ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡವೇ ಮೊದಲ ಆದ್ಯತೆ : ಡಾ.ಪಿ.ಮಹಾದೇವಯ್ಯ
ಹಂಪಿ 01:ಕನ್ನಡ ವಿಶ್ವವಿದ್ಯಾಲಯ ತನ್ನ ವಿಭಾಗಗಳ ಮೂಲಕ ವಿವಿಧ ವಲಯಗಳಲ್ಲಿ ಬಳಕೆಯಾಗುವ ಕನ್ನಡವನ್ನು ತನ್ನ ಶೈಕ್ಷಣಿಕ ವಿಷಯಗಳ ಭಾಗವಾಗಿಯೇ ಪ್ರತಿದಿನವೂ ವೈಯಕ್ತಿಕ ಯೋಜನೆಗಳಲ್ಲಿ, ಸಾಂಸ್ಕೃತಿಕ ಯೋಜನೆಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಕಮ್ಮಟಗಳಲ್ಲಿ, ಅಧ್ಯಯನ ಪ್ರಬಂಧಗಳಲ್ಲಿ ಹೀಗೆ ಎಲ್ಲಾ ರೀತಿಯಲ್ಲೂ ಕನ್ನಡವನ್ನು ಬಳಕೆ ಮಾಡಿಕೊಂಡು ಬರುತ್ತಿದೆ ಎಂದು ಮುಖ್ಯಸ್ಥರು, ಕನ್ನಡ ಭಾಷಾಧ್ಯಯನ ವಿಭಾಗ ಡಾ.ಪಿ.ಮಹಾದೇವಯ್ಯ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಮುಂಭಾಗದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ, ಕನ್ನಡಿಗ, ಕರ್ನಾಟಕ ಈ ಮೂರು ಪರಿಕಲ್ಪನೆಗಳನ್ನು ಸಮರ್ಥವಾಗಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನದ ಆಶಯದ ಭಾಗವಾಗಿಯೇ ಬಳಕೆ ಮಾಡಿಕೊಂಡು ಬಂದಿದೆ.
ಕನ್ನಡಿಗರು ಇರುವವರೆಗೂ ಕನ್ನಡ ಇರುತ್ತದೆ. ಆಟೋ ಸಂಘಗಳಲ್ಲಿ ಮತ್ತು ಚಾಲಕರಲ್ಲಿ ಕನ್ನಡ ನಾಡು ನುಡಿ, ಜನತೆ, ಸಮಾಜದ ಬಗೆಗಿನ ಅಭಿಮಾನ ಮತ್ತು ಪ್ರೇಮವನ್ನು ಕಾಣಬಹುದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ, ಕನ್ನಡ ಭಾಷೆಯಲ್ಲಿಯೇ ಇಂಜಿನಿಯರಿಂಗ್, ವೈದ್ಯಕೀಯ, ತಾಂತ್ರಿಕ, ಮಾಹಿತಿ ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳಲ್ಲಿ ಕನ್ನಡ ಮಾದ್ಯಮದಲ್ಲಿ ಬೋಧನೆ ಮತ್ತು ಅಧ್ಯಯನಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಕನ್ನಡ ವಿಶ್ವವಿದ್ಯಾಲಯ ತನ್ನ ಹೆಸರಿನಲ್ಲಿಯೇ ನಿತ್ಯವೂ ರಾಜ್ಯೋತ್ಸವ ಆಚರಿಸುತ್ತಿದೆ. ಇಲ್ಲಿ ನೆಲೆಸಿರುವ ಮನುಷ್ಯನ ಜೊತೆ ಪ್ರಾಣಿ ಪಕ್ಷಿಗಳ ಕಲರವದಲ್ಲೂ ಕನ್ನಡವನ್ನು ಕೇಳಬಹುದು. ಕನ್ನಡಿಗರು ಭವಿಷ್ಯದಲ್ಲಿ ನೆಮ್ಮದಿ, ಶಾಂತಿ, ಸಹಬಾಳ್ವೆಯಿಂದ ಬಾಳಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್ ಹಾಗೂ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿವಿಧ ವಿಭಾಗದ ಅಧ್ಯಾಪಕರು, ಆಡಳಿತಾಂಗದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.