ಚಿಂಚಣಿ ಮಠದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ : ‘ಮುಸ್ಲಿಂ ದೇಹ-ಕನ್ನಡ ಮನಸ್ಸು’ ಪುಸ್ತಕ ಬಿಡುಗಡೆ
ಲೋಕದರ್ಶನ ವರದಿ
ಚಿಕ್ಕೋಡಿ 03: ಇಂದಿನ ಮನುಕುಲ ಕೃತಕ ಬುದ್ದಿಮತ್ತೆಯತ್ತ ಸಾಗುತ್ತಿದೆ. ತಂತ್ರಜ್ಞಾನದ ಆಕ್ರಮಣವನ್ನು ಎದುರಿಸಲು ಏರುಗತಿಯ ತಂತ್ರಾಂಶದ ಮೊರೆ ಹೋಗದೇ ಭವಿಷ್ಯದ ಕನ್ನಡವನ್ನು ಕಟ್ಟಲು ಸಾಧ್ಯವಿಲ್ಲ. ತಾಂತ್ರಿಕತೆಯನ್ನು ಬಳಸಿಕೊಂಡು ಕನ್ನಡ ಭಾಷೆಗೆ ಹೊಸ ಭಾಷ್ಯೆ ಬರೆಯುವ ಅನಿವಾರ್ಯತೆ ಎದುರಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ನಟ, ಟಿ.ಎಸ್.ನಾಗಾಭರಣ ಹೇಳಿದರು.
ತಾಲ್ಲೂಕಿನ ಚಿಂಚಣಿ ಸಿದ್ಧಸಂಸ್ಥಾನಮಠದಲ್ಲಿ ಮಂಗಳವಾರ ಶ್ರೀಮಠದ ಗಡಿಕನ್ನಡಿಗರ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ‘ಮುಸ್ಲಿಂ ದೇಹ-ಕನ್ನಡ ಮನಸ್ಸು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾಗತೀಕರಣ ಹುನ್ನಾರಕ್ಕೆ ಭಾಷೆಯೂ ಈಡಾಗುತ್ತಿದೆ. ಸಾಹಿತ್ಯದಿಂದ ಮಾತ್ರ ಕನ್ನಡ ಉಳಿಸುವುದು ಸಾಧ್ಯವಿಲ್ಲ. ಆಧುನಿಕತೆಗೆ ಅನುಗುಣವಾಗಿ ಕನ್ನಡ ಭಾಷೆಯನ್ನೂ ಕಟ್ಟಲು ತಂತ್ರಾಂಶಗಳನ್ನು ಅವಲಂಬಿಸಬೇಕಾಗಿದೆ. ತಾಂತ್ರಿಕತೆಯನ್ನು ಬಳಸಿಕೊಂಡು ಕನ್ನಡವನ್ನು ಕಟ್ಟಬೇಕಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಯಾರೂ ಭಾಷೆಯ ಬಗೆಗೆ ಕೀಳರಿಮೆ ಪಡಬಾರದು ಎಂದರು.
ಕನ್ನಡ ಪರವಾಗಿ ಸರ್ಕಾರವೂ 331 ಆದೇಶಗಳನ್ನು ಹೊರಡಿಸಿದೆ. ಆದರೆ, ಆಡಳಿತದಲ್ಲಿ ಕನ್ನಡ ಕನ್ನಡ ಎಂಬ ಆದೇಶ ಇಲ್ಲ. 66ನೇ ರಾಜ್ಯೋತ್ಸವ ಸಂದರ್ಭದಲ್ಲಿ ಈ ಮೊದಲು ಕನ್ನಡ ಕಟ್ಟುವ ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ಕನ್ನಡ ಇಂದು ದೊಡ್ಡ ಸ್ಥಾನದಲ್ಲಿರುತ್ತಿತ್ತು. ಹಲವು ಆಕ್ರಮಣಗಳ ಮಧ್ಯೆಯೂ ಸಮುದಾಯದಿಂದಲೇ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರದಿಂದಲೇ ಕನ್ನಡವನ್ನು ಕಟ್ಟುವ ನೀರೀಕ್ಷೆ ಹೊಂದುವದು ಸಮಂಜಸವಲ್ಲ. ಸಮುದಾಯವೇ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ಕನ್ನಡ ಅಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು ನೀಡದೇ ಇದ್ದರೂ ಪರವಾಗಿಲ್ಲ, ಆ ಕೆಲಸಕ್ಕೆ ಅಡ್ಡಿ ಆಗಬಾರದು ಎಂದು ಅವರು ಮನವಿ ಮಾಡಿಕೊಂಡರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡ ನಾಗಾಭರಣ ಅವರು, ಇಂದು ಮಾನವೀಯ ಮೌಲ್ಯಗಳ ಜೊತೆಗೆ ಕಲಾತ್ಮಕ ಕೌಶಲಗಳನ್ನು ಕರಗತ ಮಾಡಿಕೊಂಡು ಬಹುಮುಖ ವ್ಯಕ್ತಿತ್ವ ಮತ್ತು ಕೌಶಲಗಳನ್ನು ಅಳವಡಿಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಚಿಂಚಣಿ ಸಿದ್ಧಸಂಸ್ಥಾನಮಠ ಅಲ್ಲಮಪ್ರಭು ಸ್ವಾಮೀಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಾಖೆಯನ್ನು ಗಡಿಭಾಗದ ನಿಪ್ಪಾಣಿ ಅಥವಾ ಚಿಕ್ಕೋಡಿಯಂತಹ ಪಟ್ಟಣಗಳಿಗೂ ವಿಸ್ತರಿಸಬೇಕು. ಗಡಿನಾಡಿನ ಕನ್ನಡ ಶಾಲೆಗಳಿಗೆ ಸರ್ಕಾರ ಶಕ್ತಿ ತುಂಬಬೇಕು. ಪ್ರಾಧಿಕಾರದ ಅಧ್ಯಕ್ಷರು ಗಡಿಭಾಗಗಳಲ್ಲಿ ಪ್ರವಾಸ ಕೈಗೊಂಡು ಇಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಎಚ್.ಐ.ತಿಮ್ಮಾಪೂರ ಕೃತಿ ಪರಿಚಯ ನೀಡಿದರು. ಚಿಕ್ಕೋಡಿಯ ಸಂಪಾದನ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರಣ್ಣಾ ಕೋರೆ ಆಸ್ಪತ್ರೆಯ ಡಾ. ರಾಜಶೇಖರ, ಸಾಹಿತಿ ಡಾ. ದಯಾನಂದ ನೂಲಿ, ಹಿರಿಯ ಸಾಹಿತಿ ಡಾ. ಸಿ. ಕೆ. ಜೋರಾಪೂರ, ಡಾ. ಸುಬ್ರಾವ ಎಂಟೆತ್ತಿನವರ, ಎಸ್.ಟಿ.ಲಗಾರೆ, ಕೆ.ಬಿ.ಹೊನ್ನಾಯ್ಕ, ಸಂಜು ಬಡಿಗೇರ, ನಾಗೇಶ ಮಾಳಿ, ಮಹಾದೇವ ಬರಗಾಲೆ, ನಿಪ್ಪಾಣಿ ತಹಶೀಲ್ದಾರ ಮೋಹನ ಬಸ್ತಿ, ಬಿಇಓ ರೇವತಿ ಮಠದ ಮತ್ತಿತರರು ಉಪಸ್ಥಿತರಿದ್ದರು.