂತೆ ಚಳುವಳಿ ಮಾಡಿ ರದ್ದುಗೊಳಿಸಿ 65 ಸಾವಿರ ಕನ್ನಡಿಗರಿಗೆ ನೇರವಾಗಿ ನೇಮಕಾತಿ ಮಾಡಿಕೊಳ್ಳುವಂತೆ ಮಾಡಿದ್ದೇವೆ.  3800 ಸಂಘಟನೆಗಳು ಇದ್ದು ಹೋರಾಟ ಮಾಡಿ ಕನ್ನಡಕ್ಕಾಗಿ ಹೋರಡುತ್ತಿದ್ದೇವೆ.  ಆದರೆ ಜನಪ್ರತಿನಿಧಿಗಳು ಸರ್ಕಾರಗಳು ಕನ್ನಡಕ್ಕಾಗಿ ಏಕೆ ಪ್ರಯತ್ನ ಮಾಡುತ್ತಿಲ್ಲವೆಂದು ಅಸಮಾಧಾನ ಹೊರಹಾಕಿದರು.  ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತ ಶ್ರೀಮಂತ ಭಾಷೆಯಾಗಿದೆ.  ಕೇವಲ ಓಟ ಬ್ಯಾಂಕ್‌ಗಾಗಿ ರಾಜಕಾರಣಿಗಳು ತಮ್ಮ ಖುರ್ಚಿ ಭದ್ರಪಡಿಸಿಕೊಳ್ಳಲು ಈ ರೀತಿ ಮಾಡುತ್ತಿರುವುದು ಸರಿಯಲ್ಲ.  ಕನ್ನಡಿಗರದ್ದೇ ಒಂದು ದೊಡ್ಡ ಓಟ ಬ್ಯಾಂಕ್ ಇದೆ ಎಂಬುದನ್ನು ಯಾರೂ ಮರೆಯಬಾರದೂ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.  

ಬಳ್ಳಾರಿಯೂ ಕೂಡ ಗಡಿಯ ಆಂದ್ರ​‍್ರದೇಶದಲ್ಲಿ ಹೋಗುವುದರಲ್ಲಿತ್ತು.  ಅಲ್ಲಿಯೂ ಹೋರಾಟ ಮಾಡಿ ಅದನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳಲಾಯಿತು. ಅನೇಕ ವರ್ಷಗಳ ಹಿಂದೆ ಓರ್ವ ಹೆಣ್ಣು ಮಗಳು ಹೋರಾಟ ಮಾಡಿ ಬಳ್ಳಾರಿಯನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ಸನ್ನು ಕಂಡಳು ಎಂದು ಹೇಳಿದರು. 

ನಿಡಸೋಸಿ ಸಿದ್ಧಸಂಸ್ಥಾಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡುತ್ತ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕಿನ ಮುತ್ನಾಳ ಗ್ರಾಮದಲ್ಲಿ ತಾವು ಕಳೆದ 25 ವರ್ಷಗಳಿಂದ ಜ್ಞಾನ ದಾಸೋಹ, ಧರ್ಮ ದಾಸೋಹ ಅನ್ನ ದಾಸೋಹ ಕಾರ್ಯಕ್ರಗಳನ್ನು ನಡೆಸುತ್ತಿದ್ದೇವೆ.  ಅಲ್ಲಿಯ ಜನತೆ ಕನ್ನಡದಲ್ಲಿಯೇ ಮಾತನಾಡುತ್ತಾರೆ.  ತಾವು ಯಾವುದೇ ಭಾಷಯನ್ನು ದ್ವೇಷಿಸುವುದಿಲ್ಲ.  ಆದರೆ ಕನ್ನಡ ಭಾಷೆಯನ್ನು ಪ್ರೀತಿಸುತ್ತೇವೆ.  ಆದ್ದರಿಂದ ಇಂದಿನ ಯುವಕರು ಕನ್ನಡ ಭಾಷಾ ಪ್ರೇಮವನ್ನು ಮರೆಯಬಾರದು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಅಕ್ಕಿ ಇವರು ಮಾತನಾಡುತ್ತ ಕರ್ನಾಟಕ ಏಕೀಕರಣ, ಅಖಂಡ ಕರ್ನಾಟಕ್ಕಾಗಿ ನಡೆಸಿದ ಹೋರಾಟಗಳ ಕುರಿತು ಹೇಳಿದರು.   

ಸಂಕೇಶ್ವರ ಅರಕ್ಷಕ ನೀರೀಕ್ಷಕರು ಪ್ರಲ್ಹಾದ ಚನ್ನಗಿರಿ, ನಾಡ ಕಚೇರಿಯ ಉಪತಹಸೀಲ್ದಾರ ಬಡಚಿಕರ, ಪುರಸಭೆಯ ಮುಖ್ಯಾಧಿಕಾರಿ ರಾಜಶೇಖರ ಚೌಗುಲಾ, ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಪ್ರೀತಮ ಸುಮಾರೆ, ಉಪಾಧ್ಯಕ್ಷ ಆನಂದ ಹರಗಾಪೂರೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಮನ್ನಿಕೇರಿ, ಕಾರ್ಯದರ್ಶಿ ಸಂತೋಷ ಆಲತಗಿ, ಸಹಕಾರ್ಯದರ್ಶಿ ರಮೇಶ ಅಕ್ಕಿವಾಟೆ, ಖಜಾಂಚಿ ಲಕ್ಷ್ಮಣ ಬಾನೆ ಮೊದಲಾದವರು ಉಪಸ್ಥಿತರಿದ್ದರು.   

 ಸಮಾರಂಭವು ನಿಡಸೋಸಿಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು.  ಅಧ್ಯಕ್ಷತೆಯನ್ನು ಮಹಾದಾನಿ ಹಾಗೂ ವೀರಶೈವ ಪಂಚಮ ಸಾಲಿ ಸಮಾಜದ ಅಧ್ಯಕ್ಷರಾದ ಅಪ್ಪಾಸಾಹೇಬ ಶಿರಕೋಳಿ ಇವರು ವಹಿಸಿದ್ದರು. ನಾಡಗೀತೆಯಿಂದ ಆರಂಭಗೊಂಡು ಗಣ್ಯರೆಲ್ಲ ದೀಪ ಪ್ರಜ್ವಲನಗೊಳಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.  ಪ್ರಾರಂಭದಲ್ಲಿ ನ್ಯಾಯವಾದಿ ವಿಕ್ರಮ ಕರನಿಂಗ ಪ್ರಸ್ತಾವಿಕ ನುಡಿಗಳನ್ನು ಹೇಳಿದರು.  ಇನ್ನು ಪ್ರಮೋದ ಹೊಸಮನಿ, ದೀಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ,  ಕನ್ನಡದ ಬಗ್ಗೆ ಮಾತುಗಳನ್ನು ಹೇಳಿದರು.   

ದಸ್ತಗೀರ್ ತೇರಣಿ, ಹುಸೆನಸಾಹೇಬ ಮೋಕಾಸಿ, ಜಿತೇಂದ್ರ ಮರಡಿ ಇನ್ನುಳಿದ ಗಣ್ಯಾತೀಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.  ಮಹೇಶ ಹಟ್ಟಿಹೊಳಿ ಇವರು ಅಭಾರ ಮನ್ನಿಸಿದರು. 


ಸುದ್ದಿ ಓದಿ