ಹೊಸಪೇಟೆ

ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಮಂಜುನಾಥ ಬೇವಿನಕಟ್ಟಿಯವರ ಸೇವೆ ಅಮೂಲ್ಯ: ಡಾ.ರಾಜಪ್ಪ ದಳವಾಯಿ

ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಮಂಜುನಾಥ ಬೇವಿನಕಟ್ಟಿಯವರ ಸೇವೆ ಅಮೂಲ್ಯ: ಡಾ.ರಾಜಪ್ಪ ದಳವಾಯಿ

50ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ. ಮಾರ್ಗದರ್ಶನ  

ಹೊಸಪೇಟೆ 18: ಡಾ. ಮಂಜುನಾಥ ಬೇವಿನಕಟ್ಟಿಯವರು ವಿದ್ಯಾರ್ಥಿಸ್ನೇಹಿ ಗುರುಗಳು. ಇವರು ತಮ್ಮ ಸೇವಾ ಅವಧಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರು ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳನ್ನು ಮಕ್ಕಳಂತೆ ಪರಿಭಾವಿಸಿ, ಅವರ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ರಾಜಪ್ಪ ದಳವಾಯಿ ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದಿನಾಂಕ 18 ಸಂಶೋಧನಾ ವಿದ್ಯಾರ್ಥಿಗಳು ಆಯೋಜಿಸಿದ್ದ ಆತ್ಮೀಯ ಗುರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರೆದು ಮಾತನಾಡುತ್ತ ವಿಶ್ವವಿದ್ಯಾಲಯಗಳಲ್ಲಿ ಹಲವು ಬಗೆಯ ವ್ಯಕ್ತಿ ವೈಶಿಷ್ಟ್ಯಗಳಿರುತ್ತವೆ, ವೈಪರಿತ್ಯಗಳಿರುತ್ತವೆ. ಈ ವೈಪರಿತ್ಯಗಳ ನಡುವೆ ಗುರು ಶಿಷ್ಯರ ಸಂಬಂಧ ಗಟ್ಟಿಗೊಳ್ಳುವಲ್ಲಿ ಇಬ್ಬರ ನಡುವಿನ ಮನಸ್ಥಿತಿಗಳು ಮುಖ್ಯವಾಗುತ್ತವೆ. ಡಾ.ಮಂಜುನಾಥ ಬೇವಿನಕಟ್ಟಿಯವರು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಶ್ವವಿದ್ಯಾಲಯಕ್ಕೆ ನೀಡಿದ ಸೇವೆ ಅಮೋಘವಾದುದು. ಪ್ರಸ್ತುತ ನಿವೃತ್ತರಾದರೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು ವಿಭಾಗವನ್ನು ತೊರೆದು ನಡೆಯಲು ಹಿಂದೇಟು ಹಾಕುವರು. ಆದರೆ ನಮ್ಮ ಬೇವಿನ ಕಟ್ಟಿಯವರು 15 ದಿನಗಳ ಮುಂಚೆಯೇ ಆ ನಿಟ್ಟಿನಲ್ಲಿ ಸಿದ್ದರಾಗುತ್ತಿರುವುದು ಉತ್ತಮ ಕಾರ್ಯ ಎಂದರು.  

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ.ವಿಜಯ್ ಪೂಣಚ್ಛ ತಂಬಂಡ ಅವರು ಮಾತನಾಡುತ್ತ, ವಿಶ್ವವಿದ್ಯಾಲಯದಲ್ಲಿನ ಸಹದ್ಯೋಗಿಗಳೊಂದಿಗೆ ಸಂಬಂಧ ಎನ್ನುವುದು ಸಂತೋಷದಾಯಕವಾದುದು ಮತ್ತು ಸಂಕೀರ್ಣವಾದುದು. ಡಾ.ಮಂಜುನಾಥ ಬೇವಿನಕಟ್ಟಿಯವರಿಗೆ ವಿಶ್ವವಿದ್ಯಾಲಯದ ನಾಡಿಮಿಡಿತ ತಿಳಿದಿರುವುದು. ಇವರು ಮುಗ್ಧ ಮನಸ್ಸಿನವರು ಮತ್ತು ಸೂಕ್ಷ್ಮ ಸ್ವಭಾವದವರು. ಇವರು ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಆದರೆ ಯಾವುದಕ್ಕೂ ಹೆದರದೇ ನೇರ ನುಡಿಗಳಾನ್ನಾಡುವವರು ಎಂದು ಹೇಳಿದರು. 

ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ.ಚಲುವರಾಜು ಮಾತನಾಡುತ್ತ ಡಾ.ಮಂಜುನಾಥ ಬೇವಿನಕಟ್ಟಿಯವರದು ಹೋರಾಟದ ಮನೋಧರ್ಮ ಮತ್ತು ಪ್ರಗತಿಪರ ಮನೋಧರ್ಮ. ಇವರು ಆರಂಭದಿಂದ ಇಲ್ಲಿಯವರೆಗೆ ವಿಶ್ವವಿದ್ಯಾಲಯದಲ್ಲಿ ಹಲವಾರು ಬಹುದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಿದ್ದು, ಇವರು ನೀಡಿದ ಸೇವೆ ಅಮೂಲ್ಯ ಎಂದರು. 

ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್ ಅವರು ಮಾತನಾಡುತ್ತ, ಜೀವನಪೂರ್ತಿ ಸಂತೋಷ ತಂದುಕೊಡುವ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿ. ಡಾ. ಮಂಜುನಾಥ ಬೇವಿನಕಟ್ಟಿಯವರು ಪ್ರಾಧ್ಯಾಪಕರಾಗಿ ಹೃದಯ ಶ್ರೀಮಂತಿಕೆಯ ಪರಿಸರವನ್ನು ನಿರ್ಮಾಣ ಮಾಡಿದ್ದಾರೆ ಎಂದರು. 

