ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನವಿದೆ
ಲೋಕದರ್ಶನ ವರದಿ
ರಾಣಿಬೆನ್ನೂರ 19: ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನವಿದೆ. ಡಾ. ದ.ರಾ.ಬೇಂದ್ರೆ ಅವರು ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದರೂ ಕಾವ್ಯ ರಚನೆಯಲ್ಲಿ ತಮ್ಮದೆಯಾದ ವಿಶೇಷತೆಯನ್ನು ಮೆರೆದಿದ್ದಾರೆ ಎಂದು ಬಿಎಜೆಎಸ್ಎಸ್ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಹೆಚ್.ಎ.ಭೀಕ್ಷಾವರ್ತಿಮಠ ಹೇಳಿದರು.
ಅವರು ಇತ್ತೀಚಿಗೆ ಇಲ್ಲಿನ ಹಲಗೇರಿ ರಸ್ತೆಯ ಕಾಲೇಜು ಸನದಿ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಿಎಜೆಎಸ್ಎಸ್ ಕಾಲೇಜು ಸಂಯುಕ್ತವಾಗಿ ಆಯೋಜಿಸಿದ್ದ ದ.ರಾ.ಬೇಂದ್ರೆ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಮ್ಮ ವಿದ್ಯಾರ್ಥಿ ಜೀವನದಿಂದಲೇ ಬದುಕಿನುದ್ದಕ್ಕೂ ಕವಿತ್ವವನ್ನು ಮೈಗೂಡಿಸಿಕೊಂಡು ಬಂದಿದ್ದ ಅವರು ಕಾಲಾನುಘಟ್ಟದಲ್ಲಿ ಕಾವ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸುವುದರ ಮೂಲಕ ಈ ನಾಡು ಮತ್ತು ದೇಶ ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಅವರೊಬ್ಬರಾಗಿದ್ದರು ಎಂದ ಭಿಕ್ಷಾವರ್ತಿಮಠ ಅವರು, ಅಧ್ಯಯನ ಮನುಷ್ಯನ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಆತನ ಬುದ್ದಿ ಶಕ್ತಿಯನ್ನು ಪ್ರವರ್ಧ ಮಾನದೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಅಂತಹವರನ್ನು ಸಮಾಜ ಗುರುತಿಸುತ್ತದೆ. ಎನ್ನುವುದಕ್ಕೆ ಡಾಽ ದ.ರಾ.ಬೇಂದ್ರೆ ಅವರು ಸಾಕ್ಷಿಯಾಗಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾಽ ಆರ್.ಎಂ.ಕುಬೇರ್ಪ ಅವರು, ಡಾಽ ದ.ರಾ.ಬೇಂದ್ರೆ ಅವರ ಕಾವ್ಯದಲ್ಲಿ ನೋವು, ನಲಿವು ಸಮಭಾವದಿಂದ ಕೂಡಿದೆ. ಸಮಾಜ ನೀರೀಕ್ಷಿತ ಕಾವ್ಯ ಅವರಿಂದ ಪರಿಪೂರ್ಣವಾಗಿದೆ. ವಿದ್ಯಾರ್ಥಿಗಳು ಅವರ ಕಾವ್ಯದಲ್ಲಿರುವುದನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಭುದ್ದತೆಯನ್ನು ಪಡೆಯಬಹುದಾಗಿದೆ ಎಂದ ಅವರು, ಕೇವಲ ಪಠ್ಯ ಪುಸ್ತಕಕ್ಕೆ ಅಷ್ಟೇ ಸೀಮಿತ ಅಲ್ಲದೇ ಈ ನಾಡಿನ ಎಲ್ಲಾ ಉದ್ದಾಮ ಸಾಹಿತಿಗಳ ಗ್ರಂಥಗಳನ್ನು ಅಧ್ಯಯನ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಾಡಿನ ಜನಪದ ವಿದ್ವಾಂಸ ಕೆ.ಸಿ.ನಾಗರಜ್ಜಿ ಅವರು ದ.ರಾ.ಬೇಂದ್ರೆ ಅವರ ನಾಕು ತಂತಿ ಕಾವ್ಯವನ್ನು ವಿಶ್ಲೇಷಿಸಿ ಹಾಡಿ, ವಿದ್ವಾಂಸರ, ವಿದ್ಯಾರ್ಥಿಗಳ ಗಮನ ಸೆಳೆದರು. ಬೇಂದ್ರೆ ಬದುಕು ಮತ್ತು ಬರಹ ಕುರಿತು ಹೆಚ್.ಹೆಚ್.ಜಾಡರ ಬೇಂದ್ರ ಕಾವ್ಯಗಳಲ್ಲಿ ದಾಪಂತ್ಯ ಜೀವನ ವಿಷಯವಾಗಿ ಗುಡ್ಡಪ್ಪ ಮಾಳಗುಡ್ಡಪ್ಪನವರ, ಬೇಂದ್ರೆ ಕಾವ್ಯಗಳಲ್ಲಿ ನೋವು-ನಲಿವು ಹಿರೇಕೆರೂರಿನ ಪ್ರೊ. ಡಾ. ಕಾಂತೇಶ ಅಂಬಿಗೇರ ಮತ್ತು ರಾಕೇಶ್ಗೌಡ ಕರೇಗೌಡ್ರ ಜೀವನ ಮತ್ತು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾಽ ಕೆ.ಎಚ್.ಮುಕ್ಕಣ್ಣನವರ, ಮಕ್ಕಳ ಸಾಹಿತ್ಯ ವೇದಿಕೆ ಮಾಜಿ ಅಧ್ಯಕ್ಷ ಜೆ.ಎಂ.ಮಠದ, ಮಾಜಿ ಅಧ್ಯಕ್ಷೆ ಎ.ಬಿ.ರತ್ನಮ್ಮ, ಉಪಪ್ರಾಚಾರ್ಯ ದೇವರಾಜ ಹಂಚಿನಮನಿ, ಪ್ರಾಚಾರ್ಯ ಪ್ರಕಾಶ ಬಸಪ್ಪನವರ, ಕಸಾಪ ಪೂರ್ವಾಧ್ಯಕ್ಷೆ ಜಿ.ಸುಂದರಾರಾಮಚಂದ್ರ, ಪ್ರಬಾಕರ ಶಿಗ್ಲಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಾಹಿತಿಗಳು, ಕವಿಗಳು ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು. ಸವಿತಾ ಸಂಗಡಿಗರು ಪ್ರಾರ್ಥಿಸಿದರು. ಜಗದೀಶ ಹುಲ್ಯಾಳ, ಬೇಂದ್ರೆ ಕವನ ವಾಚಿಸಿದರು. ಹೆಚ್.ಹೆಚ್.ಮುದಿಗೌಡ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಶ್ರೀ ರಾಯ್ಕರ್ ನಿರೂಪಿಸಿ ವಂದಿಸಿದರು.