ಪಟ್ಟಣಕ್ಕೆ 27 ರಂದು ಕನ್ನಡ ಜ್ಯೋತಿ ರಥವು ಆಗಮಿಸಲಿದೆ : ಸಂತೋಷ ಹಿರೇಮಠ
ಶಿಗ್ಗಾವಿ 26: ಮಂಡ್ಯದಲ್ಲಿ ಡಿ. 20 ರಿಂದ ಮೂರು ದಿನಗಳಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ 87 ದಿನಗಳಕಾಲ ನಾಡಿನಾದ್ಯಾಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥವು ದಿ.27 ಮಧ್ಯಾಹ್ನ 2.30 ಕ್ಕೆ ಪಟ್ಟಣಕ್ಕೆ ಆಗಮಿಸಲಿದೆ ಎಂದು ತಹಶೀಲ್ದಾರ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಸುಮಾರು 13 ಕಿ.ಮಿ ಸಂಚಲಿಸಲಿರುವ ಕನ್ನಡ ಜ್ಯೋತಿ ರಥವನ್ನು ಬಂಕಾಪುರದ ಟೋಲ್ ಗೇಟ್ ಬಳಿ ಭವ್ಯವಾಗಿ ಸ್ವಾಗತಿಸಿ, ಶಿಗ್ಗಾವಿ ಪಟ್ಟಣದ ಗಂಗೆಭಾವಿ ಕ್ರಾಸಿನಿಂದ ರಾಣಿ ಚನ್ನಮ್ಮಾ ವೃತ್ತದ ಮಾರ್ಗವಾಗಿ ಹನುಮರಹಳ್ಳಿವರಗೆ ಭವ್ಯವಾಗಿ ಮೆರವಣಿಗೆ ಮಾಡುವ ಮೂಲಕ ತಾಲೂಕಿನ ಜನರಲ್ಲಿ ಸಮ್ಮೆಳನದ ಕುರಿತು ಮತ್ತು ಕನ್ನಡ ನಾಡು ನುಡಿ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಮ್ಮೇಳನಕ್ಕೆ ನಾಡಿನ ಜನರನ್ನು ಆಹ್ವಾನಿಸಲಿದೆ. ತಾಲೂಕಿನ ಹನುಮರಳ್ಳಿಯಿಂದ ಸಂಜೆ 4 ಗಂಟೆಗೆ ಸವಣೂರ ತಾಲೂಕಿಗೆ ಬೀಳ್ಕೊಡಲಾಗುತ್ತದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ನಾಗಪ್ಪಾ ಬೆಂತೂರ ಮಾತನಾಡಿ ಕನ್ನಡ ನುಡಿಯ ಸವಿಯನ್ನು ನಾಡಿನ ಜನತೆಗೆ ಬಡಿಸಲು ಅಲಂಕೃತವಾಗಿರುವ ಕನ್ನಡ ಜ್ಯೋತಿ ರಥವು ಕನ್ನಡಿಗರ ಕಣ್ಮನ ಸೆಳೆಯಲಿದೆ. ಕನ್ನಡ ನುಡಿ ಕಲಿಸುವ ತಾಯಿ ಭುವನೇಶ್ವರಿ, ನಾಡಿಗೆ ಅನ್ನ ನೀಡುವ ಕಾವೇರಿ ಮಾತೆ, ಉಳುಮೆ ಮಾಡಲು ಸಿದ್ಧವಿರುವ ಎತ್ತುಗಳು ಮತ್ತು ರೈತ, ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಸುಂದರ ಆಕೃತಿಗಳು ಸೇರಿದಂತೆ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳೂ ಸೇರಿದಂತೆ ಅನೇಕ ವಿಶೇಷತೆಗಳೊಂದಿಗೆ ಸಾಂಪ್ರಧಾಯಿಕವಾಗಿ ಸಿದ್ದವಾಗಿರುವ ಕನ್ನಡದ ಹೆಮ್ಮೆಯ ಜ್ಯೋತಿ ರಥವನ್ನು ಸಕಲ ವಾಧ್ಯ ಮೇಳಗಳೊಂದಿಗೆ ಅತ್ಯಂತ ಅರ್ಥ ಗರ್ಭಿತವಾಗಿ ಮೆರವಣಿಗೆ ಮಾಡಲಾಗುವುದು ಎಲ್ಲ ಕನ್ನಡ ಮನಗಳು ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಸಭೆಯಲ್ಲಿ ಬಿ.ಇ.ಓ. ಎಂ.ಬಿ. ಅಂಬಿಗೇರ, ಸಂತೋಷ ಪಾಟೀಲ, ಮಲ್ಲಿಕಾರ್ಜುನ ಹಡಪದ, ಶಂಬುಲಿಂಗಪ್ಪಾ ಕೇರಿ, ಈರಣ್ಣಾ ಸಮಗೊಂಡ, ರವಿ ಕಡಕೋಳ, ಪಕ್ಕೀರಾ್ಪ ಕುಂದೂರ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕನ್ನಡಪರ ಹೋರಾಟಗಾರರು, ರೈತಪರ ಹೋರಾಟಗಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರಿದ್ದರು.