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಗೀತಮ್ಮ ಕೆ. ಅವರು ಮಾತನಾಡುತ್ತ ಡಾ.ಮಂಜುನಾಥ ಬೇವಿನಕಟ್ಟಿಯವರು ಕುಲಸಚಿವರಾಗಿದ್ದಾಗ ನನಗೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮತ್ತು ಅಕ್ಷರದವ್ವ ವಸತಿ ನಿಲಯದ ಮೇಲ್ವಿಚಾರಣೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡುವ ಮೂಲಕ ನಮ್ಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ವಿಭಾಗದ ಪಿಎಚ್‌.ಡಿ ಕುರಿತ ಕೆಲಸ ಕಾರ್ಯಗಳಿಗೂ ಡಾ.ಮಂಜುನಾಥ ಬೇವಿನಕಟ್ಟಿಯವರು ಸಂಪೂರ್ಣ ಬೆಂಬಲ ನೀಡಿದ್ದರು ಎಂದು ತಿಳಿಸಿದರು. 

ಉಪಕುಲಸಚಿವರಾದ ಡಾ.ಎ.ವೆಂಕಟೇಶ ಅವರು ಮಾತನಾಡುತ್ತ ಡಾ.ಮಂಜುನಾಥ ಬೇವಿನಕಟ್ಟಿಯವರು ಪ್ರಾಧ್ಯಾಪಕರಾಗಿ ಅಷ್ಟೇ ಅಲ್ಲದೇ ಆಡಳಿತಾತ್ಮಕವಾಗಿಯೂ ಕೆಲಸ ನಿರ್ವಹಿಸಿರುವರು. ಕುಲಸಚಿವರಾಗಿ ಆಡಳಿತಾಂಗದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಾರೆ. ಬಡ ವಿದ್ಯಾರ್ಥಿಗಳ ಬಗ್ಗೆ ಸದಾ ಕಾಳಜಿಯುಳ್ಳವರು.  

ಪ್ರಸಾರಾಂಗದ ಸಹಾಯಕ ಕುಲಸಚಿವರಾದ ಡಾ.ಎಂ.ಎಂ ಶಿವಪ್ರಕಾಶ್ ಅವರು ಮಾತನಾಡುತ್ತ, ಡಾ.ಮಂಜುನಾಥ ಬೇವಿನಕಟ್ಟಿಯವರು ಯಾವುದೇ ಜಾತಿ, ರಾಜಕೀಯ, ಹಣ ಬೆಂಬಲವಿಲ್ಲದೇ ಬೆಳೆದ ಪ್ರತಿಭೆ. ಇವರು ಹೋರಾಟದ ಮೂಲಕವೇ ಕುಲಸಚಿವರಾದವರು. ಇವರ ಆಡಳಿತ ಅವಧಿಯಲ್ಲಿ ಬೋಧಕೇತರ ಸಿಬ್ಬಂದಿಗಳಿಗೆ ವಸ್ತ್ರ ಸಂಹಿತೆ ಅಳವಡಿಸಿದ್ದು, ಹಳ್ಳಿಕೆರೆಯಿಂದ ವಿಶ್ವವಿದ್ಯಾಲಯಕ್ಕೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದು ಮತ್ತು ಬಿ ಗೇಟ್ ನಿರ್ಮಾಣ ಸೇರಿದಂತೆ ಹಲವಾರು ಭೌತಿಕ ಮತ್ತು ಬೌದ್ಧಿಕ ಕಾರ್ಯಗಳನ್ನು ಮಾಡಿರುವರು ಎಂದು ಹೇಳಿದರು. 

ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಮಂಜುನಾಥ ಬೇವಿನಕಟ್ಟಿಯವರು ಸನ್ಮಾನವನ್ನು ಸ್ವೀಕರಿಸಿ, ಸನ್ಮಾನಿತರ ನುಡಿಗಳಾನ್ನಾಡುತ್ತ ವಿಶ್ವವಿದ್ಯಾಲಯದೊಂದಿಗೆ ನನ್ನ ಸಂಬಂಧ ಸುಧೀರ್ಘವಾದುದು. ಇಲ್ಲಿ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಾನು ನಿರ್ವಹಿಸಲು ಇಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸಹಕಾರ ಮತ್ತು ನನ್ನ ಕುಟುಂಬದ ಸಹಕಾರವೇ ಮುಖ್ಯ ಕಾರಣ ಎಂದು ಹೇಳಬಹುದು. ಕುಟುಂಬದವರ ಸಂಪೂರ್ಣ ಬೆಂಬಲದಿಂದ ನಾನು ಎಲ್ಲವನ್ನು ಧೈರ್ಯವಾಗಿ ನಿಭಾಯಿಸಿರುವೆ. ಅವರಿಗೆ ನನ್ನ ಹ್ಪರ್ತೂಪಕ ಧನ್ಯವಾದಗಳು ಎಂದು ಹೇಳಿದರು.  

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಮಾತನಾಡುತ್ತ ಡಾ.ಮಂಜುನಾಥ ಬೇವಿನಕಟ್ಟಿಯವರು ಪ್ರಾಧ್ಯಾಪಕರಾಗಿ, ಆಡಳಿತಾಂಗದಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವರು. ಇವರು ನಿವೃತ್ತರಾದರು ವಿಶ್ವವಿದ್ಯಾಲಯದೊಂದಿಗಿನ ಬಾಂಧವ್ಯ ನಿರಂತವಾಗಿರುವುದು. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆಶಯ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