ಸೌಂದತ್ತಿ

ಕಳಸಾ ಬಂಡೂರಿ ನಾಲಾ ಹಸಿರು ನಿಶಾನೆ: ಬೇಗನೆ ಕಾಮಗಾರಿ ಆರಂಭಗೊಳ್ಳಲಿ

ಕಳಸಾ ಬಂಡೂರಿ ನಾಲಾ ಹಸಿರು ನಿಶಾನೆ: ಬೇಗನೆ ಕಾಮಗಾರಿ ಆರಂಭಗೊಳ್ಳಲಿ

ಸವದತ್ತಿ: ಅನೇಕ ವರ್ಷಗಳ ಹೋರಾಟದ ಪ್ರತಿಫಲವಾಗಿ ನಮಗೆ ಇಂದು ಕಳಸಾ ಬಂಡೂರಿ ನಾಲಾ ನೀರು ಬಳಕೆ ಮಾಡಲು ಹಸಿರು ನಿಶಾನೆ ಸಿಕ್ಕಿದ್ದು, ಆದಷ್ಟು ಬೇಗನೆ ಕಾಮಗಾರಿ ಆರಂಭಗೊಳ್ಳಲಿ ಎಂದು ಕಳಸಾ ಬಂಡೂರಿ ನಾಲಾ ಜೋಡಣೆಯ ಹೋರಾಟಗಾರ ವಿಜಯ ಕುಲಕರ್ಣಿ ಹೇಳಿದರು. 

ಪಟ್ಟಣದ ಮಾಜಿ ಶಾಸಕರಾದ ದಿ.ರಾಜಣ್ಣ ಮಾಮನಿಯವರ ನಿವಾಸದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮಲಪ್ರಭಾ ನದಿಗೆ ಕಳಸಾ ಬಂಡೂರಿ ಜೋಡಣೆಯಿಂದ ಉತ್ತರಕರ್ನಾಟಕದ ಅನೇಕ ಜಿಲ್ಲೆಗಳ ರೈತರಿಗೆ ವರದಾನವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಉತ್ತಮ ನಿರ್ಧಾರ ತೆಗೆದುಕೊಂಡಿರುವದರಿಂದ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ ಎಂದರು. ಕಳಸಾ ಬಂಡೂರಿ ಹೋರಾಟದಲ್ಲಿ ಅನೇಕ ರಾಜಕೀಯ ಮುಖಂಡರ ಸೇವೆಯಿದ್ದು, ಅದರಲ್ಲಿ ಮಾಜಿ ಶಾಸಕ ದಿ.ರಾಜಣ್ಣ ಮಾಮನಿಯವರ ಪಾತ್ರವು ಸೇರಿದೆ ಎಂದರು. ಸವದತ್ತಿ ತಾಲೂಕಿನಲ್ಲಿ ಮಲಪ್ರಭಾ ನದಿಯ ಪಕ್ಕದಲ್ಲಿರುವಂತ ಸಾವಿರಾರು ಹೆಕ್ಟೇರ ಪ್ರದೇಶ ನೀರಾವರಿಯಿಂದ ವಂಚಿತವಾಗಿದ್ದು, ಅದಕ್ಕೆ ಪ್ರೇರಣೆ ನೀಡಿ ರೈತರ ಬದುಕನ್ನು ಹಸನಾಗಿಸುವಂತ ಕಾರ್ಯ ಸರಕಾರದಿಂದ ನಡೆಯಬೇಕಿರುವದರಿಂದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಉದ್ದಿಮೆದಾರರ ಕೋಟ್ಯಂತರ ರೂ.ಗಳ ಸಾಲವನ್ನು ಮನ್ನಾ ಮಾಡಿದ್ದು, ಅದರಂತೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ರೈತರ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕೆಂದರು. 

ವಿರುಪಾಕ್ಷ ಮಾಮನಿ ಮಾತನಾಡಿ, ಸವದತ್ತಿ ತಾಲೂಕಿನ ರೈತರಿಗೆ ಸರಕಾರವು ವಿಶೇಷವಾದಂತ ಎರಡು ಕೊಡುಗೆಗಳನ್ನು ನೀಡಿದ್ದು, ಸತ್ತಿಗೇರಿ ಏತ ನೀರಾವರಿ ಮತ್ತು ಕಳಸಾ ಬಂಡೂರಿ ನಾಲಾ ಯೋಜನೆಗಳಿಗೆ ಅನುಮೋದನೆ ನೀಡಿ ನಮ್ಮ ಭಾಗದ ರೈತರಿಗೆ ಅನಕೂಲ ಕಲ್ಪಿಸಲಾಗಿದೆ ಎಂದರು. ನಾಲ್ಕೈದು ದಶಕಗಳ ಹೋರಾಟಕ್ಕೆ ಸರಕಾರ ಇಂದು ನ್ಯಾಯ ಸಮ್ಮತವಾದ ತೀರ​‍್ಪನನು ನೀಡಿರುವುದರಿಂದ ಇಂದು ನಾವು ಹರ್ಷಿತರಾಗಿದ್ದೇವೆ ಎಂದರು. ಪಟ್ಟಣದಲ್ಲಿ ಸಹೋದರ ದಿ.ಆನಂದ ಮಾಮನಿಯವರ ಪ್ರಯತ್ನದಿಂದ ನಿರಂತರ ಕುಡಿಯುವ ನೀರಿನ ಯೋಜನೆಯು ಇಂದು ಟೆಂಡರ ಹಂತದಲ್ಲಿದ್ದು, 80 ಕೋಟಿ ರೂ.ಗಳಲ್ಲಿ ಜಾಕವೆಲ್‌ಗಳ ದುರಸ್ಥಿ ಕಾರ್ಯಗಳು ಪ್ರಗತಿಯತ್ತ ಸಾಗಲಿವೆ ಎಂದರು. 

ಶಿವಾನಂದ ಮೇಟಿ, ಜಗದೀಶ ಕೌಜಗೇರಿ, ನಾಗೇಶನವರ, ಸುನೀಲ ಮಾಮನಿ, ಬಸವರಾಜ ಪುಟ್ಟಿ, ರಾಮನಗೌಡ ಗಿದಿಗೌಡರ, ಮಲ್ಲಿಕಾರ್ಜುನ ಬೀಳಗಿ ಇತರರು ಉಪಸ್ಥಿತರಿದ್ದರು. 

ಸವದತ್ತಿಯ ಮಾಜಿ ಶಾಸಕ ದಿ.ರಾಜಣ್ಣ ಮಾಮನಿಯವರ ನಿವಾಸದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿದರು. 


ಸುದ್ದಿ ಓದಿ