ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಅರಿಕೇರಿ
ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಅರಿಕೇರಿ
ರಾಣೆಬೆನ್ನೂರು, ಸೆ. 12: ಮಾನವನ ದೇಹದ ಎಲ್ಲ ಅಂಗಗಳ ಪೈಕಿ ಕಣ್ಣು ಜಗತ್ತನ್ನು ಕಾಣುವ ಅತ್ಯಂತ ಮಹತ್ವದ ಅಂಗವಾಗಿದೆ. ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಂತೆ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಬೇಕು. ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ಲಯನ್ಸ್ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ ಹೇಳಿದರು.
ನಗರದ ಲಯನ್ಸ್ ಭವನದಲ್ಲಿ ಶನಿವಾರ ಕಂಚಿ ಕಾಮಕೋಟಿ ಮೆಡಿಕಲ್ ಶಂಕರ ಕಣ್ಣಿನ ಆಸ್ಪತ್ರೆ, ಸ್ವಾಕರವೇ, ವಿದ್ಯಾಶಂಕರ್ ಸೇವಾ ಟ್ರಸ್ಟ್ ಹಾಗೂ ಸರ್ಕಾರಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಸೇವಾ ಸಂಸ್ಥೆ ಜನಸೇವೆಗೆ ಸದಾ ಮುಂದಾಗಿದ್ದು, ಅಂಧತ್ವದ ಸಮಸ್ಯೆ ಎದುರಿಸುತ್ತಿರುವ ಜನರು ಬೆಳಕಿನ ಬದುಕಿನತ್ತ ಸಾಗುವಂತೆ ಮಾಡುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ. ಪ್ರತಿತಿಂಗಳು ನಡೆಯುವ ನೇತ್ರ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಂಡು, ಅಗತ್ಯವಿದ್ದವರು ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭುಲಿಂಗಪ್ಪ ಹಲಗೇರಿ, ಪ್ರತಿ ತಿಂಗಳ ಎರಡನೇ ವಾರದಲ್ಲಿ ನೇತ್ರ ತಪಾಸಣೆ ಹಾಗೂ ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಅಕ್ಟೋಬರ್ನಲ್ಲಿ ನಡೆಯಲಿರುವ ಸೇವಾ ಸಪ್ತಾಹದ ಅಂಗವಾಗಿ 3 ಮತ್ತು 4ರಂದು ಎರಡು ದಿನಗಳ ಕಾಲ ಕೃತಕ ಕಾಲು ಮತ್ತು ಕೈ ಜೋಡಣಾ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ 122ಕ್ಕೂ ಹೆಚ್ಚು ನಾಗರಿಕರು ನೇತ್ರ ತಪಾಸಣೆಗೆ ಒಳಗಾಗಿದ್ದು, 46 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.
ವೇದಿಕೆಯಲ್ಲಿ ಕೊಟ್ರೇಶಪ್ಪ ಎಮ್ಮಿ, ನಿತ್ಯಾನಂದ ಕುಂದಾಪುರ, ಅಶೋಕ ಹೂಟ್ಟಿಗೌಡರ, ಮಹೇಶ್ ಅಡಿವಪ್ಪನವರ, ಎಸ್.ಟಿ. ವೀರಣ್ಣ, ಶಿವಪ್ಪ ಗುರಿಕಾರ, ಶಿವಾನಂದ ಸುಣಗಾರ, ರುದ್ರಮುನಿ ಎಲಿ, ನೀಡ್ಸ್ ಎಚ್.ಎಫ್. ಅಕ್ಕಿ, ಪರಶುರಾಮ ಕುರುವತ್ತಿ, ಶಂಕರ ಆಸ್ಪತ್ರೆ ವೈದ್ಯೆ ಡಾ. ಪ್ರಜಕ್ತಾ, ವ್ಯವಸ್ಥಾಪಕ ಪ್ರಶಾಂತ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕು. ಪ್ರಗತಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಆರಿ್ವ. ಸುರಗೊಂಡ ಸ್ವಾಗತಿಸಿದರು. ಎಂ.ಎಚ್. ಪಾಟೀಲ ನಿರೂಪಿಸಿದರು. ಜಿ.ಎಂ. ಬಿದರಿ ವಂದಿಸಿದರು.